Tuesday, 11th December 2018  

Vijayavani

Breaking News

ತಟ್ಟೆ ಇಡ್ಲಿ ಅನ್ನೋದೇ ಅವನ ಹೆಸರಾಗಿತ್ತು…

Sunday, 24.12.2017, 3:03 AM       No Comments

| ಪ್ರೊ. ಎಂ. ಕೃಷ್ಣೇಗೌಡ

ಗೆಲ್ಲಲೇಬೇಕು ಅಂತ ಆಡುವ ಆಟಗಳಲ್ಲಿ ಖುಷಿ ಸಿಗೋದಿಲ್ಲ. ರ್ಯಾಂಕು ಹೊಡೀಬೇಕು ಅಂತ ಓದಿದ ಓದಿನಲ್ಲಿ ಓದುವ ಖುಷಿ ಸಿಗೋದಿಲ್ಲ. ದುಡ್ಡು ಸಂಪಾದಿಸಬೇಕು ಅಂತ ಮಾಡಿದ ದುಡಿಮೆಯಲ್ಲಿ ದುಡಿಮೆಯ ಸಂತೋಷ ದಕ್ಕುವುದಿಲ್ಲ. ಬದುಕುವ ಸಂತೋಷಕ್ಕಾಗಿ ಮೊದಲು ಬದುಕಬೇಕು, ಸಾಧನೆ, ಸ್ಪರ್ಧೆ ಎಲ್ಲಾ ಆಮೇಲೆ…

‘ತಟ್ಟೆ ಇಡ್ಲೀ’ -ಅಂತ ಯಾರಾದರೂ ಕರೆದರೆ ತಟಕ್ಕನೆ ತಿರುಗಿ ‘ಓ’ ಅನ್ನೋನು ಅವನು. ಹೆಸರಿರೋದೇ ಅದಕ್ಕಲ್ವಾ? ಕರೆದಾಗ ಓ ಅನ್ನೋದಕ್ಕೆ! ‘ನನ್ನ ಹೆಸರು ಚಂದ್ರ ಸಾರ್. ಆದರೆ ಎಲ್ಲರೂ ತಟ್ಟೆ ಇಡ್ಲಿ ಅಂತಾನೇ ಕರಿಯೋದು. ನೀವೂ ಅಂಗೇ ಕರೀರಿ ಪರವಾಯಿಲ್ಲ’ ಅಂದಿದ್ದ ನನಗವನು ಮೊದಲು ಸಿಕ್ಕಾಗ.

ತಟ್ಟೆ ಇಡ್ಲಿ ಹೆಚ್ಚೂ ಕಡಿಮೆ ನನ್ನ ವಾರಗೆಯವನೇ. ನಾನು ಬಿ.ಎಸ್ಸಿ. ಓದುವಾಗ ನಮ್ಮ ಹಾಸ್ಟಲಿನ ಅಡುಗೆ ಮನೆಯಲ್ಲಿ ಕೆಲಸ ಮಾಡ್ತಾ ಇದ್ದ. ಅಡುಗೆಯವರಿಗೆ ಸಹಾಯ ಮಾಡೋದು, ಡೈನಿಂಗ್ ಹಾಲ್ ಗುಡಿಸೋದು, ಊಟಕ್ಕೆ ಬಡಿಸೋದು- ಇಂಥ ಕೆಲಸಗಳನ್ನು ಮಾಡ್ತಾ ಇದ್ದ.

ಚಂದ್ರನಿಗೆ ತಟ್ಟೆ ಇಡ್ಲಿ ಅನ್ನುವ ಹೆಸರನ್ನು ಯಾರಿಟ್ಟರು? ಯಾವಾಗ ಇಟ್ಟರು? ಅನ್ನುವುದು ನನಗೆ ಗೊತ್ತಿಲ್ಲ. ಆದರೆ ಯಾಕಿಟ್ಟರು ಅನ್ನುವುದು ಮಾತ್ರ ಗೊತ್ತಾಯಿತು. ಚಂದ್ರನಿಗೆ ತಟ್ಟೆ ಇಡ್ಲಿ ಅಂದರೆ ತುಂಬಾ ಇಷ್ಟವಂತೆ. ಅಲ್ಲೆಲ್ಲೋ ಒಂಟಿಕೊಪ್ಪಲಿನಲ್ಲಿ ಒಂದು ಕಡೆ ಒಳ್ಳೆ ತಟ್ಟೆ ಇಡ್ಲಿ ಸಿಗುತ್ತಂತೆ. ಚಂದ್ರ ಎರಡು, ಮೂರು ದಿನಕ್ಕೊಂದು ಸಲವಾದರೂ ಅಲ್ಲಿಗೆ ಹೋಗುತ್ತಿದ್ದನಂತೆ. ನಮ್ಮ ಹಾಸ್ಟಲಿನಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ ತಟ್ಟೆ ಇಡ್ಲಿ ಮಾಡೋರು. ಆವತ್ತು ಚಂದ್ರನಿಗೆ ಹಬ್ಬ! ತಟ್ಟೆ ಇಡ್ಲಿ ಮಾಡಿದ ದಿನ ಮೂರೂ ಹೊತ್ತು ಅದನ್ನೇ ತಿನ್ನೋನಂತೆ. ಹಾಗಾಗಿ ಆ ಹೆಸರೇ ಕಾಯಂ ಆಯಿತು. ಮೊದಮೊದಲು ಚಂದ್ರನನ್ನ ತಟ್ಟೆ ಇಡ್ಲಿ ಅಂತ ಯಾರಾದರೂ ಕರೆದರೆ ಸಣ್ಣಗೆ ಸಿಡುಕೋನಂತೆ. ಆಮೇಲಾಮೇಲೆ ಆ ಹೆಸರಿಗೇ ಅವನು ಹೊಂದಿಕೊಂಡುಬಿಟ್ಟನಂತೆ. ‘ಸಾರ್, ಯಾರು ಏನಾದರೂ ಅನ್ನಲಿ, ಏನಂತಾದರೂ ಕರೀಲಿ. ನನಗೆ ತಟ್ಟೆ ಇಡ್ಲಿ ಅಂದ್ರೆ ತುಂಬಾ ಇಷ್ಟ ಸಾರ್. ಈವತ್ತೂ ಒಳ್ಳೆ ಚಟ್ನಿ, ಒಂದು ಬೆರಳ ಗಾತ್ರ ಬೆಣ್ಣೆ ಹಾಕಿದ್ರೆ ಹತ್ತೋ ಹದಿನೈದೋ ತಟ್ಟೆ ಇಡ್ಲಿ ತಿಂತೀನಿ ನಾನು’ ಅಂದಿದ್ದ ಚಂದ್ರ ಒಂದು ಸಲ. ತಟ್ಟೆ ಇಡ್ಲಿ ಅಂದ್ರೆ ಚಂದ್ರ ಅದ್ಹೆಂಗೆ ಬಿದ್ದು ಸಾಯ್ತಾನೆ ಅಂತ ನಮ್ಮ ಅಡುಗೆಭಟ್ಟ ನಾರಾಯಣ ಬಗೆಬಗೆಯಾದ ಕತೆ ಹೇಳೋನು.

ನಾನು ಎಂ.ಎ. ಪದವಿ ಮುಗಿಸಿದ ಮೇಲೆ ಹಾಸ್ಟಲ್ ಕಡೆ ಹೆಚ್ಚಾಗಿ ಹೋಗಲಿಲ್ಲ. ವರ್ಷಕ್ಕೋ ಎರಡು ವರ್ಷಕ್ಕೋ ಎಲ್ಲಾದರೊಂದು ಕಡೆ ತಟ್ಟೆ ಇಡ್ಲಿ ಕಣ್ಣಿಗೆ ಬೀಳೋನು. ‘ಏನಪ್ಪಾ, ಹೆಂಗಿದೀಯಾ?’, ‘ಚೆನ್ನಾಗಿದೀನಿ ಸಾರ್’ ಅನ್ನುವಷ್ಟಕ್ಕೆ ನಮ್ಮ ಮಾತುಕತೆ ಮುಗಿಯೋದು. ಆಮೇಲಾಮೇಲೆ ಅವನು ನನಗೆ ಸಿಗಲೇ ಇಲ್ಲ.

ಎರಡು ಮೂರು ವರ್ಷದ ಹಿಂದೆ ನಾನು ಪೊಲೀಸ್ ಇಲಾಖೆಯ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಒಬ್ಬ ಸಬ್​ಇನ್ಸ್​ಪೆಕ್ಟರ್ ಬಂದು ಮಾತಾಡಿಸಿದ. ‘ನನ್ನ ಗುರುತು ಸಿಗಲಿಲ್ಲ ನಿಮಗೆ?! ಅಂದ. ಎದೆಯ ಮೇಲೆ ಹೆಸರಿನ ಪಟ್ಟಿ ನೋಡಿದೆ. ‘ಆರ್. ಚಂದ್ರಶೇಖರ್’ ಅಂತ ಇತ್ತು. ಥಟ್ಟನೆ ನೆನಪಾಯಿತು. ‘ಅರೆ! ತಟ್ಟ್……’ ಅನ್ನಲು ಹೊರಟಿದ್ದೆ. ‘ಅನ್ನಿ ಪರವಾಗಿಲ್ಲ. ನಾನೇ ತಟ್ಟೆ ಇಡ್ಲಿ’ ಅಂದ. ‘ಕಾರ್ಯಕ್ರಮ ಮುಗಿದ ಮೇಲೆ ಮನೆಗೆ ಬನ್ನಿ’ ಅಂತ ಕರೆದ. ಒಪ್ಪಿಕೊಂಡೆ.

ತಟ್ಟೆ ಇಡ್ಲಿ… ಅಲ್ಲಲ್ಲ, ಸಬ್​ಇನ್ಸ್​ಪೆಕ್ಟರ್ ಚಂದ್ರಶೇಖರನ ಮನೆಗೆ ಹೋದೆ. ಅವನ ಹೆಂಡತಿ ಮಕ್ಕಳಿಗೆಲ್ಲಾ ನನ್ನ ಪರಿಚಯ ಮಾಡಿದ. ‘ಯೂನಿವರ್ಸಿಟಿ ಹಾಸ್ಟಲ್​ನಲ್ಲಿ ನಾನು ಡೈಲಿ ವೇಜಸ್ ಕೆಲಸ ಮಾಡ್ತಾ ಇದ್ನಲ್ಲ, ಆಗ ಇವರೂ ನಮ್ಮ ಹಾಸ್ಟಲಲ್ಲೇ ಇದ್ರು. ಆಗ ನನ್ನನ್ನ ಎಲ್ಲರೂ ತಟ್ಟೆ ಇಡ್ಲಿ ಅಂತ ಕರಿಯೋರು’ ಅಂತ ದೊಡ್ಡನಗೆ ನಕ್ಕ ಚಂದ್ರ. ‘ಹಾಸ್ಟಲ್ ಬಿಟ್ಟು ನಾನು ಪೊಲೀಸ್ ಡಿಪಾರ್ಟ್ ಮೆಂಟಿಗೆ ಕೆಲಸಕ್ಕೆ ಸೇರಿಕೊಂಡೆ- ಕಾನ್ಸ್​ಟೇಬಲ್ ಆಗಿ. ಈಗ ಸಬ್​ಇನ್ಸ್​ಪೆಕ್ಟರ್ ಆಗಿದೀನಿ’ ಅಂದ. ‘ತಟ್ಟೆ ಇಡ್ಲಿ ಅಂದ್ರೆ ಚಂದ್ರರಿಗೆ ಈಗಲೂ ಇಷ್ಟಾನಾ?’ ಅಂತ ಕೇಳಿದೆ ಅವನ ಹೆಂಡತಿಯನ್ನ. ‘ಇಲ್ಲ ಸರ್, ಅದನ್ನ ಕಂಡ್ರೆ ಆಗಲ್ಲ ಅವರಿಗೆ. ನಮ್ಮ ಮನೇಲಿ ಇಡ್ಲಿ ಮಾಡೋದೇ ಕಡಿಮೆ. ನಾವು ಹೋಟೆಲ್ಲಿಗೆ ಹೋದಾಗಲೇ ಇಡ್ಲಿ-ವಡೆ ತಿನ್ನೋದು’ ಅಂದರು ಆಕೆ.

ಆಶ್ಚರ್ಯವಾಯಿತು ನನಗೆ. ‘ಯಾಕಪಾ ಚಂದ್ರ, ಈ ಜನ್ಮದ ಕೋಟಾ ಮುಗೀತು ಅಂತಾನಾ?’ ಅಂದೆ. ‘ಅದು ಹಾಗಲ್ಲ ಸಾರ್. ಅದೇನು ನನ್ನ ನಾಲಿಗೆ ಗುಣವೋ ಕಾಣೆ. ಭೂಲೋಕದಲ್ಲಿ ಈ ತಟ್ಟೆ ಇಡ್ಲಿಗಿಂತ ರುಚಿಯಾದ ಪದಾರ್ಥ ಇನ್ನಿಲ್ಲ ಅಂದ್ಕೊಂಡು ತಿನ್ತಾ ಇದ್ದೆ. ಮನುಷ್ಯನಿಗೆ ಊಟ-ತಿಂಡಿ ಮಾಡೋದರಲ್ಲೂ ಒಂದು ಸುಖ ಇರುತ್ತೆ. ನಾನು ತಪು್ಪ ಮಾಡಿಬಿಟ್ಟೆ. ಆ ಸುಖಾನ ಕಳಕೊಂಡುಬಿಟ್ಟೆ’ ಅಂದ ಚಂದ್ರ. ‘ಯಾಕೆ? ಏನಾಯಿತು?’ ಅಂದ್ರೆ ಚಂದ್ರ ಹೇಳಿದ-

‘ನನಗಿನ್ನೂ ಈ ಪೊಲೀಸ್ ಕೆಲಸ ಸಿಕ್ಕಿರಲಿಲ್ಲ ಆಗ. ಹಾಸ್ಟಲ್ ಕೆಲಸ ಬಿಟ್ಟು ಸಮಾಜ ಕಲ್ಯಾಣ ಇಲಾಖೇಲಿ ಡೈಲಿ ವೇಜಸ್ ಮಾಡ್ತಾ ಇದ್ದೆ. ಆಗಲೂ ತಟ್ಟೆ ಇಡ್ಲಿ ಅಂದ್ರೆ ಪ್ರಾಣಾನೆ. ಆ ಡಿಪಾರ್ಟ್​ವೆುಂಟ್ನಲ್ಲಿ ಬರ್ತಾ ಇದ್ದದ್ದು ಸಣ್ಣ ಸಂಬಳವೇ ಆದರೂ ಸಂಬಳದ ಕಾಲುಭಾಗ ಬರೀ ತಟ್ಟೆ ಇಡ್ಲಿ ತಿನ್ನೋಕೇ ಖರ್ಚು ಮಾಡ್ತಾ ಇದ್ದೆ. ಬೇರೆ ದುರಭ್ಯಾಸಗಳೂ ಇರಲಿಲ್ಲ. ಮದುವೇನೂ ಆಗಿರಲಿಲ್ಲ……’.

‘ತಪು್ಪ ಮಾಡಿದೆ ಅಂದೆಯಲ್ಲಾ ಅದೇನು?’ ನಡುವೆ ಬಾಯಿಹಾಕಿ ಕೇಳಿದೆ.

‘ಆಗ ನಮ್ಮ ದಸರಾ ಟೈಮಲ್ಲಿ ಒಂದು ಸಂಘದೋರು ‘ಇಡ್ಲಿ ತಿನ್ನೋ ಸ್ಪರ್ಧೆ’ ಅಂತ ಮಾಡಿದ್ದರು. ನಾನೂ ಹೋದೆ. ಅದು ನೋಡಿದರೆ ತಟ್ಟೆ ಇಡ್ಲಿ! ಛಿಲ್! ಅಂತ ಬಾಯಲ್ಲಿ ನೀರು ಕಿತ್ಕೊಂಡುಬಿಡ್ತು. ಮೂವತ್ತೆರಡೋ ಮೂವತ್ತಮೂರೋ ಜನ ಸ್ಪರ್ಧೆಯಲ್ಲಿದ್ದರು. ನಾನು ಇಪ್ಪತ್ತೆರಡು ಇಡ್ಲಿ ತಿಂದು ಫಸ್ಟ್ ಪ್ರೖೆಜ್ ತೊಗೊಂಡೆ!’.

‘ಸರಿಯಪ್ಪಾ, ತಪು್ಪ ಮಾಡಿದ್ದೇನು ಅದರಲ್ಲಿ?’.

‘ಯಾವತ್ತು ಕಾಂಪಿಟೇಷನ್​ಗೆ ಹೋದೆನೋ ಆವತ್ತೇ ನಾನು ಇಡ್ಲಿಯ ರುಚಿಯನ್ನ ಕಳ್ಕೊಂಡುಬಿಟ್ಟೆ. ಮೊದಲ ಎರಡೋ ಮೂರೋ ಇಡ್ಲಿಗಳನ್ನ ಖುಷಿಯಾಗಿ ತಿಂದಿರಬಹುದು. ಅದಾದ ಮೇಲೆ ‘ನಾನು ಗೆಲ್ಲಬೇಕು’ ಅನ್ನೋ ಟೆನ್ಷನ್​ನಲ್ಲಿ ಗಬಗಬಾ ಅಂತ ತಿನ್ತಾ ಹೋದೆ. ಈ ಇಡ್ಲಿ ಅನ್ನೋದು ಎಂಥಾ ರುಚಿಗೆಟ್ಟ ಪದಾರ್ಥ ಅಂತ ಗೊತ್ತಾಗಿದ್ದು ಆವಾಗಲೇ. ಆದರೆ ಗೆಲ್ಲಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದೆ ನಾನು. ಅಷ್ಟೊಂದು ಜೊಲ್ಲಾಡಿಸಿಕೊಂಡು, ಚಪ್ಪರಿಸಿಕೊಂಡು ತಿನ್ತಾ ಇದ್ದ ಇಡ್ಲಿ ಆಗ ಹೊಟ್ಟು-ತೌಡು ತಿಂದ ಹಾಗಾಗ್ತಾ ಇತ್ತು. ನಾನು ಆವತ್ತು ಗೆದ್ದೆ ನಿಜ. ಆದರೆ ಆವತ್ತಿಂದ ನನ್ನ ನಾಲಿಗೆ ಇಡ್ಲಿ ರುಚಿಯನ್ನ ಕಳಕೊಂಡುಬಿಡ್ತು. ಸ್ಪರ್ಧೆಗೆ ಬಿದ್ದು ನನ್ನ ಬದುಕಿನ ಒಂದು ದೊಡ್ಡ ಸುಖಾನ ಕಳಕೊಂಡುಬಿಟ್ಟೆ ಅಂತ ಬಹಳ ದಿನ ಬೇಜಾರುಪಟ್ಟೆ. ಆದರೆ ಬೇಜಾರು ಕೂಡ ಅಭ್ಯಾಸವಾಗಿರೋದರಿಂದ ಹಿಂದೆ ಆಗ್ತಾ ಇದ್ದಷ್ಟು ಬೇಜಾರು ಅನ್ನಿಸ್ತಿಲ್ಲ ಈಗ’.

ಹಾಗಂತ ಹೇಳಿ ಮಾತು ಮುಗಿಸಿದ ಚಂದ್ರ.

* * *

ನನ್ನ ಮುಂದಿನ ಮಾತುಗಳನ್ನು ಬಹಳ ಜನ ಒಪ್ಪಲಿಕ್ಕಿಲ್ಲ- ಗೆಲ್ಲಲೇಬೇಕು ಅಂತ ಆಡುವ ಆಟಗಳಲ್ಲಿ ಖುಷಿ ಸಿಗೋದಿಲ್ಲ. ರ್ಯಾಂಕು ಹೊಡೀಬೇಕು ಅಂತ ಓದಿದ ಓದಿನಲ್ಲಿ ಓದುವ ಖುಷಿ ಸಿಗೋದಿಲ್ಲ. ದುಡ್ಡು ಸಂಪಾದಿಸಬೇಕು ಅಂತ ಮಾಡಿದ ದುಡಿಮೆಯಲ್ಲಿ ದುಡಿಮೆಯ ಸಂತೋಷ ದಕ್ಕುವುದಿಲ್ಲ, ‘ಬದುಕುವ ಸಂತೋಷಕ್ಕಾಗಿ ಮೊದಲು ಬದುಕಬೇಕು, ಸಾಧನೆ-ಗೀದನೆ, ಸ್ಪರ್ಧೆ-ಗಿರ್ದೆ ಎಲ್ಲಾ ಆಮೇಲೆ’ ಅಂದುನೋಡಿ. ಈ ಕಾಲದ ಹುಡುಗ ಹುಡುಗಿಯರು ನಿಮ್ಮನ್ನೇ ಅದೊಂದು ಬಗೆ ಕನಿಕರದಿಂದ ನೋಡಿ ಕೊಂಕುನಗೆ ನಗುತ್ತಾರೆ. ತಪು್ಪ ಅವರದಲ್ಲ! ಅವರಿಗೆ ಅವರ ಅಪ್ಪ-ಅಮ್ಮ, ಅವರ ಸ್ಕೂಲು-ಕಾಲೇಜು, ಯೂನಿವರ್ಸಿಟಿಗಳೆಲ್ಲ ಹೇಳಿಕೊಟ್ಟಿರುವುದೇ ಅದನ್ನ- ಗೆಲ್ಲಬೇಕು, ಫಸ್ಟ್ ಬರಬೇಕು, ಎಲ್ಲರಿಗಿಂತ ಎತ್ತರಕ್ಕೇರಬೇಕು ಅಂತ. ಈ ಬದುಕಿನಲ್ಲೂ ಆಸ್ವಾದಿಸುವಂಥ ವಿಷಯಗಳಿವೆ, ವಸ್ತುಗಳಿವೆ ಅಂತ ಯಾರೂ ಅವರಿಗೆ ಹೇಳಿಕೊಡುತ್ತಿಲ್ಲ. ‘ಒಂದು ಬದುಕು ಬದುಕೋದಕ್ಕೆ ಇಷ್ಟೊಂದು ಸ್ಪರ್ಧೆ, ಇಷ್ಟೊಂದು ಸಂಪಾದನೆ ಬೇಕೇ ಬೇಕಾ ರಾಜ?’ ಅಂತ ಕೇಳಿನೋಡಿ. ಅವರು ನಿಮಗೆ ಹಲವಾರು ಕತೆ ಹೇಳುತ್ತಾರೆ. ‘ಇಲ್ಲೊಂದು ಸ್ಪರ್ಧೆ ಅಂತ ಇಲ್ಲದೇ ಇದ್ದರೆ ನನ್ನ ಶಕ್ತಿಯನ್ನ, ಸಾಮರ್ಥ್ಯವನ್ನ, ಪ್ರತಿಭೆಯನ್ನ ಇನ್ನಷ್ಟು, ಮತ್ತಷ್ಟು ಅಂತ ಬೆಳೆಸಿಕೊಳ್ಳೋದಕ್ಕೆ ಸಾಧ್ಯವೇ ಆಗೋದಿಲ್ಲ ಅಂಕಲ್. ಈವತ್ತು ಈ ಭೂಮಿಯ ಮೇಲೆ ಏನೇನು ಸಂಶೋಧನೆ, ಅನ್ವೇಷಣೆ ಅಂತ ಆಗ್ತಾ ಇವೆಯೋ ಅವೆಲ್ಲಾ ಇಲ್ಲೊಂದು ಸ್ಪರ್ಧೆ, ಸವಾಲು, ಗೆಲ್ಲಬೇಕೆಂಬ ಹಂಬಲ ಇರೋದರಿಂದಲೇ ಗೊತ್ತಾ? ನೀವು ಹೇಳಿದಿರಲ್ಲ ಬದುಕಿನ ಖುಷಿ, ಬದುಕುವ ಸಂತೋಷ, ಆಸ್ವಾದನೆ, ಆನಂದ, ಮಣ್ಣು-ಮಸಿ ಅಂತ, ಅವು ಮನುಷ್ಯನ ಮಹತ್ವಾಕಾಂಕ್ಷೆಗಳನ್ನೇ ಕೊಂದುಬಿಡುತ್ತವೆ. ಮನುಷ್ಯ ಅಷ್ಟರಲ್ಲೇ ನಿಂತರೆ ಸೋಮಾರಿಯಾಗಿಬಿಡ್ತಾನೆ. ಸಾರಿ, ವಿ ಡೋಂಟ್ ಅಗ್ರೀ ವಿತ್ ಯು’ ಅಂದುಬಿಡುತ್ತಾರೆ ಅವರು. ಅನ್ನಲಿ ಬಿಡಿ.

ಲಾವೋ ತ್ಸು ಹೇಳುವ ಒಂದು ಮಾತಿದೆ- ‘ಆಛ್ಚಿಚ್ಠಠಛಿ ಠಜಛಿ ್ಚಞಟಛಿಠಿಛಿಠ ಡಿಜಿಠಿಜ ್ಞ ಟ್ಞಛಿ, ್ಞ ಟ್ಞಛಿ ್ಚಞಟಛಿಠಿಛಿಠ ಡಿಜಿಠಿಜ ಜಛ್ಟಿ’- ಧ್ವನಿಪೂರ್ಣವಾದ ಮಾತು. ‘ನೀವು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲವಾದರೆ ನಿಮ್ಮೊಂದಿಗೆ ಯಾರೂ ಸ್ಪರ್ಧಿಸುವುದಿಲ್ಲ’. ಇಲ್ಲಿ ‘ಯಾರೂ ಸ್ಪರ್ಧಿಸುವುದಿಲ್ಲ’ ಎಂಬ ಮಾತಿಗೆ ‘ಯಾರೂ ಸ್ಪರ್ಧಿಸಲು ಇಷ್ಟಪಡುವುದಿಲ್ಲ’ ಎಂದೂ, ‘ಯಾರೂ ಸ್ಪರ್ಧಿಸಲು ಸಾಧ್ಯವಿಲ್ಲ’ ಎಂದೂ ಅರ್ಥವಿರುವುದು ಸಾಧ್ಯವಿದೆ.

ಮಕ್ಕಳು ಆಟವಾಡುವಾಗ, ತುಂಬಾ ಸಂತೋಷಪಡುತ್ತವೆ. ಯಾಕೆಂದರೆ ಮಕ್ಕಳ ಆಟಗಳಲ್ಲಿ ಸ್ಪರ್ಧೆ ಇರುವುದಿಲ್ಲ. ಸ್ಪರ್ಧೆಯೇ ಇಲ್ಲ ಅಂದಮೇಲೆ ಗೆಲ್ಲುವ ಒತ್ತಡವೂ ಇರುವುದಿಲ್ಲ. ಗೆಲ್ಲಲೇಬೇಕೆಂಬ ಪ್ರತಿಷ್ಠೆಯೂ ಇರುವುದಿಲ್ಲ. ಅದೇ ದೊಡ್ಡವರು ಆಡುವ ಆಟಗಳನ್ನು ನೋಡಿ. ಅಲ್ಲಿ ಸ್ಪರ್ಧೆ ಇರುತ್ತದೆ. ಗೆಲ್ಲಲೇಬೇಕೆಂಬ ಆಸೆ ಇರುತ್ತದೆ. ಇದರಿಂದಾಗಿ ಅಲ್ಲಿ ಪ್ರತಿಷ್ಠೆ ಇರುತ್ತದೆ, ತಂತ್ರಗಳಿರುತ್ತವೆ, ಹುನ್ನಾರಗಳಿರುತ್ತವೆ. ಆಟಗಳಿಂದ ಒತ್ತಡ ನಿವಾರಣೆಯಾಗುವುದರ ಬದಲಾಗಿ ಹೆಚ್ಚಾಗುತ್ತದೆ. ‘ತಾನು ಸೋತುಬಿಟ್ಟರೆ?’ ಎಂಬುದೊಂದು ಪ್ರಶ್ನೆಯೇ ನಿದ್ದೆ ಎಚ್ಚರಗಳಲ್ಲೆಲ್ಲಾ ಆಟಗಾರನನ್ನು ಹೆದರಿಸುತ್ತಿರುತ್ತದೆ. ಈ ಬಾರಿ ಗೆದ್ದು ಮೊದಲಿಗನಾದವನು ತನ್ನ ಬದುಕಿಡೀ ‘ಆ ಗೆಲುವು ಆಕಸ್ಮಿಕವಲ್ಲ’ ಅಂತ ಸಾಧಿಸಿ ತೋರಿಸಲು ಬದುಕಬೇಕಾಗುತ್ತದೆ.

ಸ್ಪರ್ಧೆ, ಗೆಲ್ಲುವುದು ಅನ್ನುವುದು ನಮ್ಮ ಚುನಾವಣೆಗಳಲ್ಲಿರುವಷ್ಟು ಎಲ್ಲಿಯೂ ಇಲ್ಲ. ಆದ್ದರಿಂದಲೇ ಅಲ್ಲಿ ನಡೆಯುವಷ್ಟು ಅನೈತಿಕ ವ್ಯವಹಾರಗಳು ಎಲ್ಲೂ ನಡೆಯುವುದಿಲ್ಲ. ಎಷ್ಟೋ ಬಾರಿ ಅಹಂಕಾರಿಗಳೂ, ಅಯೋಗ್ಯರೂ ಚುನಾವಣೆಗೆ ನಿಲ್ಲುತ್ತಾರೆ. ಇದು ಎಲ್ಲಾ ಪಕ್ಷಗಳಲ್ಲೂ ನಡೆಯುತ್ತದೆ. ಆಗ ಆ ಪಕ್ಷದ ಅಧ್ಯಕ್ಷರನ್ನೋ, ಮುಖಂಡರನ್ನೋ ‘ಇಂಥಾ ಅಯೋಗ್ಯನಿಗೆ, ಅವಿವೇಕಿಗೆ, ಗೊತ್ತಿದ್ದೂ ಗೊತ್ತಿದ್ದೂ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದೀರಲ್ಲಾ, ಸರಿಯಾ?’ ಅಂತ ಕೇಳಿನೋಡಿ. ಅವರು, ‘ನೋಡಿ, ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲುವುದೇ ಮುಖ್ಯ. ಉಳಿದದ್ದೆಲ್ಲಾ ಆಮೇಲೆ!’ ಅಂದುಬಿಡುತ್ತಾರೆ. ಹೇಗಾದರೂ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಅವರಿಗೆ, ಗೆಲ್ಲುವುದರಿಂದಾಗುವ ಲಾಭಗಳ ಮೇಲೆ ಕಣ್ಣಿಟ್ಟಿರುವ ಅವರಿಗೆ ಈ ಅನೈತಿಕತೆ ದೊಡ್ಡದಾಗಿ ಕಾಣುವುದಿಲ್ಲ.

ಈ ಕ್ರಿಕೆಟ್ಟು ಅನ್ನುವ ಆಟ ಇದೆಯಲ್ಲ, ಅದು ಹಿಂದೆ 5-6 ದಿನ ನಡೆಯೋದು- ಟೆಸ್ಟ್ ಮ್ಯಾಚು ಅಂತ. ಆ ಟೆಸ್ಟ್ ಮ್ಯಾಚುಗಳ ಒಂದು ಒಳ್ಳೆಯ ಸಂಗತಿ ಅಂದರೆ, ಅದರಲ್ಲಿ ಗೆಲ್ಲುವ ಸೋಲುವ ವಿಷಯಕ್ಕಿಂತ ಆಟ ಆಡುವುದೇ ಮುಖ್ಯವಾಗಿತ್ತು. ಈಗಲೂ ಹೇಳುತ್ತಾರೆ- ನಿಜವಾದ ಕ್ರಿಕೆಟ್ ಆಟವನ್ನು ನೋಡಬೇಕಾದರೆ ಟೆಸ್ಟ್ ಮ್ಯಾಚುಗಳನ್ನಷ್ಟೇ ನೋಡಬೇಕು ಅಂತ. ಕಲಾತ್ಮಕವಾದ ಕ್ರಿಕೆಟ್ ಇದ್ದುದು ಟೆಸ್ಟ್ ಮ್ಯಾಚುಗಳಲ್ಲಿ ಮಾತ್ರ. ಆಗ ನನಗೂ ಬೇಜಾರಾಗುತ್ತಿತ್ತು- ‘ಗೆಲ್ಲೋ ಹಂಗಿಲ್ಲ, ಸೋಲೋ ಹಂಗಿಲ್ಲ. ಇದೆಂಥಾ ಸೋಮಾರಿ ಆಟ?’ ಅಂದ್ಕೊಳ್ತಿದ್ದೆ. ಆ ನಂತರ ಗೆಲುವು-ಸೋಲು, ದುಡ್ಡು-ಪ್ರತಿಷ್ಠೆ ಇವೇ ಮುಖ್ಯವಾದ ಮೇಲೆ ಬಂದದ್ದೇ ಒನ್​ಡೇ ಕ್ರಿಕೆಟ್. ಇದು ಯಾರಾದರೂ ಯಾರನ್ನಾದರೂ ಗೆಲ್ಲಲೇಬೇಕು ಎಂಬ ಆಧುನಿಕ ಮನುಷ್ಯನ ಆಸೆಯ ಮೇಲೆ ನಿಂತ ಆಟ. ಈಗ ಇದನ್ನೂ ದಾಟಿ ಮತ್ತಷ್ಟು ನಾಗರಿಕವಾಗಿದೆ ಕ್ರಿಕೆಟ್ಟು- ಐಪಿಎಲ್ ಎಂಬ ಹೆಸರಿನಲ್ಲಿ. ಇಲ್ಲಿ ಆಟಗಾರರು ಹರಾಜಾಗುತ್ತಾರೆ. ಹಣ ಸಂಪಾದನೆಯೆಂಬುದು ದಂಧೆಯಾಗುತ್ತದೆ. ಹಸಿದ ಕಣ್ಣು ಮನಸ್ಸುಗಳ ಪ್ರೇಕ್ಷಕರ ಕ್ಷುದ್ರ ಆಸೆಗಳನ್ನು ಕೆಣಕಿ ‘ಸಂತೋಷ’ಪಡಿಸಲು ಅರೆಬೆತ್ತಲ ಹುಡುಗಿಯರು ವಿಕವಿಕಾರವಾಗಿ ಕುಣಿಯುತ್ತಾರೆ. ಕ್ರಿಕೆಟ್ಟು ಏನಾಯಿತು? ಕ್ಷಮಿಸಿ, ಕೇಳಬಾರದ ಪ್ರಶ್ನೆ ಇದು.

ಇದೇ ಮಾತುಗಳನ್ನು ಸಿನಿಮಾ, ಮಾಧ್ಯಮ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸಿ ನೋಡಬಹುದು. ಚಲನಚಿತ್ರರಂಗ, ಪತ್ರಿಕಾರಂಗ ಅನ್ನಿಸಿಕೊಳ್ಳುತ್ತಿದ್ದ ಇವೆಲ್ಲಾ ಈಗ ಚಲನಚಿತ್ರೋದ್ಯಮ, ಪತ್ರಿಕೋದ್ಯಮ ಅಂತ ಕರೆಸಿಕೊಳ್ಳುತ್ತಿವೆ. ‘ಉದ್ಯಮ’ ಅಂದರಾಯಿತು. ಅಲ್ಲಿ ಗೆಲುವು-ಸೋಲು, ಸ್ಪರ್ಧೆ-ಗಿರ್ದೆಗಳೆಲ್ಲಾ ಇದ್ದದ್ದೇ. ಇವೆಲ್ಲಾ ಇವೆಯೆಂದ ಮೇಲೆ, ಮೇಲೆ ಹೇಳಿದ ಇತರೆಲ್ಲಾ ಸಂಗತಿಗಳು ಇಲ್ಲಿಯೂ ತಲೆಹಾಕುತ್ತವೆ.

ಇಲ್ಲಿ ಪ್ರಸ್ತಾಪಿಸಬೇಕೋ ಬೇಡವೋ ಗೊತ್ತಿಲ್ಲ. ಸನ್ನಿ ಲಿಯೋನ್ ಅನ್ನೋ ನೀಲಿಚಿತ್ರಗಳ ನಟಿ(?)ಯನ್ನ ಬೆಂಗಳೂರಿಗೆ ಕರೆಸಿ ಕುಣಿಸಿ ಹೊಸವರ್ಷವನ್ನು ಸ್ವಾಗತಿಸಲು ಕೆಲವು ‘ಕಲಾಪೋಷಕ’ರು ನಿರ್ಧರಿಸಿ ಕಾರ್ಯಕ್ರಮ ಏರ್ಪಾಡು ಮಾಡಿದ್ದರು. ಯಾಕೋ, ಕರ್ನಾಟಕದ ಪೊಲೀಸರು ಆ ಕಾರ್ಯಕ್ರಮಕ್ಕೆ ಅನುಕೂಲಕರವಾಗಿ ಸ್ಪಂದಿಸಲಿಲ್ಲ. ಆ ‘ಹೆಣ್ಣು ಮಗಳು’ ಪಾಪ, ಅದೆಷ್ಟು ನೊಂದುಕೊಂಡಳೋ! ನನ್ನ ‘ಕಲೆ’ಗೆ ಅವಮಾನವಾಗುವುದಾದರೆ ಅಲ್ಲಿಗೆ ಬರೋದೇ ಇಲ್ಲ ಅಂದುಬಿಟ್ಟಳು. ಈಗ ಕೆಲವು ಜನ ‘ಪ್ರಜ್ಞಾವಂತ’ರು ಕಲೆಯ, ಕಲಾವಿದೆಯ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ದುಡ್ಡುಮಾಡುವ ಹಪಾಹಪಿಗೆ ಬಿದ್ದವರಿಗೆ ಕಲೆಯ ಹೆಸರಲ್ಲೇ ಇಂಥ ಚರ್ಚೆಗಳು ನಡೆಯುವುದು ಸಂತೋಷ. ಇಡ್ಲಿ ತಿನ್ನುವ ಸ್ಪರ್ಧೆಗೆ ಹೋಗಿ ಇಡ್ಲಿಯ ರುಚಿಯನ್ನೇ ಕಳೆದುಕೊಂಡ ನಮ್ಮ ಚಂದ್ರ ಮತ್ತೆ ನೆನಪಾಗುತ್ತಿದ್ದಾನೆ. ಈ ಲೇಖನದಲ್ಲಿ ವಿರಾಮ ಚಿಹ್ನೆಗಳಿಗಿಂತ ಪ್ರಶ್ನಾರ್ಥಕ ಚಿಹ್ನೆಗಳೇ ಹೆಚ್ಚಿರುವಂತೆ ಕಾಣಿಸುತ್ತಿದೆ. ಒಂದಿಷ್ಟು ಪ್ರಶ್ನೆಗಳನ್ನು ನಿಮ್ಮೆದುರಿಗಿಟ್ಟಿದ್ದೇನೆ. ನೀವು ಹೇಗೆ ಬೇಕಾದರೂ ಯೋಚಿಸಿ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top