ತಂಡ್ರಗುಳಿಯಲ್ಲಿ ಸ್ಪೋಟದಿಂದ ಸಡಿಲಾದ ಸಿಮೆಂಟ್ ಲೇಪನ

ಶೇಷಗಿರಿ ಮುಂಡಳ್ಳಿ ಕಾರವಾರ
ಕುಮಟಾ ತಾಲೂಕಿನ ಹೆದ್ದಾರಿ ಬದಿಯ ಗ್ರಾಮ ತಂಡ್ರಕುಳಿಯ ನಾಗರಿಕರು ನೆಮ್ಮದಿಯ ನಿದ್ದೆಯನ್ನು ಕಳೆದುಕೊಂಡು ಎರಡು ವರ್ಷವೇ ಆಗಿದೆ.

ರಾಷ್ಟ್ರಿಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ವೇಳೆ ಗುಡ್ಡ ಕುಸಿದು ಪ್ರಾಣ ಹಾನಿಯಾದ ನೋವು ಇನ್ನೂ ಮಾಸಿಲ್ಲ. ಇತ್ತೀಚೆಗೆ ಕಲ್ಲನ್ನು ಒಡೆಯಲು ಸ್ಫೋಟ ಮಾಡಿದ ಪರಿಣಾಮ ಹಲವಾರು ಮನೆಗಳ ಮೇಲೆ ಕಲ್ಲಿನ ಸುರಿಮಳೆಯೇ ಆಗಿತ್ತು. ಈಗ ಮತ್ತೊಂದು ಆತಂಕ ಗ್ರಾಮಸ್ಥರಲ್ಲಿ ಆರಂಭವಾಗಿದೆ.

ಹೌದು, ಗುಡ್ಡ ಕುಸಿತ ತಡೆಯುತ್ತೇವೆ ಎಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್​ಬಿ ಕಂಪನಿಯು ಹೆದ್ದಾರಿ ಪಕ್ಕದ ಗುಡ್ಡಗಳಿಗೆ ಸಿಮೆಂಟ್ ಲೇಪನ ಮಾಡಿ ಕೈತೊಳೆದುಕೊಂಡಿದೆ. ಜತೆಯಲ್ಲಿ ಗುಡ್ಡ ಕುಸಿಯುವುದಿಲ್ಲ ಎಂಬ ಭರವಸೆಯನ್ನು ಜನರಿಗೆ ನೀಡಿದೆ.

ಈಗ ಇವರ ಭರವಸೆ ಹುಸಿಯಾಗುತ್ತದೆ ಎಂಬ ದಟ್ಟ ಅನುಮಾನ ಸ್ಥಳೀಯರಲ್ಲಿ ಕಾಡತೊಡಗಿದೆ. ಕಾರಣ, ಕಲ್ಲನ್ನು ಒಡೆಯಲು ಸ್ಫೋಟ ಮಾಡಿದ ಜಾಗದಲ್ಲಿ ದೊಡ್ಡ ಹೊಂಡವೇ ಸೃಷ್ಟಿಯಾಗಿದೆ. ಅಲ್ಲಿ ನೀರು ಕೂಡಾ ಬಂದಿದೆ. ಸ್ಪೋಟದ ಕಂಪನಕ್ಕೆ ಗುಡ್ಡಕ್ಕೆ ಮಾಡಿದ ಸಿಮೆಂಟ್ ಲೇಪನವೂ ಉದುರಿ ಬೀಳುತ್ತಿದೆ. ಆ ಜಾಗದಲ್ಲಿ ನೀರು ಜಿನುಗುತ್ತಿದೆ. ಇದರಿಂದ ಗುಡ್ಡದ ಮಣ್ಣು ಸಡಿಲಾಗಿ ಮತ್ತೆ ಕುಸಿಯಬಹುದು ಎಂಬ ಮಾತು ಕೇಳಿಬರುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮ ಆತಂಕವನ್ನು ಹೇಳಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕುಮಟಾದ ಶಾಸಕ ದಿನಕರ ಶೆಟ್ಟಿ ಕೂಡ ಇಲ್ಲಿಗೆ ಭೇಟಿ ನೀಡಿ ಸಿಮೆಂಟ್ ಲೇಪನ ಕಾಮಗಾರಿಯ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮತ್ತೊಮ್ಮೆ ಗುಡ್ಡ ಕುಸಿದು ಅವಾಂತರ ಆಗುವುದರೊಳಗೆ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಬೇಕು ಎನ್ನುವ ಆಗ್ರಹ ಸ್ಥಳೀಯರದ್ದು.

ವಾಹನ ಇಳಿಯದೇ ಸ್ಥಳ ಪರಿಶೀಲಿಸಿದ ಎಸಿ ಮೇಡಮ್

ತಂಡ್ರಗುಳಿಯ ಘಟನಾ ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಸೋಮವಾರ ಸಂಜೆ ಭೇಟಿ ನೀಡಿದರು. ಆದರೆ ಇವರ ಭೇಟಿ ಮತ್ತು ಸ್ಥಳದ ಪರಿಶೀಲನೆ ಕಾಟಾಚಾರಕ್ಕೆ ಎಂಬಂತೆ ಇತ್ತು. ತಮ್ಮ ಕಾರಿನಿಂದ ಇಳಿಯದೆ ಕುಳಿತಲ್ಲಿಂದಲೇ ಪರಿಶೀಲನೆ ನಡೆಸಿದರು. ಇದು ಸ್ಥಳಿಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರಿನಲ್ಲೇ ಕುಳಿತು ಪರಿಶೀಲನೆ ಮಾಡಿದರೆ ವಾಸ್ತವ ಹೇಗೆ ತಿಳಿದೀತು ಎಂಬುದು ತಂಡ್ರಕುಳಿ ಜನರ ಪ್ರಶ್ನೆ.

ಕನಿಷ್ಠ ಜ್ಞಾನ ಇರುವ ಇಂಜಿನಿಯರ್​ಗಳು ಸಂಬಂಧಿಸಿದ ಕಂಪನಿಯಲ್ಲಿ ಇಲ್ಲ ಎಂಬ ಅನುಮಾನ ಕಾಡುತ್ತಿದೆ. ಗುಡ್ಡದಿಂದ ನೀರು ಬರುತ್ತಿದ್ದರೂ ಸಿಮೆಂಟ್ ಪ್ಲಾಸ್ಟರ್ ಮಾಡಿದ್ದಾರೆ. ಇದಕ್ಕೆ ಏನು ಹೇಳಬೇಕು. ಅಧಿಕಾರಿಗಳು ವಾಹನದಲ್ಲಿ ಕುಳಿತೇ ಪರಿಶೀಲನೆ ಮಾಡುತ್ತಾರೆ. ಹೀಗಾಗಿ ಅಧಿಕಾರಿಗಳ ಮೇಲೆ ನಮಗೆ ಸಂಶಯ ಬರುತ್ತಿದೆ.

| ಮಂಜುನಾಥ ಅಂಬಿಗ ತಂಡ್ರಗುಳಿ ಸ್ಥಳೀಯರು

Leave a Reply

Your email address will not be published. Required fields are marked *