ತಂದೆ-ತಾಯಿ ಬಗ್ಗೆ ತಾತ್ಸಾರ ಬೇಡ

ಧಾರವಾಡ: ಇಂದಿನ ದಿನಗಳಲ್ಲಿ ವಯಸ್ಸಾದ ತಂದೆ ತಾಯಿಯನ್ನು ಮಕ್ಕಳು ವೃದ್ಧಾಶ್ರಮಕ್ಕೆ ಕಳುಹಿಸುವುದು ಬೇಸರದ ಸಂಗತಿ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯಂಜಯ ಸ್ವಾಮೀಜಿ ಹೇಳಿದರು.

ಹಾವೇರಿಯ ಕಲಾ ಸ್ಪಂದನ ಮತ್ತು ಧಾರವಾಡದ ರಂಗಸಂಗ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಾನಗಲ್ಲ ತಾಲೂಕಿನ ಹಿರೇಬಾಸೂರ ಗ್ರಾಮದ ಮೌನೇಶಪ್ಪ ಕತ್ತಿ ಅವರ ಹೆಸರಿನಲ್ಲಿ ನಾರ್ಥ್ ಬೆಂಗಳೂರು ಆಸ್ಪತ್ರೆಯ ನಿರ್ದೇಶಕ ಡಾ. ಶಿವಕುಮಾರ ಉಪ್ಪಳ ಅವರಿಗೆ 2019ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಾನಸಿಕವಾಗಿ ಸದೃಢವಾಗಿಲ್ಲದ ಹಾಗೂ ನಿತ್ಯ ಜೀವನದ ಜಂಜಾಟದಲ್ಲಿ ಪಾಲಕರ ಬಗ್ಗೆ ಜಿಗುಪ್ಸೆ, ತಾತ್ಸಾರದ ಮನೋಭಾವದಿಂದ ಅವರನ್ನು ಆಶ್ರಮಕ್ಕೆ ಕಳಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಹಿರೇಬಾಸೂರಿನ ಕತ್ತಿ ಕುಟುಂಬ ಮಾಡುತ್ತಿರುವ ಕಾರ್ಯ ಇಂದಿನ ಸಮಾಜದ ಯುವ ಸಮುದಾಯಕ್ಕೆ ಮಾದರಿಯಾಗಿದೆ. ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಗುರುತಿಸುತ್ತಿರುವು ಹೆಮ್ಮೆಯ ವಿಷಯ ಎಂದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಗಿಗಳಿಗೆ ಧೈರ್ಯ ತುಂಬಿ ಸೇವಾ ಭಾವದಿಂದ ಚಿಕಿತ್ಸೆ ಕೊಡುವ ಮನೋಭಾವವನ್ನು ವೈದ್ಯರು ಬೆಳೆಸಿಕೊಳ್ಳಬೇಕು. ರೋಗಿಗಳಿಂದ ಹಣ ಪೀಕುವ ಕೆಲಸ ಮಾಡದೆ ಪ್ರಾಮಾಣಿಕವಾಗಿ ಅವರ ರೋಗ ಗುಣಮುಖ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಶಿವಕುಮಾರ ಉಪ್ಪಳ ಮಾತನಾಡಿ, ಕಾಪೋರೇಟ್ ವಲಯದಲ್ಲಿ ಕೆಲಸ ಮಾಡುವ ವೈದ್ಯರಿಗೆ ಹೆಚ್ಚು ಒತ್ತಡವಿದೆ. ಇಂತಿಷ್ಟು ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂಬ ಗುರಿ ನಿಗದಿಪಡಿಸುತ್ತಿರುವ ಈ ವಲಯದಿಂದ ವೈದ್ಯ ಲೋಕ ಹೊರಬರಬೇಕಾಗಿದೆ. ಕ್ಯಾನ್ಸರ್​ಗೆ ತುತ್ತಾದ ರೋಗಿಗಳು ದುಬಾರಿ ಚಿಕಿತ್ಸೆಯ ವೆಚ್ಚಕ್ಕೆ ಹೆದರಿ ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಕ್ಯಾನ್ಸರ್ ಬಂದರೆ ಸಾವು ಖಚಿತ ಎಂಬ ಕಾಲ ಬದಲಾಗಿದೆ ಎಂದರು.

ಎಐಪಿಟಿಎನ್ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಜೀವನದಲ್ಲಿ ತಂದೆ-ತಾಯಿಯವರ ಪಾತ್ರ ವಿಷಯ ಕುರಿತು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಉಪನ್ಯಾಸ ನೀಡಿದರು.

ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಶಿವುಕುಮಾರ ಕುಂಬಾರ, ಡಾ. ವಿ.ಬಿ. ನಿಟಾಲಿ, ಡಾ. ಸತ್ಯನಾರಾಯಣ ಮಾಸ್ತಮ್ಮನವರ, ಪ್ರಕಾಶ ಉಡಿಕೇರಿ, ಚೈತ್ರಾ ನಾಗಮ್ಮನವರ, ಪೊ›. ನಾಗೇಶ ಅಣ್ಣಿಗೇರಿ, ಡಾ. ಅಶೋಕ ಬಂಗಾರಶೆಟ್ಟರ, ಡಾ. ಅರುಣ ವಾಳ್ವೇಕರ, ಸಿದ್ದವೀರಗೌಡ ಪಾಟೀಲ, ಮಂಜುನಾಥ ಕತ್ತಿ, ಇತರರು ಇದ್ದರು.

ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಕೆ.ಎಚ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭು ಹಂಚಿನಾಳ ಮತ್ತು ಸುರೇಶ ಬೆಟಗೇರಿ ನಿರೂಪಿಸಿದರು. ಜಗದೀಶ ಕತ್ತಿ ವಂದಿಸಿದರು. ನಂತರ ಮರಳಿನೊಂದಿಗೆ ಸಂಗೀತದ ಗಾನಲಹರಿ ಎಂಬ ವಿನೂತನ ಸಂಗೀತ ಕಾರ್ಯಕ್ರಮವನ್ನು ಮಹಾನಂದಾ ಗೋಸಾವಿ ನಡೆಸಿಕೊಟ್ಟರು. ಪಂ. ವಾದಿರಾಜ ನಿಂಬರಗಿ ವಯೋಲಿನ್, ಅನಿಲ ಮೈತ್ರಿ ತಬಲಾ ಹಾಗೂ ಯಾದವೇಂದ್ರ ಪೂಜಾರ ಹಾಮೋನಿಯಂ ಸಾಥ್ ನೀಡಿದರು.

Leave a Reply

Your email address will not be published. Required fields are marked *