ಡೋಣಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ

ಮುಂಡರಗಿ: ತಾಲೂಕಿನ ಡೋಣಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿ.ಪಂ, ತಾ.ಪಂ, ಹಾಗೂ ಗ್ರಾ.ಪಂ. ಆಶ್ರಯದಲ್ಲಿ ಪ್ರಾರಂಭಿಸಿದ ಮೇವು ಬ್ಯಾಂಕ್ ಘಟಕವನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಶನಿವಾರ ಉದ್ಘಾಟಿಸಿ ರೈತರಿಗೆ ಮೇವು ವಿತರಿಸಿದರು.

ನಂತರ ಮಾತನಾಡಿ ಅವರು, ತಾಲೂಕಿನಲ್ಲಿ ಬರಗಾಲವಿರುವುದರಿಂದ ಜಾನುವಾರಗಳಿಗೆ ಮೇವಿನ ಕೊರತೆಯಾಗಬಾರದು ಎನ್ನುವ ದೃಷ್ಟಿಯಿಂದ ಮೇವು ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ. ಕದಾಂಪುರ, ಬಾಗೇವಾಡಿ ಮತ್ತು ಹಳ್ಳಿಕೇರಿ ಗ್ರಾಮದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಾಗುತ್ತದೆ. ಡಂಬಳದಲ್ಲಿ ಗೋಶಾಲೆ ತೆರೆಯಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದು ಮಾ.21ರೊಳಗೆ ಗೋಶಾಲೆ ತೆರೆಯುತ್ತೇವೆ’ ಎಂದರು.

ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಮಾತನಾಡಿ, ರೈತರಿಂದ ಟೆಂಡರ್ ಮೂಲಕ ಬಿಳಿಜೋಳ ಮೇವು ಖರೀದಿಸಿದ್ದು ಮೇವು ಬ್ಯಾಂಕ್​ನಲ್ಲಿ ರೈತರಿಗೆ ನೀಡಲಾಗುತ್ತದೆ. ದಿನಕ್ಕೆ ಒಂದು ದನಕ್ಕೆ ಪ್ರತಿ ಕೆಜಿಗೆ 2ರೂ.ನಂತೆ 5 ಕೆಜಿ ಮೇವು ನೀಡುತ್ತೇವೆ ಎಂದು ಮಾಹಿತಿ ನೀಡಿದರು. ನಂತರ ಡಂಬಳ ಗ್ರಾಮದಲ್ಲಿ ಗೋಶಾಲೆ ತೆರೆಯಲು ನಡೆಸುತ್ತಿರುವ ಸಿದ್ಧತೆಯನ್ನು ಪರಿಶೀಲಿಸಿದರು.

ಡೋಣಿ ಗ್ರಾ.ಪಂ. ಅಧ್ಯಕ್ಷ ಲಿಂಗನಗೌಡ ಹರ್ತಿ, ತಾ.ಪಂ. ಇಒ ಎಸ್.ಎಸ್. ಕಲ್ಮನಿ, ಸರ್ಕಾರಿ ಜಿಲ್ಲಾಸ್ಪತ್ರೆ ಆಡಳಿತಾಧಿಕಾರಿ ಪಿ.ಎಸ್. ಮಂಜುನಾಥ, ಉಪ ತಹಸೀಲ್ದಾರ್ ಡಿ.ಟಿ. ವಾಲ್ಮೀಕಿ, ಕಂದಾಯ ನಿರೀಕ್ಷಕ ಎಸ್.ಎಸ್. ಬಿಚ್ಚಾಲಿ, ಡಿ.ರಮೇಶ, ಎಸ್.ವಿ. ತಿಗರಿಮಠ, ಇತರರು ಇದ್ದರು.