ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸಿ

ರಾಮನಾಥಪುರ: ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಂಡಳಿ ಮತ್ತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳೆಗಾರರು ಮಾರುಕಟ್ಟೆ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಜಗದೀಶ್ ಮಾತನಾಡಿ, 2018-19 ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ತಂಬಾಕು ಬೆಳೆಗಾರರು ನಷ್ಟ ಅನುಭವಿಸಿದ್ದು, ಹಾನಿಗೆ ತಕ್ಕ ಪರಿಹಾರ ನೀಡಬೇಕೆಂದು ತಂಬಾಕು ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ತಂಬಾಕು ಬೆಳೆಗಾರರಿಗೆ ಮಂಡಳಿಯಿಂದ ರೈತರಿಗೆ 50 ಸಾವಿರ ರೂ.ಬಡ್ಡಿರಹಿತ ಸಾಲದ ರೂಪದಲ್ಲಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದು ,ಈವರೆಗೂ ಸಾಲ ನೀಡುವ ಮತ್ತು ಪರಿಹಾರ ನೀಡಲು ಕ್ರಮಕೈಗೊಂಡಿರುವುದಿಲ್ಲ ಎಂದು ಕಿಡಿಕಾರಿದರು.

ಶಿಘ್ರದಲ್ಲಿ ಸಾಲ ಮತ್ತು ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜರುಗುವ ಎಲ್ಲ ಘಟನೆಗಳಿಗೆ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೇ ಕಾರಣರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತಮುಖಂಡ ಸಂಜೀವೇಗೌಡ ಮಾತನಾಡಿ, ತಂಬಾಕು ಪರವಾನಗಿ ನವೀಕರಣ, ತಂಬಾಕು ಬೆಳೆಗಾಗಿ ಬ್ಯಾಂಕ್‌ಗಳಿಂದ ಪಡೆಯಲಾಗಿರುವ ರಸಗೊಬ್ಬರದ ಸಾಲ ಮತ್ತು ತಂಬಾಕು ಬೆಳೆ ಸಾಲದ ಮರುಪಾವತಿಗಾಗಿ ಹೆಚ್ಚಿನ ಕಾಲಾವಕಾಶ ಕೊಡಬೇಕು ಎಂದರು.

ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಹರಾಜು ಅಧೀಕ್ಷಕ ಎಸ್.ಎಸ್.ಪಾಟೀಲ್, ತಂಬಾಕು ಕ್ಷೇತ್ರಾಭಿವೃದ್ಧಿ ಯೊಜನೆಯಡಿ ಕನಿಷ್ಟ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಈ ವರ್ಷ ತಂಬಾಕು ಬೆಳೆಗೆ ರಸಗೊಬ್ಬರ ನೀಡಲು ಮಂಡಳಿ ಸೂಚಿಸಿದ್ದು, ರೈತರಿಗೆ ತಂಬಾಕು ಮಂಡಳಿಯಿಂದ ಸಿಗಬೇಕಿರುವ ಮೂಲ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.

ರೈತರಾದ ರವಿ, ರವಿಚಂದ್ರ, ಕುಚೆಲೇಗೌಡ, ಮಂಜೇಗೌಡ, ನಾಗೇಶ್ ಮುಂತಾದ ಪ್ರಮುಖರು ಇದ್ದರು.