ತಂಬುಳಿ ಮಾಡಿ

ಕರಾವಳಿ, ಮಲೆನಾಡು ಭಾಗಗಳಲ್ಲಿ ದಿನನಿತ್ಯ ಯಾವುದಾದರೊಂದು ರೀತಿಯ ತಂಬುಳಿ ಮಾಡುವ ಪದ್ಧತಿ ಸಾಮಾನ್ಯ. ಒಂದು ರೀತಿಯ ಹಸಿರು ಸೊಪ್ಪನ್ನು ಬಳಸಿ ಅಥವಾ ಶುಂಠಿ, ಅಂಬೆಕೊಂಬು, ಮಾವಿನಕಾಯಿ, ಬೆಳ್ಳುಳ್ಳಿ, ಸೌತೆಕಾಯಿ ಇತ್ಯಾದಿಗಳನ್ನು ಉಪಯೋಗಿಸಿ ತಂಬುಳಿ ಮಾಡಲಾಗುತ್ತದೆ.

ತಂಬುಳಿಯು ಆರೋಗ್ಯದ ದೃಷ್ಟಿಯಲ್ಲಿ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತದೆ. ಕೇವಲ ಹಸಿ ಸೊಪ್ಪನ್ನು ಮಾತ್ರ ತಿಂದು ಬದುಕುವ ಕಾಡುಕೋಣದ ಕಾಲುಗಳು ತುಂಬ ಬಲಶಾಲಿಯಾದದ್ದು. ಇಡೀ ದೇಹದ ಭಾರವನ್ನು ಹೊತ್ತ ಕಾಲುಗಳ ಸಹಾಯದಿಂದ ಅದು ಎಷ್ಟು ದೂರದಿಂದ, ಎತ್ತರದಿಂದ ಹಾರಿದರೂ ಏನೂ ಆಗದು. ಅಂದರೆ ಅದರ ಮೂಳೆಗಳಿಗೆ ಬೇಕಾದಂತಹ ಪೋಷಕಾಂಶವನ್ನು ಹಸಿರು ಸೊಪ್ಪುಗಳ ಆಹಾರ ನಿರ್ವಹಿಸುತ್ತದೆ. ನಮ್ಮ ಆರೋಗ್ಯಕ್ಕೆ ಬೇಕಾದಂತಹ ಅಷ್ಟೂ ಪೋಷಕಾಂಶಗಳನ್ನೂ ಹಸಿರು ಸೊಪ್ಪಿನಿಂದ ಪಡೆಯಬಹುದಾಗಿದೆ. ಹಾಗಾಗಿ ಹಸಿರು ಸೊಪ್ಪಿನಿಂದ ತಯಾರಿಸಿದಂತಹ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.

ತಂಬುಳಿಯು ಅಂತಹ ಪದಾರ್ಥಗಳಲ್ಲಿ ಒಂದು. ಇದನ್ನು ಮಾಡುವಾಗ ಹಸಿ ತೆಂಗಿನ ತುರಿಯನ್ನು ಸಹ ಬಳಸುವುದರಿಂದ ಹೆಚ್ಚಿನ ಅಗತ್ಯಗಳು ಪೂರೈಕೆಯಾಗುತ್ತವೆ. ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ದೊರೆಯಲು ಹಸಿರುಸೊಪ್ಪಿನ ಬಳಕೆ ಅತ್ಯುತ್ತಮ. ಅಲ್ಲದೆ ಉತ್ತಮ ಪ್ರಮಾಣದಲ್ಲಿ ಕಬ್ಬಿಣಾಂಶ, ಫೋಲಿಕ್, ಆಂಟಿ ಆಕ್ಸಿಡೆಂಟ್​ಗಳು ಸಿಗುತ್ತವೆ. ಉದಾಹರಣೆಗೆ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ ಜೀರಿಗೆ, ತೆಂಗಿನೆಣ್ಣೆ ಹಾಕಿ ಹುರಿದುಕೊಳ್ಳಬೇಕು. ಇದನ್ನು ತೆಂಗಿನ ತುರಿಯೊಂದಿಗೆ ರುಬ್ಬಿ, ಮಜ್ಜಿಗೆ ಬೆರೆಸಿ ಒಗ್ಗರಣೆ ಹಾಕಿದರೆ ತಂಬುಳಿ ತಯಾರು. ಇದೇ ರೀತಿ ಹಿತ್ತಲಿನಲ್ಲಿ ದೊರೆಯುವ ದಿನಕ್ಕೊಂದು ತರಹದ ಸೊಪ್ಪುಗಳನ್ನು ತೆಗೆದುಕೊಂಡು ತಂಬುಳಿ ತಯಾರಿಸಿ ನಿತ್ಯವೂ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಒದಗಿಬರಲು ಸಾಧ್ಯ.