ತಂಗುದಾಣಗಳಿಗಿಲ್ಲ ನಿರ್ವಹಣೆ ಭಾಗ್ಯ

| ವಿ.ಮಂಜುನಾಥ್ ಸೂಲಿಬೆಲೆ

ಹೊಸಕೋಟೆ ತಾಲೂಕಿನ ಅನೇಕ ತಂಗುದಾಣಗಳು ನಿರ್ವಹಣೆ ಕೊರತೆಯಿಂದಾಗಿ ಹಾಳಾಗಿದ್ದು, ಲಕ್ಷಾಂತರ ರೂ. ವೆಚ್ಚ ಮಾಡಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಹೊಸಕೋಟೆ-ಚಿಂತಾಮಣಿ, ಹೊಸಕೋಟೆ-ಶಿಡ್ಲಘಟ್ಟ ರಾಜ್ಯ ಹೆದ್ದಾರಿಗಳಲ್ಲಿ ಹಾದು ಹೋಗುವ ಹಾಗೂ ಗ್ರಾಮಾಂತರ ಜಿಲ್ಲಾ ಗಡಿಗೆ ಹೊಂದಿಕೊಂಡಿರುವ ಸುಮಾರು 20 ಹಳ್ಳಿಗಳಲ್ಲಿ 16ಕ್ಕೂ ಹೆಚ್ಚು ಕಡೆಗಳಲ್ಲಿ ತಂಗುದಾಣಗಳಿವೆ. ಆದರೆ ನಿರ್ವಹಣೆ ಕೊರತೆಯಿಂದ ಪುಂಡರ ಅಡ್ಡೆಗಳಾಗಿ ಮಾರ್ಪಾಡಾಗಿವೆ.

ಕಸದ ತೊಟ್ಟಿ: ಸಮರ್ಪಕ ನಿರ್ವಹಣೆ ಇಲ್ಲದೇ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದೆ. ರಾತ್ರಿ ಮದ್ಯ ಸೇವನೆ ಸೇರಿ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ. ಎಲ್ಲಿ ನೋಡಿದರೂ ಭಿತ್ತಿಪತ್ರ ಅಂಟಿಸಿ ನಿಲ್ದಾಣದ ಸೌಂದರ್ಯ ಹಾಳು ಮಾಡಲಾಗಿದೆ. ಕೆಲವೆಡೆ ಮಹಿಳೆಯರು, ಮಕ್ಕಳು ಮುಜುಗರ ಪಡುವಂತಹ ಚಿತ್ರಗಳನ್ನು ಬಿಡಿಸಲಾಗಿದೆ. ತಂಗುದಾಣದಲ್ಲಿ ಕೂರಲು ಹಾಸಿರುವ ಕಲ್ಲುಗಳ ಮೇಲೆ ಮದ್ಯದ ಬಾಟಲಿಗಳು, ಅನೈತಿಕ ಚಟುವಟಿಕೆಗೆ ಬಳಸಿದ ವಸ್ತುಗಳನ್ನು ಕಂಡು ಮಹಿಳೆಯರು ತೀವ್ರ ಮುಜುಗರ ಎದುರಿಸುವಂತಾಗಿದೆ.

ಚಾಲಕರ ಉಡಾಫೆ: ಬಿಸಿಲು-ಮಳೆ ಎನ್ನದೆ ಜನರು ರಸ್ತೆಯಲ್ಲಿ ನಿಲ್ಲುವ ಸ್ಥಿತಿ ಒಂದೆಡೆಯಾದರೆ, ಚಾಲಕರು ತಂಗುದಾಣ ಬಳಿ ಬಸ್ ನಿಲ್ಲಿಸದೆ ರಸ್ತೆ ಮಧ್ಯೆ ನಿಲುಗಡೆ ಮಾಡುತ್ತಾರೆ. ಇದರಿಂದ ತಂಗುದಾಣವಿದ್ದರೂ ರಸ್ತೆಯಲ್ಲಿಯೇ ನಿಲ್ಲುವ ಸ್ಥಿತಿ ಇದೆ ಎಂಬುದು ಪ್ರಯಾಣಿಕರ ಅಳಲು.

ನಿರ್ವಹಣೆ ಜವಾಬ್ದಾರಿ ಯಾರಿಗೆ?: ತಂಗುದಾಣಗಳ ನಿರ್ವಹಣೆ ಗ್ರಾಪಂಗಳಿಗೆ ವಹಿಸಿ, ನಿರ್ವಹಣೆಗೆ ತಗಲುವ ವೆಚ್ಚವನ್ನು ಗ್ರಾಪಂಗೆ ನೇರವಾಗಿ ತಲುಪಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಂಗುದಾಣಗಳ ಬಳಿ ಬಸ್ ನಿಲುಗಡೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ತಂಗುದಾಣದ ಬಳಿ ಸುಳಿಯುವುದೇ ಇಲ್ಲ. ಇದರಿಂದ ಈ ದುಸ್ಥಿತಿ ಬಂದಿದೆ.

| ತಮ್ಮಣ್ಣ ಗೌಡ, ಗ್ರಾಪಂ ಸದಸ್ಯ

ಪಿಲ್ಲಗುಂಪೆ ಕೈಗಾರಿಕೆ ಪ್ರದೇಶಕ್ಕೆ ನಿತ್ಯ ಸಾವಿರಾರು ಜನರು ಕೆಲಸಕ್ಕೆಂದು ಬಂದು ಹೋಗುತ್ತಾರೆ. ಅನಗತ್ಯ ಕಡೆಯಲ್ಲಿ ತಂಗುದಾಣ ನಿರ್ವಿುಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ತಂಗುದಾಣ ನಿರ್ವಣವಾಗಬೇಕು.

| ಎಂ.ಆರ್.ಉಮೇಶ್, ಅಧ್ಯಕ್ಷ, ಮಾನವ ಹಕ್ಕುಗಳ ಜಾಗೃತಿ ಸಮಿತಿ

ಕ್ಯಾಬ್, ಖಾಸಗಿ ಬಸ್​ಗಳು ರಸ್ತೆಯಲ್ಲೇ ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಕೆಎಸ್​ಆರ್​ಟಿಸಿ ಬಸ್​ಗಳನ್ನು ತಂಗುದಾಣಗಳ ಬಳಿಯೇ ನಿಲುಗಡೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ನಿಯಮ ಮೀರಿದರೆ ಚಾಲಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು.

| ಶಂಕರ್, ವ್ಯವಸ್ಥಾಪಕ, ಕೆಎಸ್​ಆರ್​ಟಿಸಿ, ಚಿಂತಾಮಣಿ ಘಟಕ

Leave a Reply

Your email address will not be published. Required fields are marked *