ತರಕಾರಿಗೆ ವೈರಸ್!

ಸರ್ ಅರ್ಧ ಎಕರೆ ಬೀನ್ಸ್ ಹಾಕಿದ್ದೆ, ವೈರಸ್ ಬಂದುಬಿಟ್ಟಿದೆ. ಉಳಿದಿರುವ ಟೊಮ್ಯಾಟೊದಲ್ಲಿ ಎಲೆ ಮುದುಡು ರೋಗ, ತಿಂಗಳ ಹುರುಳಿ ಎಲೆಗಳಲ್ಲೂ ವಸಿ ಹಳದಿ ವಸಿ ಹಸಿರು…

ಬಿರುಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತಿರುವ ಬಹುತೇಕ ಕೃಷಿಕರ ಅಳಲು ಇದು. ನಿಜ, ಬೇಸಿಗೆ ಬಂತೆಂದರೆ, ಕಾವು ಹೆಚ್ಚಾಯಿತೆಂದರೆ ಬೆಳೆಗಳನ್ನು ಬಾಧಿಸುವ ವೈರಸ್​ಗಳದ್ದೇ ಕಾರುಬಾರು. ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ಕೃಷಿಕರಿಗೆ ಬಹುತೇಕ ನಿರಾಸೆ. ಸರಿಯಾಗಿ ನಿರ್ವಹಿಸದಿದ್ದರೆ ಇಡೀ ಬೆಳೆಯನ್ನು ಆವರಿಸಿ ಹಿಡಿ ಬೆಳೆ ಕೂಡ ಸಿಗದಂತೆ ಮಾಡಿಬಿಡುತ್ತವೆ. ಟೊಮ್ಯಾಟೊ, ಮೆಣಸಿನಕಾಯಿ, ಕಲ್ಲಂಗಡಿ, ಬೀನ್ಸ್, ಬೆಂಡೆ, ಹಾಗಲ, ಪಡುವಲ, ಹೀರೆ, ಸೋರೆ ಹೀಗೆ ಬಹುತೇಕ ಬೆಳೆಗಳನ್ನು ಈ ವೈರಸ್​ಗಳು ಹೆಚ್ಚಾಗಿ ಬಾಧಿಸುತ್ತವೆ. ರೈತರು ಈ ರೋಗಕ್ಕೆ ಜಾಂಡೀಸ್ ಅಥವಾ ಕಾಮಾಲೆ ರೋಗ ಎಂದೂ ಕರೆಯುವುದುಂಟು. ಇವುಗಳಿಂದಾಗುವ ಬೆಳೆ ನಷ್ಟ ಸಾಮಾನ್ಯವಾಗಿ ಶೇ. 30-40 ರಷ್ಟು. ನಿರ್ವಹಿಸದಿದ್ದರೆ ನೂರಕ್ಕೆ ನೂರರಷ್ಟು ಹಾನಿ.

ಹರಡುವ ಬಗೆ: ಕೆಲವು ಬೀಜ, ಗಡ್ಡೆ ಅಥವಾ ಕಾಂಡದ ತುಂಡುಗಳಿಂದ ಹರಡುತ್ತವೆ. ಬಹುತೇಕ ವೈರಸ್​ಗಳು ಕೀಟ ವಾಹಕ (ವೆಕ್ಟರ್)ಗಳು. ಗಿಡದಿಂದ ಗಿಡಕ್ಕೆ ಹರಡುತ್ತವೆ. ವೈರಸ್​ಗಳನ್ನು ಹರಡುವ ಪ್ರಮುಖ ಕೀಟಗಳೆಂದರೆ ಸಸ್ಯ ಹೇನು, ಬಿಳಿನೊಣ, ಥ್ರಿಪ್ಸ್, ಹಿಟ್ಟು ತಿಗಣೆ, ಜಿಗಿಹುಳು ಇತ್ಯಾದಿ. ಕೆಲವು ಶಿಲೀಂಧ್ರ, ಜಂತುಹುಳು, ನುಸಿಗಳೂ ಸಹ ವೈರಸ್​ಗಳ ಪ್ರಸರಣದಲ್ಲಿ ಭಾಗಿಯಾಗುತ್ತವೆ. ಇವುಗಳಿಗೆ ತಂತಾನೆ ಹರಡುವ ಶಕ್ತಿಯಿಲ್ಲ. ಉದಾಹರಣೆಗೆ ಟೊಮ್ಯಾಟೊ ಎಲೆಮುದುಡು ವೈರಸ್, ಬೆಂಡೆಯ ನಂಜಾಣುಗಳನ್ನು ಬಿಳಿನೊಣಗಳು ಹರಡಿದರೆ ಕಲ್ಲಂಗಡಿ, ಸೌತೆ, ಹಾಗಲದಲ್ಲಿ ಬರುವ ಮೊಗ್ಗು ಒಣಗು ನಂಜಾಣುಗಳು ಥ್ರಿಪ್ಸ್​ಗಳಿಂದ ಪ್ರಸರಣಗೊಳ್ಳುತ್ತವೆ. ಸಾಮಾನ್ಯವಾಗಿ ಈ ರಸಹೀರುವ ಕೀಟಗಳ ಸಂಖ್ಯೆ ಬೇಸಿಗೆಯಲ್ಲಿ ಹೆಚ್ಚಿರುವುದರಿಂದ, ವೈರಸ್​ಗಳ ಬಾಧೆಯೂ ಹೆಚ್ಚಾಗಿ ಕಾಣಿಸುವುದು ಬೇಸಿಗೆಯಲ್ಲೇ.

ಸಮಗ್ರ ನಿರ್ವಹಣೆ ಹೇಗೆ?: ಶಿಲೀಂಧ್ರ ಅಥವಾ ದುಂಡಾಣುಗಳಿಂದ ಬರುವ ರೋಗಗಳ ನಿರ್ವಹಣೆ ಸುಲಭ. ಇದೇ ಮಾತನ್ನು ವೈರಸ್ ರೋಗಗಳ ಬಗೆಗೆ ಹೇಳಲಾಗದು. ಅವುಗಳ ನಿರ್ವಹಣೆ ಕಷ್ಟ, ಆದರೂ ಸಾಧ್ಯ. ಬೆಳೆ ಪ್ರಾರಂಭದಿಂದಲೇ ಸಮಗ್ರ ವೈರಸ್ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಸಾಧ್ಯ. ಬಾಧೆ ಇರದ ಜಾಗದಲ್ಲಿ ಅಥವಾ ಇವುಗಳನ್ನು ಹರಡುವ ವಾಹಕಗಳ ಸಂಖ್ಯೆ ತೀರಾ ಕಡಿಮೆ ಇರುವೆಡೆ ಬೆಳೆ ಬೆಳೆಯುವುದು ಉತ್ತಮ. ಆದರೆ, ಇದು ಎಲ್ಲ ಕಡೆ ಎಲ್ಲ ರೈತರಿಗೂ ಸಾಧ್ಯವಾಗದು. ಸಸಿ ಮಡಿಗಳಲ್ಲಿ ಕಳೆ ನಿರ್ವಹಣೆ ಬಹಳ ಮುಖ್ಯ, ಅಲ್ಲದೆ ಸಸಿ ತಯಾರಿ ಮಾಡುವ ನರ್ಸರಿಗಳು ಬೆಳೆ ಮಾಡುವ ಹೊಲಗಳಿಂದ ದೂರವಿರಬೇಕು. ಸಸಿ ತಯಾರಿಸುವವರು ವೈರಸ್​ಗಳ ಪ್ರಸಾರಕಗಳ ಮೇಲೆ ನಿಗಾ ಇಟ್ಟು ವೈರಸ್ ಮುಕ್ತ ಸಸಿಗಳನ್ನು ನಾಟಿಗೆ ಕೊಡುವುದು ಅತಿ ಮುಖ್ಯ. ನರ್ಸರಿಯವರು ಕಡ್ಡಾಯವಾಗಿ 40-50 ಮೆಷ್ ಇರುವ ಪರದೆಗಳನ್ನು ಅಳವಡಿಸಿರಬೇಕು, ಆಗ ವೈರಸ್ ಹರಡುವ ಕೀಟವಾಹಕಗಳು ಆ ನರ್ಸರಿಯೊಳಗೆ ಹೋಗಲಾಗದೆ, ಅಲ್ಲಿ ಬೆಳೆಯುವ ಸಸಿಗಳು ವೈರಸ್ ಮುಕ್ತವಾಗಿರುತ್ತವೆ. ಸಸಿ ಮಾಡಿಕೊಳ್ಳುವ ರೈತರು ಅಥವಾ ಮಾಡಿಕೊಡುವ ನರ್ಸರಿಗಳವರು ಟ್ರೇಗಳಲ್ಲಿ ಬಿತ್ತನೆ ಮಾಡುವ ಮೊದಲು ಪ್ರತಿ ಕಿಲೋ ಬಿತ್ತನೆ ಬೀಜವನ್ನು 5-10 ಗ್ರಾಂನಷ್ಟು ಇಮಿಡಾಕ್ಲೋಪ್ರಿಡ್​ನಿಂದ ಉಪಚರಿಸಬೇಕು. ನಾಟಿಗೆ ಮೊದಲು ಸಸಿಗಳ ಬೇರುಗಳನ್ನು ಲೀಟರ್ ನೀರಿಗೆ ಅರ್ಧ ಮಿಲಿ ಲೀಟರ್ ಇಮಿಡಾಕ್ಲೋಪ್ರಿಡ್ ಬೆರೆಸಿರುವ ದ್ರಾವಣದಲ್ಲಿ ಅರ್ಧ ಗಂಟೆ ಉಪಚರಿಸಿ ನಂತರ ನಾಟಿಗೆ ಬಳಸಬೇಕು, ಅದು ಸಾಧ್ಯವಾಗದಿದ್ದಲ್ಲಿ ಅದೇ ದ್ರಾವಣವನ್ನು ಸಸಿಗಳಿಗೆ ಸಿಂಪಡಿಸಿ ನಾಟಿ ಮಾಡುವುದರಿಂದಲೂ 15-20 ದಿನಗಳ ಮಟ್ಟಿಗೆ ಬೆಳೆಗಳನ್ನು ವೈರಸ್​ಗಳಿಂದ ಸಂರಕ್ಷಿಸಬಹುದಾಗಿದೆ. ಆಯ್ಕೆ ಇದ್ದಲ್ಲಿ ವೈರಸ್ ರೋಗ ನಿರೋಧಕ ತಳಿಗಳನ್ನು ರೈತರು ಬೆಳೆಯಬಹುದಾಗಿದೆ. ಉದಾಹರಣೆಗೆ, ಟೊಮ್ಯಾಟೊದಲ್ಲಿ ‘ಅರ್ಕ ರಕ್ಷಕ್’ ಎನ್ನುವ ತಳಿ ಇದೆ. ಇದಕ್ಕೆ ಎಲೆಮುದುಡು ವೈರಸ್ ರೋಗ ನಿರೋಧಕತೆ ಇದೆ; ಹಾಗೆಯೇ ತಿಂಗಳ ಹುರುಳಿಯ ‘ಅರ್ಕ ಅರ್ಜುನ್’ ತಳಿಗೆ ಬೀನ್ ಮೊಸಾಯಿಕ್ ವೈರಸ್ ರೋಗ ನಿರೋಧಕತೆ ಇದೆ.

ಪ್ರಮುಖ ವಿಚಾರವೆಂದರೆ ಬೆಳೆ ಕ್ಷೇತ್ರಗಳನ್ನು ಕಳೆಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳುವುದು, ವೈರಸ್ ಬಾಧೆ ಕಂಡ ಕೂಡಲೇ ಅಂತಹ ಗಿಡಗಳನ್ನು ಕಿತ್ತು ಸುಟ್ಟು ಹಾಕುವುದು. ಮುಖ್ಯ ಬೆಳೆ ನಾಟಿ ಮಾಡುವ 20-25 ದಿನ ಮೊದಲೇ ಬೇಲಿ/ತಡೆ ಬೆಳೆಯಾಗಿ ಎರಡರಿಂದ ಮೂರು ಸಾಲು ಮೆಕ್ಕೆ ಜೋಳ, ಜೋಳ ಅಥವಾ ಸಜ್ಜೆಯನ್ನು ಬಿತ್ತಬೇಕು. ಇವು ಮತ್ತೊಂದು ತೋಟ/ಹೊಲದಿಂದ ವೈರಸ್ ಹೊತ್ತು ತರುವ ಕೀಟಗಳ ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತವೆ. ವೈರಸ್ ಪ್ರಸರಿಸುವ ರಸ ಹೀರುವ ಕೀಟಗಳನ್ನು ಕೀಟ ವಿಕರ್ಷಕ ಹೊದಿಕೆ (ಮಲ್ಚ್), ಹಳದಿ/ನೀಲಿ ಅಂಟು ಬಲೆಗಳನ್ನು ಬಳಸಿ ನಿರ್ವಹಿಸಬೇಕು. ರಾಸಾಯನಿಕ ಸಿಂಪಡಣೆ, ಬೇವು/ಹೊಂಗೆ ಸಾಬೂನು ಸಂಪಡಣೆ ಮಾಡುವುದು ಮುಖ್ಯ. ಬೆಳೆಗಳಿಗೆ ಶಿಫಾರಸು ಮಾಡಿರುವ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡುವುದರ ಜೊತೆಗೆ ಅವಶ್ಯವಿರುವ ಲಘು ಪೋಷಕಾಂಶಗಳನ್ನು ಸಿಂಪಡಣೆಯ ಮೂಲಕ ತಪ್ಪದೇ ಕೊಡಬೇಕು. ಹೆಚ್ಚಿನ ಮಾಹಿತಿಗೆ 93428 86075 ಅಥವಾ 94805 57634 ಸಂರ್ಪಸಬಹುದು.

ಲಕ್ಷಣಗಳು

ಮೊದಲಿಗೆ ಹಸಿರು ಮಿಶ್ರಿತ ಹಳದಿ ಎಲೆಗಳು, ಎಲೆ ಮುದುಡು ಲಕ್ಷಣ, ಕುಂಠಿತ ಬೆಳವಣಿಗೆ, ಕಲ್ಲಂಗಡಿ, ಹೀರೆ ಕುಡಿಗಳು ಒಣಗುವುದು, ಕಡೆಗೆ ಎಲೆಗಳು ಸಂಪೂರ್ಣ ಹಳದಿಯಾಗಿ ಒಣಗಿ ಹೋಗುವುದು ಇತ್ಯಾದಿ. ಬೆಳೆಯಿಂದ ಬೆಳೆಗೆ ಲಕ್ಷಣಗಳಲ್ಲಿ ತುಸು ವ್ಯತ್ಯಾಸಗಳಿವೆ. ಈ ಲಕ್ಷಣಗಳನ್ನು ಕೆಲ ಲಘು ಪೋಷಕಾಂಶಗಳ ಕೊರತೆಯ ಲಕ್ಷಣಗಳೆಂದು ಬಹಳಷ್ಟು ಸಲ ತಪ್ಪಾಗಿ ಭಾವಿಸಲಾಗುತ್ತದೆ.

| ಶಂಕರಪ್ಪ ಕೆ.ಎಸ್., ಹರೀಶ್ ಬಿ.ಎಸ್.