ಹುಮನಾಬಾದ್: ತಂದೆ-ತಾಯಿ ಸೇವೆಯೇ ದೇವರ ಸೇವೆಯಾಗಿದ್ದು, ಅವರ ಮಾರ್ಗದರ್ಶನ ಹಾಗೂ ಆಶೀರ್ವಾದ ಶ್ರೀರಕ್ಷೆಯಾಗಿದೆ. ಅವರ ಸೇವೆ ಮಾಡುವುದರಿಂದ ಬದುಕು ಸಾರ್ಥಕವಾಗಲಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿರಿಯ ಪಾಲಕರ ದಿನಾಚರಣೆ ಹಾಗೂ ಸಂಸ್ಥೆಯ ಸಂಸ್ಥಾಪಕ ಎಂ.ಆರ್.ಗಾದಾ ಅವರ ೯೮ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾದಾ ಅವರ ಶಿಕ್ಷಣ ಸಂಸ್ಥೆಯಲ್ಲಿ ೩ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸಂಸ್ಥೆ ಹೆಮ್ಮರವಾಗಿ ಬೆಳೆಸಿದ್ದಾರೆ. ಅದರ ಜತೆಗೆ ಮಕ್ಕಳಿಗೆ ಹಿರಿಯ ಪಾಲಕರ ದಿನಾಚರಣೆ ಆಚರಿಸುವ ಮೂಲಕ ಮಕ್ಕಳಲ್ಲಿ ಹಿರಿಯ ಪಾಲಕರ ಬಗ್ಗೆ ಗೌರವ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ತಂದೆ-ತಾಯಿ, ಹಿರಿಯ ಸೇವೆ ಮಾಡದಿದ್ದಲ್ಲಿ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯವಿಲ್ಲ. ತಂದೆ ತಾಯಿಯನ್ನು ಪೂಜ್ಯನೀಯ ಭಾವದಿಂದ ಗೌರವಿಸಿ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಕ್ಕಳಿಗೆ ಸರ್ಕಾರಿ ನೌಕರಿ, ಶಿಕ್ಷಣ ಜತೆಗೆ ಸಂಸ್ಕಾರಯುತ ಶಿಕ್ಷಣ ಕೊಡುವುದು ಪಾಲಕರ ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಹಿರಿಯರ ಹಾಗೂ ಪಾಲಕರ ಸೇವೆ ಮಾಡುವ ಮನೋಭಾವ ಮಕ್ಕಳು ಹೊಂದಬೇಕೆಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಮೇಶ ಗಾದಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸತೀಶ ಪಾಟೀಲ್, ನಾರಾಯಣರಾವ ಜಾಜಿ, ಪ್ರಶಾಂತ ಉದಗೀರೆ, ಅನೀಲ ಪಲ್ಲೇರಿ, ನಾಗರಾಜ ವಾಸಗಿ, ಜಗದೀಶ ಅಗಡಿ, ಶಾಂತವೀರ ಸಲಗರ, ಸುರೇಖಾ ಜಾಜಿ, ದತ್ತಕುಮಾರ ಚಿದ್ರಿ, ಸಂಜೀವರೆಡ್ಡಿ ಸಾಯಿರೆಡ್ಡಿ, ಸಂದೀಪ ನಿಟ್ಟೂರಕರ, ಜಗನ್ನಾಥ ಕರಂಜಿ ಇತರರಿದ್ದರು.
ಅನಿತಾ ಪೋದ್ದಾರ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಜಾಜಿ ಸ್ವಾಗತಿಸಿದರು. ಕಾಶಿಬಾಯಿ ಉಮಾರ್ಗೆ ನಿರೂಪಣೆ ಮಾಡಿದರು.