ತಮಿಳರಿಗೆ ರಾಜಕೀಯ ಸ್ಥಾನಮಾನ

ಭದ್ರಾವತಿ: ರಾಜಕೀಯವಾಗಿ ತಮಿಳು ಸಮಾಜಕ್ಕೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ನನಗಿದೆ, ದೇವರ ಅನುಗ್ರಹದಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲ ಮುಖಂಡರ ಜತೆ ಕುಳಿತು ಮಾತುಕತೆ ನಡೆಸಿ ರಾಜ್ಯದ ಒಂದೆರಡು ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಕೊಡುವ ಪ್ರಯತ್ನ ಮಾಡುತ್ತೇನೆ. ಕೊಟ್ಟ ಮಾತನ್ನು ನಾನು ಎಂದೂ ಮರೆಯುವುದಿಲ್ಲ, ನನ್ನನ್ನು ನಂಬಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ತಿರುವಳ್ಳುವರ್ ಸೇವಾ ಸಂಘದಿಂದ ಭಾನುವಾರ ಕನಕಮಂಟಪ ಮೈದಾನದಲ್ಲಿ ಏರ್ಪಡಿಸಿದ್ದ ಸ್ನೇಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದೂವರೆ ದಶಕಗಳ ಕಾಲ ಬಟ್ಟೆ ಹಾಕಿ ಮುಚ್ಚಿಟ್ಟಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಯಾವುದೇ ಗೊಂದಲ ಮಾಡಿಕೊಳ್ಳದೆ ಉದ್ಘಾಟಿಸಿದ ಕೀರ್ತಿ ನನ್ನ ಅಧಿಕಾರಾವಧಿಯಲ್ಲಿ ನಡೆಯಿತು ಎಂದರು.

ಎಲ್ಲ ರೀತಿಯ ಕಷ್ಟದ ಕೆಲಸ ಮಾಡುವಲ್ಲಿ ತಮಿಳರು ಹೆಸರು ಮಾಡಿದ್ದು, ನಿಮ್ಮ ಶ್ರಮಕ್ಕೆ ಅಗತ್ಯ ಇರುವ ಮೂಲಸೌಕರ್ಯ ಒದಗಿಸುವಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಲು ಸಿದ್ಧವಿದ್ದೇವೆ ಎಂದರು.

ನಮ್ಮ ಕಾರ್ಯಕರ್ತರು ಮನೆ ಭೇಟಿ ನೀಡಿದಾಗ ಅಲ್ಲಿ ವಾಸಿಸುವ ಬಡವರಿಗೆ ಮನೆ ಇಲ್ಲ, ನಿವೇಶನ ಇಲ್ಲ, ಬ್ಯಾಂಕ್ ಸಾಲ ಸಿಗುತ್ತಿಲ್ಲ ಎಂಬ ವಿಚಾರ ಕಂಡಲ್ಲಿ ಅದನ್ನು ಪಟ್ಟಿ ಮಾಡಿಕೊಂಡು ತನ್ನಿ, ಚುನಾವಣೆ ಮುಗಿದ ನಂತರ ಆ ಕೆಲಸ ಮಾಡಿಸಿಕೊಡಲು ನಾನು ಬದ್ಧನಿದ್ದೇನೆ ಎಂದು ಭರವಸೆ ನೀಡಿದರು.

ರಾಹುಲ್​ಗಾಂಧಿ ಬರೀ ಸುಳ್ಳುಗಾರ, ಅಧಿಕಾರ ಇದ್ದಾಗ ಯಾವುದೇ ಭರವಸೆ ಈಡೇರಿಸದ ಅವರು, ಈಗ ಸುಳ್ಳು ಭರವಸೆ ನೀಡುವ ಮೂಲಕ ದೇಶದ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪ್ರಧಾನಿ ಮೋದಿ ಜನಸಾಮಾನ್ಯರ ಪಾಲಿಗೆ ಅಗತ್ಯ ಇರುವ ಶೌಚಾಲಯ, ಅಡುಗೆ ಅನಿಲ, ಮುದ್ರಾ ಯೋಜನೆ ಹಾಗೂ ಮನೆ ಕಟ್ಟಿಕೊಡುವ ಕೆಲಸ ಮಾಡುವ ಮೂಲಕ ಭಾರತ ದೇಶ ಒಂದೇ ತಾಯಿ ಮಕ್ಕಳು ಎಂಬುದನ್ನು ವಿಶ್ವಕ್ಕೆ ಸಾರಿದ್ದಾರೆ ಎಂದರು.

ತಮಿಳು ಸಮಾಜದ ಮುಖಂಡರಾದ ಶ್ರೀನಿವಾಸ್, ಕಣ್ಣಪ್ಪ, ಸುರೇಶಕುಮಾರ್, ಅಮುದಾ, ನೀಲಕಂಠ, ಬಿಜೆಪಿ ಮುಖಂಡರಾದ ಬಿ.ವೈ.ವಿಜಯೇಂದ್ರ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ವಿ.ಕದಿರೇಶ್, ಪ್ರವೀಣ್ ಪಟೇಲ್, ಕೆ.ಮಂಜುನಾಥ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ದತ್ತಾತ್ರಿ ಇತರರಿದ್ದರು. ಅಗಮುಡಿ ಮೊದಲಿಯಾರ್, ವೆಣ್ಣಿ ಗೌಂಡರ್, ತಮಿಳು ಸಂಘ ಸೇರಿ ಇನ್ನಿತರೆ ಸಂಘಗಳ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *