ಡ್ರಾಪ್ ನೆಪದಲ್ಲಿ ತಡರಾತ್ರಿ ಉದ್ಯೋಗಿ ದರೋಡೆ ; ಕಿಡ್ನಿ ಕಸಿಗಾಗಿ ಇಟ್ಟಿದ್ದ 6 ಲಕ್ಷ ರೂ. ಕಳ್ಳತನ

ಬೆಂಗಳೂರು: ಡ್ರಾಪ್ ಕೊಡುವ ಸೋಗಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯನ್ನು ಕಾರಿಗೆ ಹತ್ತಿಸಿಕೊಂಡ ದುಷ್ಕರ್ವಿುಗಳು 1.20 ಲಕ್ಷ ರೂ. ಮೌಲ್ಯದ ವಸ್ತು ದೋಚಿದ್ದಾರೆ. ಜೆ.ಪಿ. ನಗರದ ನಿವಾಸಿ ರೇಗನ್ ಡ್ಯೂಕೆ (38) ದರೋಡೆಗೊಳಗಾದವರು.

ರೇಗನ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಮಾ.23ರ ತಡರಾತ್ರಿ ಕಲ್ಲಿಕೋಟೆಯಿಂದ ಬಸ್​ನಲ್ಲಿ ನಾಯಂಡಹಳ್ಳಿ ಜಂಕ್ಷನ್​ಗೆ ಬಂದು ಇಳಿದಿದ್ದಾರೆ. ಮನೆಗೆ ತೆರಳಲು ಬಾಡಿಗೆ ಕಾರಿಗಾಗಿ ಕಾಯುತ್ತಿದ್ದರು. ಆ ವೇಳೆ ಅಪರಿಚಿತ ಕಾರಿನಲ್ಲಿ ಬಂದಿದ್ದ ನಾಲ್ವರು ಬನಶಂಕರಿ ಕಡೆ ಹೋಗುತ್ತಿದ್ದು, ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡಿದ್ದಾರೆ. ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆ ಚೂರಿ ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾರೆ. ರೇಗನ್, ಚಿನ್ನದ ಸರ ಮತ್ತು ಉಂಗುರ ಬಿಚ್ಚಿ ಕೊಟ್ಟಿದ್ದಾರೆ. ನಂತರ ಕ್ರೆಡಿಟ್​ಕಾರ್ಡ್, ಡೆಬಿಟ್​ಕಾರ್ಡ್, ಪರ್ಸ್ ಮತ್ತು ಪಾನ್​ಕಾರ್ಡ್ ಕಸಿದುಕೊಂಡಿದ್ದಾರೆ.

ಕಾರಿನಿಂದ ಜಿಗಿದು ಪಾರು: ದುಷ್ಕರ್ವಿುಗಳು ಕೆಂಗೇರಿ ಬಳಿಯಿರುವ ಪೆಟ್ರೋಲ್ ಬಂಕ್​ನಲ್ಲಿ ಕಾರು ನಿಲ್ಲಿಸಿದ್ದಾರೆ. ರೇಗನ್ ಏಕಾಏಕಿ ಚಾಲಕನ ಪಕ್ಕದ ಸೀಟಿಗೆ ಬಂದು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆಗ ಪೆಟ್ರೋಲ್ ಹಾಕಿಸುತ್ತಿದ್ದ ವ್ಯಕ್ತಿ ಓಡಿ ಬಂದು ರೇಗನ್ ಬಳಿ ಕುಳಿತುಕೊಂಡಾಗ ಚಾಲಕ ವೇಗವಾಗಿ ಕಾರನ್ನು ಚಲಾಯಿಸಿದ್ದಾನೆ. ಕೂಡಲೇ ರೇಗನ್ ಚಾಲಕನಿಗೆ ಕಾಲಿನಿಂದ ಒದ್ದಿದ್ದಾರೆ. ಚಾಲಕ ಏಕಾಏಕಿ ಕಾರನ್ನು ನಿಲ್ಲಿಸಿದ್ದಾನೆ. ರೇಗನ್ ಕೂಡಲೇ ಕಾರಿನ ಬಾಗಿಲಿನ ಲಾಕ್ ತೆಗೆದು ಕೆಳಗೆ ಜಿಗಿದಿದ್ದಾರೆ. ದುಷ್ಕರ್ವಿುಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕೃತ್ಯ ನಡೆದ ಸ್ಥಳದ ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಬಂಧಿಸುವುದಾಗಿ ಬ್ಯಾಟರಾಯನಪುರ ಪೊಲೀಸರು ತಿಳಿಸಿದ್ದಾರೆ.

ಕಿಡ್ನಿ ಕಸಿಗಾಗಿ ಇಟ್ಟಿದ್ದ ಆರು ಲಕ್ಷ ರೂ. ಕಳ್ಳತನ

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಾಗಿ ಡಿಆರ್​ಡಿಒ ವಿಜ್ಞಾನಿ ಮನೆಯಲ್ಲಿ ಕೂಡಿಟ್ಟಿದ್ದ 6.20 ಲಕ್ಷ ರೂ. ಕಳ್ಳತನವಾಗಿದೆ. ನಾಗಮಹೇಶ್ವರ್ (40) ಎಂಬುವರ ಮನೆಯಲ್ಲಿ ಮಾ.16ರಂದು ಕಳ್ಳತನವಾಗಿದ್ದು, ಮನೆ ಕೆಲಸದ ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿ ದ್ದಾರೆ. ಕಿಡ್ನಿಗಳು ಸಂಪೂರ್ಣ ನಿಷ್ಕ್ರಿ ಯವಾಗಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ನಾಗಮಹೇಶ್ವರ್ ಚಿಕಿತ್ಸೆ ಪಡೆಯುತ್ತಿದ್ದರು. ಅದಕ್ಕಾಗಿ 10 ಲಕ್ಷ ರೂ.ಗಳನ್ನು ಬ್ಯಾಂಕ್​ನಿಂದ ಡ್ರಾ ಮಾಡಿ ಮನೆಯಲ್ಲಿಟ್ಟಿದ್ದರು. ಮಾ.16ರಂದು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹಣ ತೆಗೆದುಕೊಂಡು ಹೋಗಲು ಕಬೋರ್ಡ್ ತೆರೆದಾಗ 10 ಲಕ್ಷ ರೂ.ಗಳಲ್ಲಿ 6.20 ಲಕ್ಷ ರೂ.ಗಳು ಕಾಣೆಯಾಗಿತ್ತು.

ಈ ಕುರಿತು ಮನೆ ಕೆಲಸ ಮಾಡುವ ಧನಲಕ್ಷ್ಮೀ ಮತ್ತು ರಾಜಲಕ್ಷ್ಮೀ ಎಂಬುವರನ್ನು ನಾಗಮಹೇಶ್ವರ್ ವಿಚಾರಿಸಿದ್ದಾರೆ. ಅವರು ತಮಗೇನೂ ಗೊತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.