ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ದಾಂಡೇಲಿ: ಹಳೇ ದಾಂಡೇಲಿ ಸಮೀಪದ ಪಟೇಲನಗರದ ಸರ್ವೆ ನಂಬರ್ 3ರಲ್ಲಿ ಹಿಂದುಗಳ ರುದ್ರಭೂಮಿಯಲ್ಲಿನ ಸಮಾಧಿಗಳನ್ನು ಅಗೆದು ಅಸ್ಥಿಗಳನ್ನು ಕಾಳಿ ನದಿಯಲ್ಲಿ ಎಸೆದಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರದ ವಿಶ್ವ ಹಿಂದು ಪರಿಷತ್ ಘಟಕದ ಪದಾಧಿಕಾರಿಗಳು ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ತಹಸೀಲ್ದಾರ್ ಚಾಮರಾಜ ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸ್ಥಳೀಯ ಕೆನರಾ ಅಡ್ವೆಂಚರ್ ಅಕಾಡೆಮಿ ಅಧ್ಯಕ್ಷ ಸೈಯದ್ ತಂಗಳ, ನಗರಸಭೆ ಸದಸ್ಯರಾದ ಆಸೀಫ್ ಮುಜಾವರ, ಸಂಜಯ ನಂದ್ಯಾಳಕರ ಅವರು ಹಿಂದು ರುದ್ರಭೂಮಿಯನ್ನು ಹಾಳು ಮಾಡಿದ್ದಾರೆ. ಅರಣ್ಯ ಇಲಾಖೆಯವರು ಈ ಕುರಿತು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೂ ನಗರಸಭೆ ಪೌರಾಯುಕ್ತರು ಹಾಗೂ ಪೊಲೀಸರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ವಿಶ್ವ ಹಿಂದು ಪರಿಷತ್ ಸ್ಥಳೀಯ ಘಟಕದ ಅಧ್ಯಕ್ಷ ಶಂಕರ ಗಣಾಚಾರಿ, ಪ್ರಧಾನ ಕಾರ್ಯದರ್ಶಿ ಚಂದ್ರು ಮಾಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚವ್ಹಾಣ, ದಶರಥ ಬಂಡಿವಡ್ಡರ, ರಮಾ ರವೀಂದ್ರ, ಅನ್ನಪೂರ್ಣ ಬಾಗಲಕೋಟೆ, ಗುರು ಮಠಪತಿ, ಮಂಜು ಪಾಟೀಲ, ಅಶೋಕ ಪಾಟೀಲ, ಶಾರದಾ ಪರಶುರಾಮ, ರಫೀಕ ಹುದ್ದಾರ, ಚಂದ್ರಕಾಂತ ನಡಿಗೇರ, ಬಾಲಮಣಿ ಉಪಸ್ಥಿತರಿದ್ದರು.