ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಹತ್ತಿಕುಣಿ ಕ್ರಾಸ್ನಲ್ಲಿರುವ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತಿದೆ.
ಯಾದಗಿರಿ ಜಿಲ್ಲಾ ಕೇಂದ್ರವಾಗಿ 11 ವರ್ಷ ಕಳೆದರೂ ಸುಸಜ್ಜಿತ ತರಕಾರಿ ಮಾರುಕಟ್ಟೆ ಇಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಐದು ವರ್ಷದ ಹಿಂದೆ ನಗರಸಭೆ 4 ಕೋಟಿ ರೂ. ವೆಚ್ಚದಲ್ಲಿ ಎರಡು ಎಕರೆ ವಿಶಾಲ ಸ್ಥಳವಿರುವ ಹಳೆಯ ಮಾರುಕಟ್ಟೆ ಸ್ಥಳದಲ್ಲೇ ಹೊಸದಾಗಿ ಸುಸಜ್ಜಿತ ಮಾರ್ಕೆಟ್ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿತ್ತು. ಸರ್ಕಾರದಿಂದ ಅನುದಾನ ಕೂಡ ಮಂಜೂರಾಗಿರುವ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಹಳೆಯ ಮಾರುಕಟ್ಟೆಯನ್ನು ತೆರವುಗೊಳಿಸಲಾಗಿದೆ.
ಆದರೆ ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಹಿಡಿದ ಗ್ರಹಣ ಮಾತ್ರ ಇದುವರೆಗೆ ಬಿಡದಿರುವುದರಿಂದ ನೂರಾರು ವ್ಯಾಪಾರಿಗಳು ನಿತ್ಯ ತೊಂದರೆ ಎದುರಿಸುವಂತಾಗಿದೆ. ಹೊಸ ಮಾರುಕಟ್ಟೆ ನಿಮರ್ಾಣಗೊಂಡ ನಂತರ ನಗರಸಭೆ ಮಳಿಗೆಗಳನ್ನು ಹರಾಜು ಹಾಕುತ್ತದೆ. ಮುಂದಿನ ಭಾಗದಲ್ಲಿನ ಮಳಿಗೆಗಳು ನಮಗೇ ಬೇಕು ಎಂದು ಕೆಲ ವ್ಯಾಪಾರಿಗಳು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ಕಾಮಗಾರಿ ಆರಂಭಿಸದೆ ಅಷ್ಟಕ್ಕೆ ನಿಲ್ಲಿಸಲಾಗಿದೆ.
ಇದರಿಂದ ಪ್ರತಿನಿತ್ಯ ಮಾರುಕಟ್ಟೆ ಎದುರಿನ ಮುಖ್ಯ ರಸ್ತೆಯಲ್ಲೇ ತರಕಾರಿ ಮಾರಾಟ-ಖರೀದಿ ನಡೆದಿದೆ. ಸೇಡಂ-ಯಾದಗಿರಿ ಹೆದ್ದಾರಿಯಲ್ಲಿ ಮಾರುಕಟ್ಟೆ ಇದ್ದು, ನಿತ್ಯ ನೂರಾರು ಲಾರಿಗಳ ಸಂಚಾರದಿಂದ ವಾಹನ ದಟ್ಟಣೆ ಹೆಚ್ಚಾಗಿ ರಸ್ತೆಯ ಧೂಳು ತರಕಾರಿ ಮೇಲೆ ಹರಡುತ್ತಿದೆ. ಆದರೂ ಅನಿವಾರ್ಯ ಎನ್ನುವಂತೆ ಗ್ರಾಹಕರು ಈ ತರಕಾರಿಯನ್ನೇ ಖರೀದಿಸಬೇಕಿದೆ. ಬೆಳಗ್ಗಿನ ಸಮಯದಲ್ಲಿ ತಾಜಾ ಸಿಗುವುದರಿಂದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಾರೆ. ಆದರೆ ಅಷ್ಟರೊಳಗೆ ತರಕಾರಿ ಮೇಲೆ ಧೂಳು ಆವರಿಸಿರುತ್ತದೆ. ಇದರಿಂದ ಕೆಲವರು ತರಕಾರಿ ಕೊಳ್ಳದೆ ವಾಪಸ್ ತೆರಳುವಂತಾಗಿದೆ.
ಕರೊನಾ ಸಂದರ್ಭದಲ್ಲಿ ಸ್ಥಳೀಯಾಡಳಿತ ಬಾಲಾಜಿ ಮಂದಿರ ಸಮೀಪದ ನಿವೇಶನದಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಿತ್ತು. ಕೆಲ ದಿನಗಳ ಕಾಲ ಇಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತಾದರೂ ಬರುಬರುತ್ತ ಜನತೆ ಆ ಪ್ರದೇಶಕ್ಕೆ ಹೋಗುವುದು ಕಮ್ಮಿಯಾದ ಕಾರಣ ವ್ಯಾಪಾರಸ್ಥರು ಅನಿವಾರ್ಯವಾಗಿ ಹಳೆಯ ಮಾರುಕಟ್ಟೆ ಎದುರಿನ ಪ್ರದೇಶದಲ್ಲಿ ವಹಿವಾಟು ಮುಂದುವರಿಸಿದ್ದಾರೆ.
ಮಾರುಕಟ್ಟೆ ಪ್ರದೇಶದಲ್ಲಿ ಬೆಳಗ್ಗೆ ಜನ ಹೆಚ್ಚಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಸಾಮಾನ್ಯವಾಗಿದೆ. ಬೈಕ್ ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಸವಾರರು ನಿತ್ಯ ಪರೇಶಾನ್ ಆಗುವಂತಾಗಿದೆ. ಇದೇ ಸ್ಥಳದಲ್ಲಿ ಮೀನು ಸಹ ಮಾರಾಟ ಮಾಡುವುದರಿಂದ ಹಂದಿ, ನಾಯಿಗಳ ಕಾಟ ಹೆಚ್ಚಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ತರಕಾರಿ ಮಾರುಕಟ್ಟೆ ನಿಮರ್ಾಣ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ಕೊಡಿಸುವುದು ಜರೂರಿ ಎನಿಸಿದೆ.
ಖಜಾನೆಯಲ್ಲಿ ಕೊಳೆಯುತ್ತಿದೆ ಅನುದಾನ
ಯಾದಗಿರಿ ನಗರ ದಿನೇದಿನೆ ಬೆಳೆಯುತ್ತಿದೆ. ಜನರ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸಬೇಕಿದೆ. ವಿಶಾಲ ಪ್ರಾಂಗಣದಲ್ಲಿ ಸುಸಜ್ಜಿತ ಮಾರ್ಕೆಟ್ ನಿರ್ಮಾಣಕ್ಕಾಗಿ ಮೀಸಲಿಟ್ಟ 4 ಕೋಟಿ ರೂ. ಅನುದಾನ ಖಜಾನೆಯಲ್ಲಿ ಕೊಳೆಯುತ್ತಿದೆ. ಕೆಲ ಸಂದರ್ಭದಲ್ಲಿ ಬೇಕು ಎಂದರೂ ಸಕರ್ಾರ ಹಣ ಕೊಡಲ್ಲ. ಆದರೆ ಅನಾಯಾಸವಾಗಿ ಬಿಡುಗಡೆಯಾದ ಅನುದಾನವನ್ನು ನಗರಸಭೆ ಆಡಳಿತಯಂತ್ರ ಸದುಪಯೋಗ ಮಾಡಿಕೊಳ್ಳದಿರುವುದು ವಿಚಿತ್ರ.