ತಂದೆ-ತಾಯಿ ಮೇಲೆ ಪ್ರಿಯಾಂಕ್ ಆಣೆ ಮಾಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆಪರೇಷನ್ ಕಮಲ ಮೂಲಕ 50 ಕೋಟಿ ರೂ. ಪಡೆದುಕೊಂಡಿದ್ದೇನೆ ಎಂದು ಸುಳ್ಳು ಆರೋಪ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅದನ್ನು ಸಾಬೀತುಪಡಿಸಲಿ. ಇಲ್ಲವೇ ಕಲಬುರಗಿ ಜನರ ಮುಂದೆ ಕ್ಷಮೆಯಾಚನೆ ಮಾಡಲಿ ಎಂದು ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಹೇಳಿದರು.

ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ನಾನು ಮಾರಾಟವಾಗಿದ್ದೇನೆ, ಹಣ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿರುವ ಸಚಿವರು ಅದು ನಿಜವಾಗಿದ್ದರೆ, ಅವರ ಹೆತ್ತ ತಂದೆ-ತಾಯಿ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು. ಇಲ್ಲವೇ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವೇ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.

ನನ್ನ ರಾಜೀನಾಮೆ ಅಂಗೀಕಾರವಾಗುತ್ತದೆ ಎಂಬ ವಿಶ್ವಾಸವಿದೆ. ಸ್ಪೀಕರ್ ತುಂಬಾ ಒಳ್ಳೆಯವರು, ಯಾರ ಒತ್ತಡಕ್ಕೂ ಮಣಿಯುವ ವ್ಯಕ್ತಿ ಅವರಲ್ಲ. ಹೀಗಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾರೆ ಅದನ್ನು ನೀಡಿದ್ದೇನೆ ಎಂದು ಹೇಳಿದರು.

ಐತಿಹಾಸಿಕ ನಿರ್ಧಾರ ಕೈಗೊಳ್ಳುತ್ತೇನೆ ಎಂದಿರುವ ಸ್ಪೀಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಜಾಧವ, ಹೌದು ಸ್ಪೇಷಲ್ ಬೇಬಿ ಹುಟ್ಟುತ್ತದೆ ಎಂದ ಮೇಲೆ ಐತಿಹಾಸಿಕ ನಿರ್ಧಾರ ಕೈಗೊಂಡಂತೆಯೇ. ಈಗ ನಾನು ಹುಟ್ಟುವ ಸ್ಪೇಷಲ್ ಬೇಬಿ ಎಂದು ಹೇಳಿಕೊಂಡರು.

ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡದ ಪ್ರಿಯಾಂಕ್ ಖರ್ಗೆ, ಸುಳ್ಳು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ತಾವು ಗೆದ್ದರೆ 25 ವರ್ಷದಿಂದ ಆಗದೆ ಇರೋ ಅಭಿವೃದ್ಧಿ ಆರು ತಿಂಗಳಲ್ಲಿ ಮಾಡಿ ತೋರಿಸ್ತಿನಿ. ಚಿಂಚೋಳಿ ಸಮಸ್ಯೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ತಂದಾಗ ಸ್ಪಂದಿಸಲಿಲ್ಲ. ಮಕ್ಕಳ ಮಾರಾಟ ಪ್ರಕರಣ ಸಮಸ್ಯೆ ಅಂದಾಗ, ಯಾರು ಮಕ್ಕಳಿಗೆ ಯಾರು ಜನ್ಮ ಕೊಡು ಅಂತ ಹೇಳಿದರಿಗೆ ಏನು ಗೊತ್ತು ಜನರ ಸಮಸ್ಯೆ ಎಂದು ತಿರುಗೇಟು ನೀಡಿದರು. ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಏನು ಗೊತ್ತಿದೆ. ನಾನು ಹಳ್ಳಿ ಹಳ್ಳಿ ತಿರುಗಿ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಬಸವಕಲ್ಯಾಣ ಶಾಸಕ ಬಿ.ನಾರಾಯಣ ನನ್ನ ಸ್ನೇಹಿತ, ಉಸ್ತುವಾರಿ ಸಚಿವ ಖುಷಿ ಪಡಿಸೋಕೆ ನನ್ನ ಮೇಲೆ ಕಿಡಿಕಾರಿರಬಹುದು. ಒಳಗೊಳಗೆ ಅವರಿಗೂ ನನ್ನ ಬಗ್ಗೆ ಪ್ರೀತಿಯಿದೆ ಎಂದು ಡಾ.ಜಾಧವ ಹೇಳಿದರು.