Bhatkal,Municipality, Needs, Freedom, From, Tanjim, ತಂಜೀಂ, ಹಿಡಿತದಿಂದ, ಪುರಸಭೆಗೆ, ಬೇಕು, ಮುಕ್ತಿ,

ತಂಜೀಂ ಹಿಡಿತದಿಂದ ಪುರಸಭೆಗೆ ಬೇಕು ಮುಕ್ತಿ

ರಾಮಚಂದ್ರ ಕಿಣಿ ಭಟ್ಕಳ
ಪುರಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸದ್ಯ ಪುರಸಭೆ ಆಡಳಿತವು ಪರೋಕ್ಷವಾಗಿ ತಂಜೀಂ ಕೈಯಲ್ಲಿದೆ. ಹೀಗಾಗಿ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ. 5-6 ಬಾರಿ ಗೆಲುವು ಸಾಧಿಸಿದ ಸದಸ್ಯರು ಕೂಡ ಏನೂ ಮಾಡಲಾಗುತ್ತಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಭಟ್ಕಳ ಪುರಸಭೆಯ 23 ವಾರ್ಡ್​ಗಳ ಪೈಕಿ ಈಗಾಗಲೇ 9 ವಾರ್ಡ್​ಗಳಲ್ಲಿ ಸದಸ್ಯರ ಅವಿರೋಧವಾಗಿ ಆಯ್ಕೆಯಾಗಿದೆ. ಜೆಡಿಎಸ್ 2, ಕಾಂಗ್ರೆಸ್ 5, ಬಿಜೆಪಿ 9 ಸ್ಥಾನಗಳಿಗೆ ಸ್ಪರ್ಧಿಸಿವೆ. ಆದರೂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳನ್ನು ನಿರ್ಧರಿಸುವುದು ತಂಜೀಂ ಸಂಸ್ಥೆ ಎಂಬಂಥ ಪರಿಸ್ಥಿತಿ ಇದೆ. ಈ ಮೂಲಕ ತಂಜೀಂ ಸಂಸ್ಥೆಯೇ ಪುರಸಭೆಯ ಆಡಳಿತ ನಡೆಸುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ. ಹಲವು ವಾರ್ಡ್​ಗಳಲ್ಲಿ ಸದಸ್ಯರು ತಮ್ಮ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಸಂಗತಿಯೂ ಗುಟ್ಟಾಗಿ ಉಳಿದಿಲ್ಲ.

ಬಗೆ ಹರಿಯದ ಸಮಸ್ಯೆಗಳು: ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ 148 ಮಳಿಗೆಗಳಿದ್ದು, 2016ರ ಆಗಸ್ಟ್ 20ರಂದು ಹರಾಜು ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಹಲವಾರು ಅಂಗಡಿ ಮಳಿಗೆಗಳ ಹರಾಜು ಮೊತ್ತ ಲಕ್ಷ ರೂಪಾಯಿಯ ಗಡಿ ದಾಟಿತ್ತು. ಇದರಿಂದ ಈ ಮೊದಲೇ ಮಳಿಗೆ ಹರಾಜು ಪಡೆದು ಅಂಗಡಿ ಇಟ್ಟುಕೊಂಡವರು ಆತಂಕಗೊಂಡಿದ್ದರು.

ಈ ಮೊದಲೇ ಇರುವವರಿಗೆ ಮಳಿಗೆಗಳನ್ನು ನೀಡಬೇಕು. ಇಲ್ಲದಿದ್ದಲ್ಲಿ ಅಂಗಡಿ ನಡೆಸುವವರ ಕುಟುಂಬ ಬೀದಿಗೆ ಬರಲಿದೆ ಎಂದು ಒತ್ತಾಯಿಸಿ ರಾಮಚಂದ್ರ ನಾಯ್ಕ ಎಂಬುವರು ಪುರಸಭೆ ಆವರಣದಲ್ಲೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆದು ಹಲವಾರು ಜನರು ಜೈಲು ಸೇರಿದ್ದರು. ಈ ಘಟನೆ ನಡೆದು 2 ವರ್ಷವಾದರೂ ಈ ಕುರಿತು ಯಾವುದೇ ಕ್ರಮ ಆಗಿಲ್ಲ. ಸ್ಪಷ್ಟ ನಿರ್ಧಾರವೂ ಹೊರಬಿದ್ದಿಲ್ಲ. ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ವಣವಾಗಿದೆ. ಆದರೆ, ಹೊಸ ಮೀನು ಮಾರುಕಟ್ಟೆ ನಿರ್ಮಾಣ ವಿಚಾರದಲ್ಲಿ ತಮ್ಮ ಸಹಮತ ಪಡೆಯದ ಕಾರಣ ಸುಸಜ್ಜಿತ ಮೀನು ಮಾರುಕಟ್ಟೆಗೆ ಸ್ಥಳಾಂತರವಾಗುವುದಿಲ್ಲ ಎಂದು ಮೀನು ಮಾರಾಟಗಾರರು ಹೇಳುತ್ತಿದ್ದಾರೆ. ಅಲ್ಲದೆ, ಈ ಕುರಿತು ಅಭ್ಯರ್ಥಿಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿದ್ದರೂ ಈವರೆಗೂ ಯಾವ ಸದಸ್ಯರು ಹೂಳೆತ್ತಲು ಗಂಭೀರವಾಗಿ ಕ್ರಮ ಕೈಗೊಂಡಿಲ್ಲ. ಜಲಮಟ್ಟ ವೃದ್ಧಿಸುವ ಪ್ರಯತ್ನವನ್ನೂ ಮಾಡಿಲ್ಲ. ಪಟ್ಟಣದಾದ್ಯಂತ ಲಕ್ಷಾಂತರ ರೂ. ವ್ಯಯಿಸಿ ಸಿಸಿ ಟಿವಿ ಅಳವಡಿಸಲಾಗಿದೆ. ಆದರೆ, ಅಪಘಾತ, ಅನಾಹುತ ಸಂಭವಿಸಿದರೆ ಈ ಸಿಸಿ ಟಿವಿಗಳು ಕಾರ್ಯನಿರ್ವಹಿಸದ ಪರಿಣಾಮ ಫೂಟೇಜ್ ಸಿಗುವುದಿಲ್ಲ. ಪುರಾತನ ಸ್ಮಾರಕಗಳ ಬಳಿ ಕಟ್ಟಡ ಕಟ್ಟಲು ಪರವಾನಗಿ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎನ್ನುವ ಆರೋಪ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ರಸ್ತೆ, ಚರಂಡಿ ನಿರ್ಮಾಣ ಮೊದಲಾದ ಮೂಲಸೌಕರ್ಯ ಕಲ್ಪಿಸುವುದು, ಮಲಿನ ನೀರು ಬಾವಿಗೆ ಸೇರುವುದನ್ನು ತಡೆಗಟ್ಟುವುದು ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರವೂ ದೊರೆಯುತ್ತಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಲ್ಲಿದೆ. ಹೀಗಾಗಿ, ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಗಳು ಆಯ್ಕೆಯಾಗಿ, ತಂಜೀಂ ಹಿಡಿತದಿಂದ ಪುರಸಭೆ ಮುಕ್ತವಾಗಬೇಕು. ಈ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಾಗಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಚಲಾಯಿಸಲು ತಂಜೀಂ ಸಂಸ್ಥೆ ಬಿಡುತ್ತಿಲ್ಲ. ಇದರಿಂದ ಭಟ್ಕಳದಲ್ಲಿ

ಎಸ್.ಎಂ. ಯಾಹ್ಯ ತರಹದ ನಾಯಕರು ಇನ್ನೂ ಬೆಳೆದಿಲ್ಲ. 5-6 ಬಾರಿ ಗೆದ್ದವರಿಗೂ ಅಭಿವೃದ್ಧಿ ಮಾಡಲಾಗುತ್ತಿಲ್ಲ. ಸಾಮಾಜಿಕ ಬಹಿಷ್ಕಾರದ ಭೀತಿಯಲ್ಲಿ ಬುದ್ಧಿವಂತ ಯುವಪೀಳಿಗೆ ಸಕ್ರಿಯವಾಗಿ ರಾಜಕೀಯ ಪ್ರವೇಶಿಸುತ್ತಿಲ್ಲ. ತಂಜೀಂ ಕಚೇರಿಯಲ್ಲಿ ನಿರ್ಣಯವಾದ ಅಂಶಗಳು ಪುರಸಭೆಯಲ್ಲಿ ಠರಾವು ಮೂಲಕ ಪಾಸ್ ಆಗುತ್ತಿವೆ. ಈ ಕುರಿತು ಚುನಾವಣೆ ಆಯೋಗ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

| ಶಕೀಲ ಮುಲ್ಲಾ ಭಟ್ಕಳ ನಿವಾಸಿ

ಭಟ್ಕಳ ಪುರಸಭೆಯ ಅಧಿಕಾರದ ಹಿಡಿತ ತಂಜೀಂ ಕೈಯಲ್ಲಿದೆ. ಇಲ್ಲಿನ ಅಧ್ಯಕ್ಷರು ಹೆಸರಿಗೆ ಮಾತ್ರ. ಒಂದೊಮ್ಮೆ ಅಂಗಡಿಕಾರರ ಸಮಸ್ಯೆಗೆ ತಂಜೀಂ ಪರಿಹಾರ ಒದಗಿಸಲು ಬಯಸಿದರೆ ಈ ಸಮಸ್ಯೆ ಎಂದೋ ಪರಿಹಾರವಾಗುತ್ತಿತ್ತು. ಈಶ್ವರ ನಾಗಪ್ಪ ನಾಯ್ಕ ಆಸರಕೇರಿ ನಿವಾಸಿ

Leave a Reply

Your email address will not be published. Required fields are marked *