ತನಿಖೆಗೆ ಎಸ್​ಬಿಎಂ ಒತ್ತಡ ಕಾರಣ? ಟೆಂಡರ್​ಶ್ಯೂರ್, ವೈಟ್​ಟಾಪಿಂಗ್ ಕಾಮಗಾರಿಗಳ ತನಿಖೆಗೆ ಸಿಎಂ ಆದೇಶ

ಬೆಂಗಳೂರು: ವೈಟ್​ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಅನರ್ಹಗೊಂಡಿರುವ ನಗರದ ಮೂವರು ಶಾಸಕರ (ಎಸ್​ಬಿಎಂ) ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿಬಂದಿದೆ. ಆ ಮೂಲಕ 2 ಸಾವಿರ ಕೋಟಿ ರೂ. ಕಾಮಗಾರಿಗಳ ತನಿಖೆ ರಾಜಕೀಯ ತಿರುವು ಪಡೆದುಕೊಳ್ಳುವಂತಾಗಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಮತ್ತು ದೀರ್ಘ ಬಾಳಿಕೆ ಬರುವ ರಸ್ತೆಗಳ ನಿರ್ವಣಕ್ಕಾಗಿ ಬಿಬಿಎಂಪಿ ಟೆಂಡರ್​ಶ್ಯೂರ್ ಮತ್ತು ವೈಟ್​ಟಾಪಿಂಗ್ ಕಾಮಗಾರಿಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಿದ್ದು, ಕಾಮಗಾರಿಗಳ ತನಿಖೆಗೆ ಮುಂದಾಗಿದೆ.

ಕಳೆದೆರಡು ಸರ್ಕಾರಗಳ ಅವಧಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಮತ್ತು ಡಾ.ಜಿ. ಪರಮೇಶ್ವರ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅವರೊಂದಿಗೆ ದ್ವೇಷ ಸಾಧಿಸುತ್ತಿರುವ ಅನರ್ಹಗೊಂಡಿರುವ ಮೂವರು ಶಾಸಕರು ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ತನಿಖೆಗೆ ಆದೇಶಿಸುವಂತೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರಂತೆ ಸಿಎಂ ಯಡಿಯೂರಪ್ಪ ಯೋಜನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.

ವಿವಿಧ ಹಂತದ ಕಾಮಗಾರಿಗಳು: ಡಿ.ವಿ. ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಟೆಂಡರ್​ಶ್ಯೂರ್ ಯೋಜನೆ ರೂಪಿಸಲಾಗಿತ್ತು. ಆದರೆ, ಅದು ಅನುಷ್ಠಾನ ಗೊಂಡಿರಲಿಲ್ಲ. ನಂತರ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದು ಪ್ರಮುಖ 12 ರಸ್ತೆಗಳನ್ನು ಟೆಂಡರ್​ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ನಂತರ 50 ರಸ್ತೆಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ಅದರಲ್ಲಿ 13 ರಸ್ತೆಗಳಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದೆ.ಅದರ ಜತೆಗೆ ನಗರದ 93.47 ಕಿ.ಮೀ. ರಸ್ತೆಗಳನ್ನು ಮೊದಲ ಹಂತದಲ್ಲಿ ಮತ್ತು 63.26 ಕಿ.ಮೀ. ರಸ್ತೆಗಳನ್ನು 2ನೇ ಹಂತದಲ್ಲಿ ವೈಟ್​ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

3ನೇ ಹಂತಕ್ಕೆ ತಡೆ: ಈಗಾಗಲೆ ಯೋಜಿಸಿದಂತೆ 3ನೇ ಹಂತ ದಲ್ಲಿ 123 ಕಿ.ಮೀ. ರಸ್ತೆಗಳನ್ನು ವೈಟ್​ಟಾಪಿಂಗ್ ರಸ್ತೆಗಳನ್ನಾಗಿ ಮಾಡಲು ಟೆಂಡರ್ ಪ್ರಕ್ರಿಯೆ ನಡೆಸಲು ಬಿಬಿಎಂಪಿ ಸಿದ್ಧತೆ ನಡೆಸಿತ್ತು. ಆದರೆ, ಮೊದಲ ಮತ್ತು ಎರಡನೇ ಹಂತದ ಯೋಜನೆಯಲ್ಲಿ ಅಕ್ರಮದ ಆರೋಪ ಕೇಳಿಬಂದಿದ್ದರಿಂದಾಗಿ 3ನೇ ಹಂತದ ಯೋಜನೆ ತಡೆ ಹಿಡಿಯಲು ಯಡಿಯೂರಪ್ಪ ಆದೇಶಿಸಿದ್ದಾರೆ.

2 ಸಾವಿರ ಕೋಟಿ ರೂ. ಯೋಜನೆ

ಸದ್ಯ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿರುವ ಎರಡೂ ಯೋಜನೆಗಳಿಗೆ ಖಚು ಮಾಡಿರುವ ಮೊತ್ತ ಬರೋಬ್ಬರಿ 2,134.78 ಕೋಟಿ ರೂ.ಗಳು. ಅದರಲ್ಲಿ 25 ರಸ್ತೆ (36.98 ಕಿ.ಮೀ.) ಗಳನ್ನು ಟೆಂಡರ್​ಶ್ಯೂರ್ ಅಡಿಯಲ್ಲಿ ಅಭಿವೃದ್ಧಿಪಡಿಸಲು 644.78 ಕೋಟಿ ರೂ. ವ್ಯಯಿಸಲಾಗುತ್ತಿದೆ. ಜತೆಗೆ 70 ರಸ್ತೆ (156.73 ಕಿ.ಮೀ.) ಗಳನ್ನು ವೈಟ್​ಟಾಪಿಂಗ್ ರಸ್ತೆಗಳನ್ನಾಗಿಸಲು 1,490 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಆ ಎಲ್ಲ ಹಣವನ್ನು ನಗರೋತ್ಥಾನ ಅನುದಾನದ ಮೂಲಕ ಪಡೆಯಲಾಗಿದೆ.

ರಾಜಕೀಯ ಉದ್ದೇಶ ಅನುಮಾನ

ಅನರ್ಹ ಶಾಸಕರಾದ ಬಿ. ಬಸವರಾಜು, ಮುನಿರತ್ನ ಮತ್ತು ಎಸ್.ಟಿ.ಸೋಮಶೇಖರ್ ಈ ಹಿಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಡಾ.ಜಿ.ಪರಮೇಶ್ವರ್ ವಿರುದ್ಧ ಸಿಟ್ಟಿಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರಿಂದಾಗಿ ಮೈತ್ರಿ ಸರ್ಕಾರ ಪತನಗೊಳ್ಳುವಂತಾಗಿತ್ತು. ಇದೀಗ ಆ ಶಾಸಕರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಟೆಂಡರ್​ಶ್ಯೂರ್ ಮತ್ತು ವೈಟ್​ಟಾಪಿಂಗ್ ಕಾಮಗಾರಿಗಳ ತನಿಖೆಗೆ ಆದೇಶಿಸುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಆ ಎರಡೂ ಯೋಜನೆಗಳ ಉಸ್ತುವಾರಿಯನ್ನು ಕೆ.ಜೆ.ಜಾರ್ಜ್ ಮತ್ತು ಡಾ. ಜಿ.ಪರಮೇಶ್ವರ್ ವಹಿಸಿಕೊಂಡಿದ್ದರು. ಒಂದು ವೇಳೆ ತನಿಖೆ ನಡೆಸಿದರೆ ಅವರ ವಿರುದ್ಧವೇ ನಡೆಸಬೇಕಾಗುತ್ತದೆ ಎಂಬುದು ಅನರ್ಹಗೊಂಡಿರುವ ಶಾಸಕರ ಲೆಕ್ಕಾಚಾರವಾಗಿದೆ. ಹೀಗಾಗಿ ತನಿಖೆಗೆ ಒತ್ತಡ ಹೇರಿದ್ದಾರೆ ಎಂಬ ಮಾತುಗಳಿವೆ.

 

ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿರುವ ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲು ಬಿಬಿಎಂಪಿ ಸಿದ್ಧವಿದೆ. ತನಿಖೆ ನಡೆದರೆ ಸತ್ಯಾಸತ್ಯತೆ ಬಹಿರಂಗವಾಗಲಿದೆ. ತನಿಖೆಗೆ ಬಿಬಿಎಂಪಿ ಎಲ್ಲ ರೀತಿಯ ಸಹಕಾರ ನೀಡಲಿದೆ.
| ಗಂಗಾಂಬಿಕೆ ಮೇಯರ್

Leave a Reply

Your email address will not be published. Required fields are marked *