ತರಕಾರಿ ಬೆಲೆ ದಿಢೀರ್ ಏರಿಕೆ!

ಹುಬ್ಬಳ್ಳಿ: ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಇತ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯೂ ಏರುತ್ತಲೇ ಇದೆ. ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ತರಕಾರಿ ಬೆಲೆ ಹೆಚ್ಚಳವಾಗಿದ್ದರೂ ರೈತರು ಖುಷಿ ಪಡುವಂತಿಲ್ಲ. ಏಕೆಂದರೆ ಅಂತರ್ಜಲ ಕುಸಿತದಿಂದ ರೈತರ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.

ರಾಜ್ಯ ಸರ್ಕಾರ ಈಗಾಗಲೇ ಹಲವು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೊಷಿಸಿದೆ. ಕೆಲವೆಡೆ ಕಾಮಗಾರಿಗಳೂ ಆರಂಭಗೊಂಡಿವೆ. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಕೃಷಿ ಚಟುವಟಿಕೆ ನಡೆಸಲು ರೈತರು ಪರಿತಪಿಸುವಂತಾಗಿದೆ. ಬೋರ್​ವೆಲ್​ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಅರ್ಧತಾಸು ನೀರು ಬಂದರೆ ಸಾಕು ಎನ್ನುವಂತಾಗಿದೆ.

ತರಕಾರಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಗಗನಕ್ಕೆ ಏರುತ್ತಿವೆ. ಕಳೆದ ವಾರ ಬೀನ್ಸ್ 25ರಿಂದ 35 ರೂ.ಗೆ ಮಾರಾಟವಾಗಿತ್ತು. ಗುರುವಾರ ಬೀನ್ಸ್ ಆವಕ ಅತಿ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರಿಂದ ಕೆ.ಜಿ ಗೆ 70 ರೂ. ಬೆಲೆ ನಿಗದಿಯಾಯಿತು. ಇದನ್ನೇ ನೆಪ ಮಾಡಿಕೊಂಡ ಚಿಲ್ಲರೆ ವ್ಯಾಪಾರಸ್ಥರು ಪಾವ್ ಕೆ.ಜಿ. ಬೀನ್ಸ್ ಗೆ 30ರಿಂದ 35 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ಪ್ರತಿ ದಿನ ಮಾರುಕಟ್ಟೆಗೆ ಬೀನ್ಸ್ 25- 50 ಚೀಲ ಆವಕವಾಗುತ್ತಿತ್ತು. ಗುರುವಾರ ಕೇವಲ 6 ಚೀಲ ಆವಕವಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ.

ಕಳೆದ ವಾರ ಮೆಣಸಿನಕಾಯಿ ಕೆಜಿಗೆ 25-28 ರೂ. ಇತ್ತು. ಈಗ 35 ರೂ. ಆಗಿದೆ. ದಪ್ಪಮೆಣಸಿಕಾಯಿ 45 ರೂ., ಸೌತೆಕಾಯಿ 32 ರೂ., ಹೀರೆಕಾಯಿ 38 ರೂ., ಚವಳಿಕಾಯಿ 32 ರೂ. ಹಾಗೂ ಹಸಿ ವಠಾಣಿ 35 ರೂ., ಗಜ್ಜರಿ 25 ರೂ.ಗೆ ಮಾರಾಟವಾಯಿತು.

ಚೇತರಿಕೆಯಾಗದ ಈರುಳ್ಳಿ, ಟೋಮ್ಯಾಟೋ:ಸ್ಥಳೀಯ ಬೆಳೆಗಳು ಹೆಚ್ಚು ಮಾರುಕಟ್ಟೆಗೆ ಆವಕವಾಗುತ್ತಿದ್ದು , ಅದರ ಜೊತೆ ಬೇರೆ ಜಿಲ್ಲೆಯಿಂದಲೂ ಆವಕವಾಗುತ್ತಿದೆ. ಆದ್ದರಿಂದ ಬೆಲೆ ಇಳಿಮುಖವಾಗುತ್ತಿದೆ. ಗುರುವಾರ ಈರುಳ್ಳಿ 10 ರೂ. ಟೋಮ್ಯಾಟೋ 8 ರೂ. ಬದನೆಕಾಯಿ 15 ರೂ., ಆಲೂಗಡ್ಡೆ 18 ರೂ. ಗೆ ಮಾರಾಟವಾಯಿತು.

ತುಮಕೂರು, ಕೊಪ್ಪಳ, ಗದಗ ಜಿಲ್ಲೆಯಿಂದ ಮಾತ್ರ ಬೀನ್ಸ್ ಮಾರುಕಟ್ಟೆಗೆ ಆವಕವಾಗುತ್ತಿದೆ. ಈಗ ನೀರಿನ ಕೊರತೆ ಇರೋದ್ರಿಂದ ಬೆಳೆ ಕಡಿಮೆಯಾಗಿದೆ. ತುಮಕೂರಿನಿಂದ ಬರುತ್ತಿದ್ದ ಮಾಲ್ ಬಂದ್ ಆಗಿ ಕೊಪ್ಪಳ, ಗದಗದಿಂದ ಮಾತ್ರ ಬಂದಿದೆ. ಬೀನ್ಸ್ ಗೆ ಬೇಡಿಕೆ ಹೆಚ್ಚಾಗಿ, ಆವಕ ಕಡಿಮೆ ಆಗಿದೆ.

| ಎಂ.ಡಿ. ಸಾಧೀಕ್, ರಾಯಲ್ ಟ್ರೇಡರ್ಸ್ ತರಕಾರಿ ವ್ಯಾಪಾರಿ, ಹುಬ್ಬಳ್ಳಿ