ತೇರದಾಳ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಮಧ್ಯಾಹ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ನೂರಾರು ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಮನ ಸೆಳೆಯಿತು. ಸ್ವಯಂಸೇವಕರು ಅತ್ಯಂತ ಶಿಸ್ತು ಮತ್ತು ಶ್ರದ್ಧೆಯಿಂದ ಹೆಜ್ಜೆ ಹಾಕಿದರು.
ಎಪಿಎಂಸಿಯಿಂದ ಆರಂಭಗೊಂಡ ಪಥಸಂಚಲನ ಡಚ್ ಬಡಾವಣೆ, ದಾನಿಗೊಂಡ ಆಸ್ಪತ್ರೆ, ಮಹಾವೀರ ವೃತ್ತ, ಗುರುಕುಲ ರಸ್ತೆ, ವಿವೇಕಾನಂದ ಬಡಾವಣೆ, ದೇವರಾಜನಗರ ಸರ್ಕಾರಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ಮಹಾವೀರ ಆಸ್ಪತ್ರೆ, ಬಸ್ ನಿಲ್ದಾಣ, ದತ್ತ ದೇವಸ್ಥಾನ, ಚಾವಡಿ ವೃತ್ತ, ಅಂಚೆ ಕಚೇರಿ, ಯಲ್ಲಮ್ಮನ ದೇವಸ್ಥಾನ, ಬಿರಡಿ ಗಲ್ಲಿ, ಜೋಳದ ಬಜಾರ, ಜವಳಿ ಬಜಾರ ಮೂರ್ಗವಾಗಿ ಸಿದ್ಧೇಶ್ವರ ದೇವಸ್ಥಾನ ತಲುಪಿತು.
ಖಾಕಿ ಬಣ್ಣದ ಪ್ಯಾಂಟ್, ಬಿಳಿ ಅಂಗಿ, ಕರಿ ಬಣ್ಣದ ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದಿದ್ದ ನೂರಾರು ಸ್ವಯಂಸೇವಕರು ಘೋಷ್ ವಾದ್ಯದೊಂದಿಗೆ ಕವಾಯತ್ತಿನಲ್ಲಿ ಸಾಗಿದರು. ಮಾರ್ಗದುದ್ದಕ್ಕೂ ಸ್ವಯಂಸೇವಕರ ಶಿಸ್ತುಬದ್ಧ ಪಥಸಂಚಲನ ನೋಡುಗರ ಮನ ಸೆಳೆಯಿತು. ರಸ್ತೆಗಳ ಅಕ್ಕ-ಪಕ್ಕ, ತಿರುವು, ವೃತ್ತ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಮಹಿಳೆಯರು ಪುಷ್ಪ ಸಮರ್ಪಿಸಿ ಭಾರತ ಮಾತಾಕೀ ಜೈ ಎಂಬ ಘೋಷಣೆ ಮೊಳಗಿಸಿದರು.
ಪಥಸಂಚಲನ ಸಾಗುವ ಮಾರ್ಗಗಳು ತಳಿರು, ತೋರಣ, ರಂಗೋಲಿ ಚಿತ್ತಾರಗಳಿಂದ ಅಲಂಕಾರಗೊಂಡಿದ್ದವು. ಭಾರತ ಮಾತೆ ಸೇರಿ ಮಕ್ಕಳು ವಿವಿಧ ಛದ್ಮವೇಷ ಧರಿಸಿ ಸಂಭ್ರಮಿಸಿದರು. ಮಹಿಳೆಯರು ಪಥಸಂಚಲನಕ್ಕೆ ಆರತಿ ಬೆಳಗಿ ಸಾಂಪ್ರದಾಯಿಕ ಗೌರವ ಸಲ್ಲಿಸಿದರು.
ಪಥಸಂಚಲನದ ಮಾರ್ಗದುದ್ದಕ್ಕೂ ಭಾರಿ ಪೊಲೀಸ್ ಭದ್ರತೆ ಹಾಕಲಾಗಿತ್ತು. ಗಣವೇಷಧಾರಿಗಳ ಮೆರವಣಿಗೆ ಮೇಲೆ ಪೊಲೀಸ್ ಇಲಾಖೆ ಕಣ್ಗಾವಲಿಟ್ಟಿತ್ತು.
ಡಿವೈಎಸ್ಪಿ ಶಾಂತವೀರ ಈ. ನೇತೃತ್ವದಲ್ಲಿ ಸಿಪಿಐ ಸಂಜೀವ ಬಳಗಾರ, ಮುಧೋಳ, ಜಮಖಂಡಿ ಸಿಪಿಐಗಳು ಮತ್ತು ವಿವಿಧ ಠಾಣೆಗಳ ಪಿಎಸ್‌ಐಗಳು ಹಾಗೂ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಪಾಲ್ಗೊಂಡಿದ್ದರು.
ಇದೆ ಮೊದಲ ಬಾರಿಗೆ ದೇವರಾಜನಗರ ಭಾಗದಲ್ಲಿ ಪಥಸಂಚಲನ ಆಯೋಜಿಸಿರುವುದು ಆ ಭಾಗದ ಜನತೆಗೆ ಹಬ್ಬದ ವಾತಾವರಣ ನಿರ್ಮಿಸಿತ್ತು.