ತಲಗದ್ದೆಯಲ್ಲಿ ಸುರಂಗ ಪತ್ತೆ!

ವಿಜಯವಾಣಿ ಸುದ್ದಿಜಾಲ ಕುಮಟಾ

ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಬಂಡಿವಾಳದ ತಲಗದ್ದೆಯ ಒಳಬೇಣದಲ್ಲಿ ಶನಿವಾರ ಸಂಜೆ ಬೃಹತ್ ಸುರಂಗವೊಂದು ಪತ್ತೆಯಾಗಿದ್ದು, ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಈ ಬಗ್ಗೆ ಸ್ಥಳೀಯರು ಹೇಳುವ ಪ್ರಕಾರ, ಕಟ್ಟಡ ನಿರ್ವಣಕ್ಕೆ ಬೇಕಾದ ಕೆಂಪುಕಲ್ಲು ತೆಗೆಯಲು ಬರುತ್ತದೆಯೇ ಎಂದು ಪರೀಕ್ಷಿಸಲು ಜಾಗ ಸ್ವಚ್ಛಗೊಳಿಸುವ ವೇಳೆ ಭೂಮಿಯೊಳಗೆ ವಿಶಾಲವಾದ ಟೊಳ್ಳು ಇರುವುದು ಗಮನಕ್ಕೆ ಬಂದಿದೆ. ನೆಲವನ್ನು ಯಂತ್ರದಲ್ಲಿ ಕೊರೆಯುವಾಗ ಸುರಂಗದ ಮೇಲ್ಭಾಗ ಸೀಳಿಕೊಂಡು ರಂಧ್ರವಾಗಿದೆ. ರಂಧ್ರವನ್ನು ದೊಡ್ಡದು ಮಾಡಿ ಜನ ಸುರಂಗದ ಒಳಗಿಳಿದು ಪರಿಶೀಲಿಸಿದ್ದಾರೆ.

ಇದೊಂದು ಮಾನವ ಗಾತ್ರದ ಸುರಂಗವಾಗಿದ್ದು, ಒಳಗೆ ಹೆಡ್​ಲೈಟ್ ಬೆಳಕು ಫರ್ಲಾಂಗ್​ಗಟ್ಟಲೆ ದೂರಕ್ಕೆ ಹೋಗುತ್ತದೆ. ಉಸಿರಾಡಲು ಕಷ್ಟವಾಗುವುದರಿಂದ ಅಪಾಯದ ಭಯವಿದೆ. ಸುರಂಗ ಎಷ್ಟು ಉದ್ದವಿದೆ ಎಂದು ನೋಡಲು ಸಾಧ್ಯವಾಗಿಲ್ಲ. ಸುರಂಗದ ಗೋಡೆಗಳು ಸಪಾಟಾಗಿದ್ದು ಮಳೆಗಾಲದಲ್ಲಿ ಬೃಹತ್ ನೀರಿನ ಹರಿವಿನ ಲಕ್ಷಣ ಹೊಂದಿದೆ ಎಂದಿದ್ದಾರೆ.

ಈ ಕುರಿತು ಸ್ಥಳೀಯ ನಿವಾಸಿ ಜಿ.ಎಸ್. ಹೆಬ್ಬಾರ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ‘ಕೆಂಪುಕಲ್ಲು ತೆಗೆಯಲು ಬೇಣದ ಜಾಗ ಸ್ವಚ್ಛಗೊಳಿಸುವ ವೇಳೆ ಇಲ್ಲಿ ಕಂಡುಬಂದ ಸುರಂಗದ ವಿಶಾಲತೆ ಅಚ್ಚರಿ ಮೂಡಿಸಿದೆ. ಸುರಂಗವು ಲ್ಯಾಟರೈಟ್ ಕಲ್ಲಿನದಾಗಿದ್ದು, ಸುರಂಗಕ್ಕೆ ಐತಿಹಾಸಿಕ ಹಿನ್ನೆಲೆ ಇದೆಯೋ ಅಥವಾ ನೈಸರ್ಗಿಕವೋ ಗೊತ್ತಿಲ್ಲ. ಸುರಂಗ ಎಲ್ಲಿಂದ ಎಲ್ಲಿಯವರೆಗೆ ಇದೆ ಎಂಬುದನ್ನು ತಜ್ಞರೇ ಕಂಡುಹಿಡಿಯಬೇಕಿದೆ’ ಎಂದಿದ್ದಾರೆ.

ಅಳಕೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜಾಶ್ರಯದ ಕೆಲ ಪುರಾತನ ದೇವಾಲಯಗಳಿದ್ದು, ಈಗ ಕಂಡು ಬಂದ ಸುರಂಗ ಮಾನವ ನಿರ್ವಿುತವೇ ಇರಬಹುದೆಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ, ಭೂಮಿಯೊಳಗೆ ನೀರಿನ ಹರಿವಿನ ನೈಸರ್ಗಿಕ ಟೊಳ್ಳು ಇದು ಎಂಬುದು ಮೇಲ್ನೋಟಕ್ಕೆ ಅರ್ಥವಾಗುವಂಥದ್ದು ಎಂಬುದು ಊರಿನ ಹಿರಿಯರ ಅಭಿಪ್ರಾಯ. ಒಟ್ಟಾರೆ ಬಂಡಿವಾಳ ತಲಗದ್ದೆಯ ಸುರಂಗ ಜನರ ಆಕರ್ಷಣೆಯ ಕೇಂದ್ರವಾಗಿದೆ.

Leave a Reply

Your email address will not be published. Required fields are marked *