More

  ತಪ್ಪಾಗಿದೆ…ತಿದ್ದಿಕೊಳ್ತೀವಿ

  ಹುಬ್ಬಳ್ಳಿ: ರಾಜಕೀಯದಲ್ಲಿ ಏಳು-ಬೀಳು ಅನುಭವಿಸಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ರೈತರು, ನೀರಾವರಿ, ಕಬ್ಬು ಬೆಳೆಗಾರರ ಪರವಾಗಿ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚು ದುಡಿದಿದ್ದಾರೆ. ಆದರೆ ನಾವೆಲ್ಲೋ ಎಡವಿದ್ದೇವೆ. ಜನರಿಗೇಕೆ ಒಲವಿಲ್ಲ, ಜಾತಿ ಮುಖ್ಯ ಕಾರಣನಾ? ಹೀಗೆ ಹತ್ತಾರು ವಿಷಯಗಳ ಕುರಿತು ರ್ಚಚಿಸಲಾಗುವುದು. ಅಲ್ಲದೇ ಕಾರ್ಯಕರ್ತರು ನೀಡಿದ ಪ್ರತಿ ಸಲಹೆಯನ್ನೂ ಪಡೆದು ತಿದ್ದಿಕೊಳ್ಳುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

  ಜೆಡಿಎಸ್ ವತಿಯಿಂದ ನಗರದ ವಾಸವಿ ಮಹಲ್​ನಲ್ಲಿ ಹಮ್ಮಿಕೊಂಡಿರುವ ಎರಡು ದಿನ ಅವಧಿಯ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡ ಬೆಳಗಾವಿ ವಿಭಾಗ ಮಟ್ಟದ ತರಬೇತಿ ಶಿಬಿರ ಮತ್ತು ಕಾರ್ಯಕರ್ತರ ಕಾರ್ಯಾಗಾರದ ನೇತೃತ್ವ ವಹಿಸಿ ಶನಿವಾರ ಅವರು ಮಾತನಾಡಿದರು.

  ಜೆಡಿಎಸ್ ಪಕ್ಷ ಎಲ್ಲ ಸಮಾಜದವರ ಅಭಿವೃದ್ಧಿ, ಏಳ್ಗೆಗೆ ಶ್ರಮಿಸಿದೆ. ಆದರೆ ಜಾತಿ ಮುಖ್ಯ ಕಾರಣವಾಯಿತಾ ಅಥವಾ ಮಾಡಿದ ಕೆಲಸಕ್ಕೆ ಅಪಪ್ರಚಾರ ಮಾಡಲಾಯಿತಾ? ನಾವೇ ತಪ್ಪು ಮಾಡಿದ್ದೇವೆಯೇ? ಇವೆಲ್ಲವುಗಳ ಬಗೆಗೆ ಕಾರ್ಯಕರ್ತರು, ಮುಖಂಡರು ಮನಸ್ಸು ಬಿಚ್ಚಿ ಚರ್ಚೆ ಮಾಡಬೇಕು ಎಂದು ಕೋರಿದರು.

  ಎಂಎಲ್​ಸಿ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಹೀಗಳೆದಿದ್ದರು. ಈಗಿನ ಬಿಜೆಪಿ ಸರ್ಕಾರ 20 ಪರ್ಸೆಂಟ್ ಸರ್ಕಾರ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ಹಣ ಕೊಡದೇ ಇದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ದೂರಿದರು.

  ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ನಮ್ಮ ಪಕ್ಷಕ್ಕೆ ಉತ್ತರ ಕರ್ನಾಟಕದಲ್ಲೂ ನೆಲೆ ಇದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾರ್ಯಕರ್ತರು ಶ್ರಮಿಸದೇ ಆರಂಭದಿಂದಲೇ ಕೆಲಸ ಮಾಡಬೇಕು. ಬರೀ ಟಿಕೆಟ್​ಗಾಗಿ ಕೈ ಚಾಚಬಾರದು. ದುಡಿದವರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದರು.

  ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಮಾತನಾಡಿ, ಈ ಪಕ್ಷದಲ್ಲಿ ಹಲವಾರು ಮುಖಂಡರು ಬೆಳೆದಿದ್ದಾರೆ. ದೇವೇಗೌಡರು ಬೆಳೆಸಿದ್ದಾರೆ. ಇದು ಆಶ್ರಯ ತಾಣವಾಗಿದೆ ಎಂದರು.

  ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ‘ಉತ್ತರ ಕರ್ನಾಟಕಕ್ಕೆ ದೇವೇಗೌಡರ ಕೊಡುಗೆ’ ಮತ್ತು ದೇವನೂರು ಮಹಾದೇವ ಅವರ ‘ಈಗ ಭಾರತ ಮಾತಾಡುತ್ತಿದೆ’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ತಿಪ್ಪೇಸ್ವಾಮಿ, ಇತರರು ಇದ್ದರು.

  ಮೋದಿಯಿಂದ ಆರ್​ಬಿಐ ಅಸ್ಥಿರ

  ಹುಬ್ಬಳ್ಳಿ: ಯುಪಿಎ ಹತ್ತು ವರ್ಷ ಅಧಿಕಾರ ನಡೆಸಿತು. ವಾಜಪೇಯಿ ಆರು ವರ್ಷ ಪ್ರಧಾನಿಯಾಗಿದ್ದರು. ನರೇಂದ್ರ ಮೋದಿ ಈಗ ಆಡಳಿತ ನಡೆಸುತ್ತಿದ್ದಾರೆ. ಆದರೆ, ಮೋದಿ ಅವರು ಸ್ವಾಯತ್ತ ಸಂಸ್ಥೆ ಆರ್​ಬಿಐಅನ್ನು ಅಸ್ಥಿರಗೊಳಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದರು.

  ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್​ಬಿಐಗೆ ಸ್ವಾತಂತ್ರ್ಯ ಕೊಡಬೇಕಿತ್ತು. ದುರಂತ ಅಂದರೆ ಕೇಂದ್ರ ಸರ್ಕಾರ ಭಾಗಿಯಾಯಿತು. ಹಿಂದಿನ ಗವರ್ನರ್ ರಘುರಾಮ್ ರಾಜನ್ ಕೇಂದ್ರ ಸರ್ಕಾರ ಮೂಗು ತೂರಿಸಲು ಆಸ್ಪದ ನೀಡಿರಲಿಲ್ಲ. ಕೆಲವೊಬ್ಬರಿಗೆ ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದರು. ಹೀಗಾಗಿ ಬ್ಯಾಂಕ್​ಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ನೋಟು ಅಮಾನ್ಯೀಕರಣ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು. ಕೆಲ ಹಣಕಾಸು ಸಲಹೆಗಾರರು ರಾಜೀನಾಮೆ ನೀಡಿ ಹೋದರು ಎಂದು ದೂರಿದರು.

  ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಿರುವುದರ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ನಾನು ಈ ಬಗೆಗೆ ಹೇಳುವುದಿಲ್ಲ ಎಂದರು.

  ರಾಜಕೀಯ ಮುಖಂಡರ ಮಕ್ಕಳ ಅದ್ದೂರಿ ಮದುವೆ ಕುರಿತು ಪ್ರಶ್ನಿಸಿದಾಗ, ಉದ್ಯಮಿ ಮಿತ್ತಲ್ ಈ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿದ್ದಾರಲ್ಲ? ಆ ತರಹ ಏನೂ ಅದ್ದೂರಿ ಮದುವೆ ಅಲ್ಲ. ಕುಮಾರಸ್ವಾಮಿಗೆ ಅನೇಕ ಜನ ಅಭಿಮಾನಿಗಳಿದ್ದಾರೆ. ಅವರ ಆಶಯದಂತೆ ಕಾರ್ಯಕ್ರಮ ಮಾಡಲಾಗಿದೆ ಎಂದು ವಿವಾಹಕ್ಕೆ ನಡೆದಿರುವ ಸಿದ್ಧತೆಯನ್ನು ಎಚ್.ಡಿ. ದೇವೇಗೌಡ ಸಮರ್ಥಿಸಿಕೊಂಡರು.

  ಟಿಕೆಟ್​ಕೊಡದೇ ಇರುವುದಕ್ಕೆ ರಾಜೀನಾಮೆ

  ನಾವು ಟಿಕೆಟ್ ಕೊಡದೇ ಇರುವುದರಿಂದ ಮಾಜಿ ಎಂಎಲ್​ಸಿ ರಮೇಶಬಾಬು ಜೆಡಿಎಸ್​ಗೆ ರಾಜೀನಾಮೆ ನೀಡಿದ್ದಾರೆ ಎಂದು ಎಂಎಲ್​ಸಿ ಬಸವರಾಜ ಹೊರಟ್ಟಿ ಸಮರ್ಥಿಸಿಕೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ವಿಶ್ವನಾಥ ನಮ್ಮ ಪಕ್ಷ ಬಿಟ್ಟಿದ್ದಾರೆ. ಅವರ ಕುರಿತು ಏನೂ ಮಾತನಾಡುವುದಿಲ್ಲ. ನಮ್ಮ ಪಕ್ಷದಲ್ಲಿ ಹಲವು ತಪ್ಪುಗಳಾಗಿವೆ. ಈಗಾಗಲೇ ದೇವೇಗೌಡರು ಹೇಳಿದ್ದಾರೆ ಎಲ್ಲವೂ ಸರಿಯಾಗಲಿದೆ ಎಂದು. ತಿದ್ದಿಕೊಂಡು ಹೋಗುತ್ತೇವೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts