ಬಸವರಾಜ ಇದ್ಲಿ ಹುಬ್ಬಳ್ಳಿ
ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಪಾಮೇಷನ್ ಟೆಕ್ನಾಲಜಿಯ (ಐಐಐಟಿ) ಕಾಯಂ ಕ್ಯಾಂಪಸ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 2021ರ ಶೈಕ್ಷಣಿಕ ಚಟುವಟಿಕೆ ಇಲ್ಲಿಂದಲೇ ಆರಂಭವಾಗಲಿದೆ.
2015ರಿಂದ ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣ ಎದುರಿನ ಐಟಿ ಪಾರ್ಕ್ನ ತಾತ್ಕಾಲಿಕ ಕ್ಯಾಂಪಸ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಐಐಟಿಗೆ ಧಾರವಾಡ ತಾಲೂಕಿನ ತಡಸಿನಕೊಪ್ಪದಲ್ಲಿ (ಇಟ್ಟಿಗಟ್ಟಿ ರಸ್ತೆ) 61 ಎಕರೆ ಭೂಮಿ ನೀಡಲಾಗಿದೆ. 2018ರ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯಂ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ಕಟ್ಟಡ ನಿರ್ಮಾಣ ವೇಗವಾಗಿ ನಡೆಯುತ್ತಿದೆ.
ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಧಿ ನಿಗದಿ ಮಾಡಲಾಗಿತ್ತಾದರೂ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲ ತಿಂಗಳು ವಿಳಂಬವಾಗಿದೆ. ಒಟ್ಟು 114 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಯ ಗುತ್ತಿಗೆಯನ್ನು ಬಿ.ಜಿ. ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಕಂಪನಿ ಪಡೆದು ಕೆಲಸ ಶುರು ಮಾಡಿದೆ.
ಕ್ಯಾಂಪಸ್ನಲ್ಲಿ ಏನೇನಿದೆ?: ಐಐಐಟಿ ಹೊಸ ಕ್ಯಾಂಪಸ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಪ್ರಾಥಮಿಕ ಹಂತದಲ್ಲಿ ಶೈಕ್ಷಣಿಕ ಕಟ್ಟಡ, ಹಾಸ್ಟೆಲ್, ವಸತಿ ಗೃಹ ನಿರ್ವಿುಸಲಾಗುತ್ತಿದೆ. ಐದು ಮಹಡಿಯ ಬೃಹತ್ ಕ್ಲಾಸ್ ರೂಂಗಳುಳ್ಳ ಅಕಾಡೆಮಿಕ್ ಬ್ಲಾಕ್ ನಿರ್ವಣವಾಗಿದೆ. ಇದರಲ್ಲಿ 30 ಕ್ಲಾಸ್ ರೂಂಗಳಿದ್ದು, ಪ್ರತಿ ಕ್ಲಾಸ್ನಲ್ಲಿ 80 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇರಲಿದೆ. 200 ಕೊಠಡಿಗಳುಳ್ಳ ಆರು ಮಹಡಿಯ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ವಿಶಾಲ ಡೈನಿಂಗ್ ಹಾಲ್, ಓದುವ ಕೊಠಡಿ, ಕ್ರೀಡಾ ಚಟುವಟಿಕೆ ಮುಂತಾದ ಕಾರ್ಯಗಳಿಗೆ ಅನುಕೂಲ ಒದಗಿಸಲಿದೆ. ವಿದ್ಯಾರ್ಥಿನಿಯರಿಗಾಗಿ 100 ಕೊಠಡಿಯ ಅತ್ಯಾಧುನಿಕ ಸೌಲಭ್ಯಗಳುಳ್ಳ ಹಾಸ್ಟೆಲ್ ಅನ್ನು ಇನ್ಪೋಸಿಸ್ ಫೌಂಡೇಷನ್ ನಿರ್ವಿುಸಿದೆ. ಹೆಲ್ತ್ ಹಾಗೂ ಫಿಟ್ನೆಸ್ ಬ್ಲಾಕ್ ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಮ್ ಯೋಗ ಕೊಠಡಿ, ಕ್ಲಬ್ ರೂಂ, ಕ್ಯಾಂಟೀನ್, ಇ- ಬ್ಯಾಂಕ್, ಸಲೂನ್, ಅಗತ್ಯ ವಸ್ತುಗಳ ಮಳಿಗೆ ಮೊದಲಾದ ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಒದಗಿಸಲಾಗುತ್ತಿದೆ. ಇಡೀ ಕ್ಯಾಂಪಸ್ ಅನ್ನು ವೈಫೈ ನೆಟ್ವರ್ಕ್ ಅಡಿ ತರಲಾಗುತ್ತಿದೆ. ಇನ್ನೊಂದು ವಿಶೇಷ ಎಂದರೆ ಇಡೀ ಕ್ಯಾಂಪಸ್ನಲ್ಲಿ ಎಲ್ಲಿಯೂ ವಿದ್ಯುತ್ ತಂತಿ ಅಥವಾ ಕೇಬಲ್ ಕಾಣಿಸುವುದಿಲ್ಲ. ಎಲ್ಲವೂ ಭೂಗತ ವ್ಯವಸ್ಥೆಯಡಿ ವಿನ್ಯಾಸಗೊಳಿಸಲಾಗಿದೆ. ಅತ್ಯಂತ ಸುಸಜ್ಜಿತ ಕ್ಯಾಂಪಸ್ ಇದಾಗಲಿದ್ದು, ವಿದ್ಯಾರ್ಥಿ- ಪಾಲಕರ ಗಮನ ಸೆಳೆಯಲಿದೆ ಎನ್ನುತ್ತಾರೆ ನಿರ್ವಪಕರು.
ಜಲಮೂಲ ರಕ್ಷಣೆ: 61 ಎಕರೆ ಜಾಗದ ಕ್ಯಾಂಪಸ್ನಲ್ಲಿ ಸಹಜವಾಗಿ ಲಭ್ಯವಾಗಿರುವ ಒಂದು ಕೆರೆಯನ್ನು ಯಥಾವತ್ ಅಭಿವೃದ್ಧಿಪಡಿಸಿ ಜಲಮೂಲ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. 1.2 ಕೋಟಿ ಲೀಟರ್ ನೀರಿನ ಸಾಮರ್ಥ್ಯದ ಕೆರೆ ಇದಾಗಿದೆ. ಇಲ್ಲಿಂದ ಸೂರ್ಯಾಸ್ಥ ವೀಕ್ಷಣೆ ಮಾಡಬಹುದಾಗಿದೆ.
ಹೊರಾಂಗಣ ಕ್ರೀಡೆಗಳಿಗೂ ಮೈದಾನ, ಇನ್ಕ್ಯೂಬೇಷನ್ ಸೆಂಟರ್, ಕ್ಯಾಂಪಸ್ನಲ್ಲಿ ಹಸಿರೀಕರಣಕ್ಕೂ ಆದ್ಯತೆ ನೀಡಲಾಗಿದೆ. ಒಟ್ಟಾರೆ, ಕ್ಯಾಂಪಸ್ ಅನ್ನು ಅತ್ಯಂತ ಸುಂದರ ಹಾಗೂ ಆಕರ್ಷಕವಾಗಿ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕಿಯೋನಿಕ್ಸ್ ಸಹಯೋಗದಲ್ಲಿ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ಐಐಐಟಿ ನಿರ್ದೇಶಕ ಡಾ. ಕವಿ ಮಹೇಶ.
ಸದ್ಯ ಆನ್ಲೈನ್ ಕ್ಲಾಸ್: ಕರೊನಾ ಹಿನ್ನೆಲೆಯಲ್ಲಿ ಸದ್ಯ ಆನ್ಲೈನ್ ಕ್ಲಾಸ್ ಮಾತ್ರ ನಡೆಸಲಾಗುತ್ತಿದೆ. ಬಿಟೆಕ್ ಇನ್ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್, ಬಿಟೆಕ್ ಇನ್ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಎಂಬ ಎರಡು ಕೋರ್ಸ್ಗಳನ್ನು ಐಐಐಟಿಯಲ್ಲಿ ಕಲಿಸಲಾಗುತ್ತಿದೆ. ಇಲ್ಲಿಯ ಇಂದಿರಾ ಗಾಜಿನ ಮನೆ ಎದುರಿನ ಐಟಿ ಪಾರ್ಕ್ನಲ್ಲಿ 2015ರ ಆಗಸ್ಟ್ನಿಂದ ಮೊದಲ ಬ್ಯಾಚ್ ಆರಂಭವಾಗಿದ್ದು, ಅಲ್ಲಿಯೇ ವರ್ಗಗಳು ನಡೆಯುತ್ತಿದ್ದವು. ಕಾಯಂ ಕ್ಯಾಂಪಸ್ ಆದ ನಂತರ ಇನ್ನಷ್ಟು ಕೋರ್ಸ್ಗಳು ಬರಲಿವೆ. ಆರನೇ (2020-21) ವರ್ಷದ ಶೈಕ್ಷಣಿಕ ಚಟುವಟಿಕೆ ಕಾಯಂ ಕ್ಯಾಂಪಸ್ನಲ್ಲಿ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಕರೊನಾ ಒಂದು ವರ್ಷ ಮುಂದೂಡಿದೆ. ಏಳನೇ ವರ್ಷದ ಚಟುವಟಿಕೆ ಕಾಯಂ ಕ್ಯಾಂಪಸ್ನಲ್ಲೇ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.
ವಿದ್ಯಾರ್ಥಿಗಳಿಗೆ ಸದ್ಯ ಆನ್ಲೈನ್ ಕ್ಲಾಸ್ ಮಾತ್ರ ನಡೆಯುತ್ತಿವೆ. ಮಾರ್ಚ್- ಏಪ್ರಿಲ್ ವೇಳೆಗೆ ಕಾಯಂ ಕ್ಯಾಂಪಸ್ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ವರ್ಷ ಆಗಸ್ಟ್ನಿಂದ ಶುರುವಾಗುವ ಶೈಕ್ಷಣಿಕ ಚಟುವಟಿಕೆ ಹೊಸ ಕ್ಯಾಂಪಸ್ನಲ್ಲೇ ಆರಂಭಿಸಲು ಐಟಿ ಪಾರ್ಕ್ನಿಂದ ಈಗಿಂದಲೇ ಸ್ಥಳಾಂತರ ಪ್ರಕ್ರಿಯೆ ನಡೆದಿದೆ.
ಡಾ. ಕವಿ ಮಹೇಶ, ಐಐಐಟಿ ಧಾರವಾಡ ನಿರ್ದೇಶಕ