ತನಿಖೆ ಹಂತದಲ್ಲೇ ಸಾಕ್ಷಿ ಪತ್ತೆಹಚ್ಚಿ

ಕೋಲಾರ: ಅಪರಾಧ ನಡೆದು ಕೆಲ ವರ್ಷ ಕಳೆದಿದ್ದರೂ ಸಿಬಿಐ, ಸಿಐಡಿ ಅಧಿಕಾರಿಗಳಿಗೆ ಸಾಕ್ಷಿ ಪತ್ತೆಹಚ್ಚಲು ಸಾಧ್ಯವಾಗುವುದಾದರೆ ಆ ಕೆಲಸ ಪೊಲೀಸ್ ತನಿಖೆ ಹಂತದಲ್ಲೇ ನಡೆಯಬೇಕು ಎಂದು ಬೆಂಗಳೂರಿನ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿದರು.

ಟಮಕದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಪೊಲೀಸ್ ಸಿಬ್ಬಂದಿಗೆ ಅಪರಾಧ ನಡೆದ ಸ್ಥಳದ ನಿರ್ವಹಣೆ ಮತ್ತು ಕೆಲಸ ಒತ್ತಡ ನಿರ್ವಹಣೆ ಸಂಬಂಧ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಸಿಬ್ಬಂದಿ ಅಥವಾ ಅಧಿಕಾರಿಗಳು ಪ್ರಥಮ ತನಿಖೆಯಲ್ಲಿ ಲೋಪ ಎಸಗಿದರೆ ಅಂತಹ ಪ್ರಕರಣದಲ್ಲಿ ನೊಂದವರಿಗೆ ನ್ಯಾಯದೊರಕಿಸಲು ಸಾಧ್ಯವಾಗದು. ಹೀಗಾಗಿ ಪಂಚನಾಮೆ ಸಮರ್ಪಕವಾಗಿ ನಡೆದರೆ ಪ್ರಕರಣದ ತನಿಖೆಯೂ ಸುಲಭವಾಗುತ್ತದೆ ಎಂದರು.

ಕೆಲ ಗಂಭೀರ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ತನಿಖೆ ನಡೆಸಿದ್ದರೂ ಉನ್ನತ ತನಿಖೆಗಾಗಿ ಸಿಬಿಐ, ಸಿಐಡಿಗೆ ಹೋಗುತ್ತದೆ. ತನಿಖಾ ಸಂಸ್ಥೆಗಳ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಮೂರ್ನಾಲ್ಕು ವರ್ಷಗಳ ನಂತರ ಭೇಟಿ ನೀಡಿದರೂ ಸಾಕ್ಷ್ಯ ಪತ್ತೆ ಹಚ್ಚುತ್ತಾರೆ. ಈ ಕೆಲಸ ಪೊಲೀಸರ ತನಿಖೆ ಹಂತದಲ್ಲಿ ನಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ತಂತ್ರಜ್ಞಾನದ ನೆರವು ಪಡೆದು ಪ್ರಕರಣ ಭೇದಿಸಬೇಕೆಂದು ಸಲಹೆ ನೀಡಿದರು.

ಘಟನೆ ಸ್ಥಳದ ಮಹಜರು ನಡೆಸುವಲ್ಲಿ ಎಡವಿದರೆ ತನಿಖೆ ಸಂದರ್ಭದಲ್ಲಿ ತೊಂದರೆಯಾಗುತ್ತದೆ. ಕ್ಲಿಷ್ಟ ಪ್ರಕರಣ ತನಿಖೆಗೆ ವಿಧಿವಿಜ್ಞಾನ ಮತ್ತು ವಿಷಶಾಸ್ತ್ರ ತಜ್ಞರ ಸಹಾಯ ಪಡೆಯುವುದು ತನಿಖಾ ದೃಷ್ಟಿಯಿಂದ ಸೂಕ್ತ. ಅಪರಾಧ ಪ್ರಕರಣಗಳ ತನಿಖೆ ವೇಳೆ ಪೊಲೀಸರು ನಿರ್ಲಕ್ಷ ತೋರಬಾರದು. ಸರಿಯಾದ ಸಾಕ್ಷ್ಯಗಳೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಪಂಚನಾಮೆ ವರದಿ ಸಲ್ಲಿಕೆಯ ಆಧಾರದ ಮೇಲೆ ನ್ಯಾಯಾಲಯ ವರದಿ ಕೇಳುತ್ತದೆ. ಸಾಕ್ಷಿ ನಾಶಮಾಡಲು ಯತ್ನಿಸಿದರೆ ನಿರಾಪರಾಧಿಗೆ ಶಿಕ್ಷೆಯಾಗುತ್ತದೆ. ಇದು ವೃತ್ತಿಗೌರವಕ್ಕೂ ಧಕ್ಕೆ ಉಂಟು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ವೈದ್ಯಕೀಯ ಕಾಲೇಜಿನ ಕುಲಪತಿ ಡಾ.ಎಸ್.ಕುಮಾರ್, ಖಜಾಂಚಿ ರಾಜೇಂದ್ರ, ಸಂಸ್ಥೆಯ ಕುಲಾಧಿಪತಿ ಡಾ.ಜಿ.ಪ್ರದೀಪ್ ಕುಮಾರ್, ಪ್ರಾಂಶುಪಾಲ ಡಾ.ಪಿ.ಎನ್.ಶ್ರೀರಾಮುಲು ಹಾಜರಿದ್ದರು.

ಯಾವುದೇ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಅಪರಾಧಿಗೆ ಶಿಕ್ಷೆಯಾಗದಿರಲು ಕಾರಣವೇನು ಎಂಬುದನ್ನು ಪೊಲೀಸರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತರಬೇತಿ ಪ್ರಯೋಜನ ಪಡೆದು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು.

| ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Leave a Reply

Your email address will not be published. Required fields are marked *