Friday, 16th November 2018  

Vijayavani

Breaking News

ತಂತ್ರಜ್ಞಾನದ ಜತೆ ಬದಲಾಗುತ್ತಿದೆ ನಟನಾ ಶೈಲಿ

Sunday, 08.07.2018, 3:04 AM       No Comments

| ದೀಪಾ ರವಿಶಂಕರ್

ನೀವು 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಅಥವಾ ಅದರ ಸಮಕಾಲೀನ ಸಿನೆಮಾಗಳನ್ನು ನೋಡಿ, ರಂಗಭೂಮಿಯ ಛಾಯೆ ಬಹು ದಟ್ಟವಾಗಿ ನಟನಾ ಶೈಲಿಯಲ್ಲಿ ಕಾಣುತ್ತದೆ. ಅಲ್ಲಿಂದಾಚೆಗೆ ಹತ್ತು ವರುಷ ಕಳೆದು 1964 ರಲ್ಲಿ ಬಿಡುಗಡೆಯಾದ ‘ನಾಂದಿ’, ‘ಚಂದವಳ್ಳಿಯ ತೋಟ’ ಮೊದಲಾದ ಚಿತ್ರಗಳಲ್ಲಿ ನಟನಾ ಶೈಲಿಯಲ್ಲಿ ಬದಲಾವಣೆ ಕಂಡುಬರುತ್ತದೆ ಯಾದರೂ ಅದು ತೀರಾ ಸ್ವಲ್ಪ. ರಂಗಭೂಮಿಯ ಛಾಯೆ ಇನ್ನೂ ನಮಗೆ ನಟನಟಿಯರ ಹಾವ-ಭಾವಗಳಲ್ಲಿ, ನಟನಾ ಶೈಲಿಯಲ್ಲಿ ಕಾಣುತ್ತದೆ. ಮತ್ತೆ ಹತ್ತು ವರುಷ ಕಳೆದರೆ 1984ರಲ್ಲಿ ತೆರೆ ಕಂಡ ‘ಸಂಪತ್ತಿಗೆ ಸವಾಲ್’, ‘ಎರಡು ಕನಸು’ ಇಂಥ ಚಿತ್ರಗಳಲ್ಲಿ ರಂಗಭೂಮಿಯ ಛಾಯೆ ಅರ್ಧಕ್ಕರ್ಧ ಇಳಿದು ತೆರೆಯ ನಟನಾ ಶೈಲಿ ಸೂಕ್ಷ್ಮವಾಗುವುದನ್ನು ಗಮನಿಸಬಹುದು. 1994ರ ಚಿತ್ರಗಳನ್ನು ಗಮನಿಸಿದರೆ, ಉದಾಹರಣೆಗೆ ‘ಬಂಧನ’, ‘ಎರಡು ರೇಖೆಗಳು’ ಇತ್ಯಾದಿಗಳು, ತೆರೆಯ ಮೇಲಿನ ನಟನಾ ಶೈಲಿ ಮೆಲ್ಲನೆ ರಂಗಭೂಮಿಯ ನಟನಾ ಶೈಲಿಯಿಂದ ಭಿನ್ನವಾಗಿ ಮೆಲ್ಲನೆ ಕವಲೊಡೆಯುತ್ತಿರುವುದನ್ನು ಗಮನಿಸಬಹುದು.

ಹೀಗೆ ಕಾಲಾಂತರದಲ್ಲಿ ಮೆಲ್ಲಗೆ ಟಿಸಿಲೊಡೆದು ಪುಟ್ಟ ರೆಂಬೆಯಾಗಿ, ಕೊಂಬೆಯಾಗಿ ಬೆಳೆಯುತ್ತಾ ಇಂದು ತೆರೆಯ ಮೇಲಿನ ನಟನಾ ಶೈಲಿ ಒಂದು ಬೇರೆಯದೇ ಆದ ಸ್ವತಂತ್ರ ಶೈಲಿಯಾಗಿ ಬದಲಾಗಿದೆ. ಇದೊಂದು ಧನಾತ್ಮಕ ಬೆಳವಣಿಗೆಯೆಂದೇ ಹೇಳಬಹುದು. ಈ ಬದಲಾವಣೆ ಬಹುಶಃ ನಟನೆಯ ಜತೆ ಕ್ಯಾಮೆರಾ ತಂತ್ರಜ್ಞಾನವೂ ಬೆರೆತಿದ್ದರಿಂದ ವೇಗ ಪಡೆದುಕೊಂಡಿತು. ತಂತ್ರಜ್ಞಾನ ಮತ್ತು ನಟನಾ ಶೈಲಿ ಜತೆ ಜತೆಗೇ ಬೆಳೆಯುತ್ತಾ, ಬದಲಾಗುತ್ತಾ, ಸೂಕ್ಷ್ಮವಾಗುತ್ತಾ, ಸ್ಪಷ್ಟವಾಗುತ್ತಾ ಸಾಗಿದವು. ಕಣ್ಣಿನ ಚಿಕ್ಕ ಹೊರಳು, ಹುಬ್ಬಿನ ಸಣ್ಣ ಚಲನೆ, ತುಟಿಯಂಚಲ್ಲಿ ಹೌದೋ ಅಲ್ಲವೋ ಎಂಬಂತೆ ಸುಳಿದು ಹೋದ ಸಣ್ಣ ನಗು ಎಲ್ಲವನ್ನೂ ಇಂದಿನ ಅತ್ಯಾಧುನಿಕ ಕ್ಯಾಮೆರಾಗಳು ಯಶಸ್ವಿಯಾಗಿ ಸೆರೆ ಹಿಡಿಯುತ್ತವೆ. ಅವುಗಳ ದೆಸೆಯಿಂದ ನಟನೆ ಕೂಡ ಸೂಕ್ಷ್ಮವಾಗಿದೆ. ತೆರೆಯ ಮೇಲೆ ಅದು ಸಿನೆಮಾ ಆಗಿರಲಿ, ಕಿರುತೆರೆಯಾಗಿರಲಿ- ಬಹಳ ಚಿಕ್ಕ ಚಿಕ್ಕ ಗೆಸ್ಚರ್​ಗಳಿಂದ ಪಾತ್ರದ ಮನಸ್ಸನ್ನು ತೆರೆದಿಡಬಹುದು. ಈ ಕಾರಣವೇ ತೆರೆಯ ಮೇಲಿನ ನಟನಾ ಶೈಲಿ ತನ್ನದೇ ಆದ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತಿದೆ.

ಈ ಬಗೆಯ ನಟನೆ ಸುಲಭವೆಂದು ಮೇಲ್ನೋಟಕ್ಕೆ ಕಾಣುತ್ತದೆ. ಅರ್ಧ ಕೆಲಸವನ್ನು ಕ್ಯಾಮೆರಾ ಮಾಡಿಬಿಡುವುದರಿಂದ ನಮ್ಮ ಕೆಲಸ ಕಡಿಮೆಯೇನೋ ಎನಿಸುತ್ತದೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ರಂಗಭೂಮಿಯ ನಟನಾ ಶೈಲಿಯ ಕಷ್ಟಗಳ ತದ್ವತ್ ಉಲ್ಟಾ ಸಮಸ್ಯೆಗಳು ಇಲ್ಲಿ ನಟ ನಟಿಯರಿಗಿರುತ್ತದೆ. ವೇದಿಕೆಯ ಮೇಲಿಂದ ನಮ್ಮ ಕಣ್ಣುಗಳಲ್ಲಿನ ಭಾವ ಮುನ್ನೂರು ಜನರಿಗೆ ಕಾಣಿಸುವಂತೆ ಮಾಡುವುದಕ್ಕೆ ಎಷ್ಟು ಪರಿಶ್ರಮ ಬೇಕು? ಎಷ್ಟು ಪಾತ್ರದೊಳಗಿನ ಒಳಗೊಳ್ಳುವಿಕೆ ಬೇಕು? ಅದೇ ನಮ್ಮ ಮುಖವೇ ಪರದೆಯ ಇಡೀ ಕಂಡರೆ ಕೆಲಸ ಕಡಿಮೆಯಾಯಿತಲ್ಲವೇ? ಇಲ್ಲ. ನಾವು ನಮ್ಮ ಎದುರಿನ ಮುಖವೊಂದನ್ನು ನೋಡುವಾಗ ಕಣ್ಣನ್ನೇ ನೋಡುವುದು. ಹಾಗೆಯೇ ತೆರೆಯ ತುಂಬಾ ವ್ಯಾಪಿಸಿಕೊಂಡ ಮುಖವನ್ನು ನೋಡುವಾಗಲೂ ಕಣ್ಣುಗಳನ್ನೇ ನೋಡುವುದು. ಅಷ್ಟು ಹತ್ತಿರದಿಂದ ಕಣ್ಣಿನ ರೆಪ್ಪೆ ರೆಪ್ಪೆಯೂ ಕಾಣುವಾಗ ಆ ಕಣ್ಣುಗಳಲ್ಲಿ ಭಾವದ ಕೊರತೆ ಇದ್ದುಬಿಟ್ಟರೆ, ಪಾತ್ರದಲ್ಲಿ ತಲ್ಲೀನರಾಗಿರದಿದ್ದರೆ ಎದ್ದು ಕಾಣುವುದೇ ಅದು! ವೇದಿಕೆಯ ಮೇಲೆ ನಿಂತ ನಟ ತನ್ನ ಭಾವನೆಗಳನ್ನು ಎಷ್ಟು ತೀವ್ರವಾಗಿ ತೋರಿಸಬೇಕೋ, ಕ್ಯಾಮೆರ ಮುಂದೆ ನಿಂತ ನಟನೂ ಅಷ್ಟೇ ತೀವ್ರವಾಗಿ ಭಾವನೆಗಳನ್ನು ತೆರೆದಿಡಬೇಕು. ಆದರೆ ವಿಭಿನ್ನ ಕಾರಣಗಳಿಗಾಗಿ.

ತಂತ್ರಜ್ಞಾನದ ನಿಜವಾದ ಅನುಕೂಲ ನಟರಿಗೆ ಸಿಗುವುದು ಮಾತಿನ ವಿಷಯದಲ್ಲಿ. ರಂಗಭೂಮಿಯಲ್ಲಿ ನಿಮ್ಮ ಶಕ್ತಿಯನ್ನು ಅತಿ ಹೆಚ್ಚು ವ್ಯಯ ಮಾಡಬೇಕಾಗುವುದು ನಿಮ್ಮ ಧ್ವನಿಯ ಮೇಲೆ. ಸಿಟ್ಟು, ದರ್ಪ, ಅಟ್ಟಹಾಸದಂಥ ಭಾವಗಳು ಅಂದರೆ ಎಲ್ಲಿ ಸಹಜವಾಗಿಯೇ ಧ್ವನಿಯನ್ನು ಎತ್ತರಿಸಬೇಕೋ ಅವು ಸುಲಭ. ಪ್ರೇಮ, ಮಮತೆಯ, ಸ್ನೇಹದಂಥ ಕೋಮಲ ಭಾವನೆಗಳನ್ನು ತೋರಿಸುವ ಸಂದರ್ಭಗಳಲ್ಲಿ ಮಾತಿನ ಭಾವದ ಹದ ಕೆಡದಂತೆ ಧ್ವನಿಯೆತ್ತರಿಸಿ ಮಾತನಾಡುವುದು ಕಷ್ಟಸಾಧ್ಯವಾದ ಕಲೆಯೇ ಸರಿ. ಆ ಕಷ್ಟ ತೆರೆಯ ಮೇಲಿನ ನಟರಿಗೆ ಇಲ್ಲ. ಅಲ್ಲಿ ಇಲ್ಲವೇ ಕಾಲರ್ ಮೈಕ್​ಗಳನ್ನು ಧರಿಸಿ ಮಾತುಗಳನ್ನು ಚಿತ್ರೀಕರಣದ ಜೊತೆ ಜೊತೆಗೇ ರೆಕಾರ್ಡ್ ಮಾಡಲಾಗಿರುತ್ತದೆ ಅಥವಾ ನಿಶ್ಶಬ್ದದ ಸ್ಟುಡಿಯೋನಲ್ಲಿ ಡಬ್ ಮಾಡಲಾಗುತ್ತದೆ. ಎಷ್ಟು ಮೃದು ಧ್ವನಿಯಲ್ಲಿ ಮಾತಾಡಿದರೂ ವೀಕ್ಷಕರಿಗೆ ತಲುಪಿಸಬಲ್ಲ ತಂತ್ರಜ್ಞಾನ ಇಂದು ತೆರೆಯ ಮೇಲಿನ ನಟನೆಗೆ ಲಭ್ಯವಿದೆ.

ಒಟ್ಟಿನಲ್ಲಿ ಹೇಳುವುದಾದರೆ ರಂಗಭೂಮಿಯಿಂದಲೇ ಹುಟ್ಟಿ ಅದರ ಮಡಿಲಿನಲ್ಲೇ ಬೆಳೆದ ತೆರೆಯ ಮೇಲಿನ ನಟನೆ ಈಗ ತನ್ನದೇ ಆದ ಗುರುತು ಅಸ್ತಿತ್ವ ಬೆಳೆಸಿಕೊಂಡಿದೆ. ಪ್ರಯೋಗಗಳನ್ನು ಮಾಡಲು, ತಪ್ಪು ಮಾಡಿ, ಆ ತಪ್ಪಿನಿಂದ ಹೊಸದೇನೋ ಒಂದನ್ನು ಕಲಿಯಲು ಹದವಾದ ವೇದಿಕೆಯಾಗಿದೆ. ತನ್ನದೇ ಆದ ವ್ಯಾಕರಣವನ್ನು ಬೆಳೆಸಿಕೊಳ್ಳುತ್ತಿದೆ. ಸದಾ ಹೊಸತನ್ನು ಹುಡುಕುವ ಉತ್ಸಾಹೀ, ಸಾಹಸ ಪ್ರವೃತ್ತಿಯ ಕಲಾವಿದರಿಗೆ ಹೊಸತನ್ನುಣಿಸಲು ಶಕ್ತವಾಗಿದೆ. ತೆರೆದ ಮನಸ್ಸಿನಿಂದ ಈ ತಂತ್ರಜ್ಞಾನ ಮತ್ತು ಕಲೆಯ ಸಮ್ಮಿಲನಕ್ಕೆ ಹೊಸ ಕಾಲಕ್ಕೆ ಬೇಕಾದ ಸಂದೇಶಗಳನ್ನು ಅಣಿಮಾಡಿಕೊಟ್ಟರೆ ಸಾಕು. ಈ ಏರುಗತಿಯ ಪಯಣವನ್ನು ನೋಡುವ ಸದವಕಾಶ ನಮಗೆಲ್ಲರಿಗೆ ದೊರೆಯುತ್ತದೆ.

ಇಂದು ಕನ್ನಡ ಧಾರಾವಾಹಿ ಪ್ರಪಂಚದಲ್ಲೂ ಆಧುನಿಕ ಕ್ಯಾಮೆರಾ ತಂತ್ರಜ್ಞಾನವಿದೆ. ಆ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಬಲ್ಲ ತಂತ್ರಜ್ಞರಿದ್ದಾರೆ. ಆ ಉನ್ನತಮಟ್ಟದ ಕ್ಯಾಮೆರಾಗಳಿಗೆ ಸರಿಯಾದ ನಟನೆ ಕೊಡಬಲ್ಲ ಅನುಭವೀ ನಟ-ನಟಿಯರಿದ್ದಾರೆ. ಎಲ್ಲವೂ ಇದೆ. ಆದರೆ ಅವುಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಂಡು ವೀಕ್ಷಕರಿಗೆ ಹೊಸತಾದ, ಸದಭಿರುಚಿಯ ಕಾರ್ಯಕ್ರಮಗಳನ್ನು ವಾಹಿನಿಗಳು ರೂಪಿಸದಿದ್ದರೆ, ಎಲ್ಲವೂ ವ್ಯರ್ಥ. ತಂತ್ರಜ್ಞಾನದ ಮಾಯಾದಂಡದಿಂದ ಹೊಸ ತಲೆಮಾರಿಗೆ ಹೊಂದುವಂಥ ಹೊಸ ವಿಚಾರಗಳನ್ನು ಹಳೆ ತಲೆಮಾರಿನ ಮೌಲ್ಯಗಳನ್ನು ಬೆರೆಸಿ ಕಾರ್ಯಕ್ರಮಗಳನ್ನು ಸಮಾಜಮುಖಿಯಾಗಿಸದಿದ್ದರೆ ಎಲ್ಲವೂ ವ್ಯರ್ಥ. ನಾವು ಬದುಕುವ ಸಮಾಜದ ಹುಳುಕುಗಳನ್ನು ಕಣ್ತೆರೆದು ನೋಡಿ ಅವುಗಳನ್ನು, ಅವುಗಳಿಗೆ ಸಾಧ್ಯವಾಗಬಹುದಾದ ಪರಿಹಾರಗಳನ್ನು ಸೂಚಿಸುವೆಡೆಗೆ ತಮ್ಮ ಕಾರ್ಯಕ್ರಮಗಳನ್ನು ಮಾಡದೆ ಕಣ್ಣು ಕಟ್ಟಿಕೊಂಡು ಓಡುವ ಕುದುರೆಯ ಹಿಂದೆ ಓಡಿದರೆ ಎಲ್ಲವೂ ವ್ಯರ್ಥ.

(ಲೇಖಕರು ಸಿನಿಮಾ, ಕಿರುತೆರೆ, ರಂಗಭೂಮಿ ಕಲಾವಿದೆ)

Leave a Reply

Your email address will not be published. Required fields are marked *

Back To Top