ಹೂವಿನಹಡಗಲಿ: ತಾಲೂಕಿನಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಎರಡು ಮನೆಗಳು ಭಾಗಶಃ ಹಾನಿಗೀಡಾಗಿವೆ. ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದರಿಂದ ಸಾರ್ವಜನಿಕರು ರಾತ್ರಿ ನಿದ್ದೆ ಇಲ್ಲದೆ ಪರದಾಡಿದರು.

ಮಾಗಳ ಗ್ರಾಮದಲ್ಲಿ ಧನಶೆಟ್ಟಿ ಗಂಗಮ್ಮ, ಹಿರೇಮಲ್ಲನಕೆರೆ ಗ್ರಾಮದಲ್ಲಿ ತಳವಾರ ಆನಂದ ಅವರ ಮನೆಗಳು ಹಾನಿಗೀಡಾಗಿವೆ. ಮಾಗಳ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ವಿಶ್ವನಾಥಯ್ಯ ಮನೆಗೆ ನುಗ್ಗಿದ್ದ ಮಳೆ ನೀರನ್ನು ಹೊರಹಾಕಲು ಪರದಾಡಿದರು.
ಹಿರೇಹಡಗಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ, ಚೆಕ್ ಡ್ಯಾಂಗೆ ಅಪಾರ ಪ್ರಮಾಣದ ಮಳೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಚೆಕ್ ಡ್ಯಾಂನ ಮಣ್ಣಿನ ತಡೆಗೋಡೆ ಒಡೆದು ಹೋಗಿದೆ. ಹಿರೇಹಡಗಲಿ ಹೋಬಳಿಯಲ್ಲಿ 59 ಮಿ.ಮೀ, ಹೂವಿನಹಡಗಲಿ ಹೋಬಳಿಯಲ್ಲಿ 43.6 ಮಿ.ಮೀ ಸೇರಿದಂತೆ ತಾಲೂಕಿನಲ್ಲಿ 51.3 ಮಿ.ಮೀ ಮಳೆಯಾಗಿದೆ.