ತಂತ್ರಜ್ಞಾನದಿಂದ ಜೀವನ ಪದ್ಧತಿಯಲ್ಲಿ ಬದಲಾವಣೆ

ಧಾರವಾಡ: ಆಧುನಿಕ ತಂತ್ರಜ್ಞಾನದಿಂದ ನಮ್ಮ ಸಾಂಪ್ರದಾಯಿಕ ಜೀವನ ಪದ್ಧತಿಗಳಲ್ಲಿ ಬದಲಾಣೆಯಾಗಿದ್ದು, ಅದರಿಂದಾಗುವ ಪರಿಣಾಮಗಳನ್ನು ಸಿನಿಮಾದ ಮೂಲಕ ಜನರಿಗೆ ತೋರಿಸಲಾಗುತ್ತಿದೆ ಎಂದು ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳಿಕರ್ ಹೇಳಿದರು.

ಕರ್ನಾಟಕ ಮಹಾವಿದ್ಯಾಲಯದ ಶತಮಾನೋತ್ಸವದ ವರ್ಷಾಚರಣೆ ಅಂಗವಾಗಿ ಸೃಜನಾ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿನಿ ಸಪ್ತಕ ಚಲನಚಿತ್ರೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ಚಲನಚಿತ್ರಗಳನ್ನು ಮನೋವಿಕಾಸದ ವಿಶ್ಲೇಷಣೆ ಕುರಿತಾದ ನೆಲೆಗಟ್ಟಿನ ಮೇಲೆ ಮಾಡಲಾಗಿದೆ. ಅದರಲ್ಲಿ ನನ್ನ ಬಾಲ್ಯದ ಹಲವಾರು ಅನುಭವಗಳನ್ನು ‘ಉಷಾಕಿರಣ’ ಚಿತ್ರದಲ್ಲಿ ತೋರಿಸಿದ್ದೇನೆ. ಆ ಮೂಲಕ ಆಧುನಿಕ ಸಂಸ್ಕೃತಿ ಮತ್ತು ಸಂಪ್ರದಾಯ ನಮ್ಮ ವ್ಯಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ನಟ ಯಶವಂತ ಸರದೇಶಪಾಂಡೆ, ಮಹಾವಿದ್ಯಾಲಯದ ಪ್ರಾಚಾರ್ಯು ಡಾ. ರಾಜೇಶ್ವರಿ ಮಹೇಶ್ವರಯ್ಯ, ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಎ.ಎ. ಅಮ್ಮಿನಭಾವಿ, ಡಾ. ಎಸ್.ಆರ್. ಗಣಿ, ಡಾ. ಅಶೋಕ ಐನಾಪೂರ, ಡಾ. ಪೂಜಾರ, ಡಾ. ಪ್ರಭಾಕರ ಕಾಂಬಳೆ, ಇತರರು ಉಪಸ್ಥಿತರಿದ್ದರು. ನಂತರ ಡಾ. ಮಲ್ಲಿಕಾರ್ಜುನ ಪಾಟೀಲ ಅವರ ಕಥೆ ಆಧಾರಿತ ‘ನೇಗಿಲಯೋಗಿ’ ಚಲನಚಿತ್ರ ಪ್ರದರ್ಶಿಸಲಾಯಿತು.