ಡೆಂಘೆ ಜ್ವರ ಪರೀಕ್ಷೆ ಶೀಘ್ರ ಆರಂಭ

ಕಾರವಾರ: ಡೆಂಘೆ ಜ್ವರ ಪರೀಕ್ಷೆಗೆ ಶೀಘ್ರದಲ್ಲಿ ಶಿರಸಿ ಮತ್ತು ಹೊನ್ನಾವರದಲ್ಲಿ ಪ್ರಯೋಗಾಲಯ ಪ್ರಾರಂಭಿಸಲಾ ಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್. ಅಶೋಕ ಕುಮಾರ್ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲಾ ಪ್ರಯೋಗಾಲಯದಲ್ಲಿ ಡೆಂಘೆ ಪರೀಕ್ಷೆಗೆ ಅವಕಾಶವಿದೆ. ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಡಯಾಲಿಸಿಸ್​ಗೆ ಹೆಚ್ಚಿನ ಬೇಡಿಕೆ ಇದ್ದು, ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಐದು ಹೊಸ ಡಯಾಲಿಸಿಸ್ ಯಂತ್ರವನ್ನು ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಇನ್ನು ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಐದು ತಾಲೂಕು ಆಸ್ಪತ್ರೆಗಳಿಗೆ 35 ಕೆವಿ ಜನರೇಟರ್ ಕೊಡಿಸಲಾಗುತ್ತಿದೆ. ಇಲಾಖೆ ಅನುದಾನದಿಂದಲೂ ಖರೀದಿಸಿ ಎಲ್ಲ 11 ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಜನರೇಟರ್ ವ್ಯವಸ್ಥೆ ಮಾಡಲಾಗುವುದು ಎಂದು ಡಾ.ಅಶೋಕಕುಮಾರ್ ತಿಳಿಸಿದರು.

ನಿಯಂತ್ರಣದಲ್ಲಿ ಡೆಂಘೆ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಡೆಂಘೆ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ ಎಂದು ಜಿಲ್ಲಾ ಆಶ್ರಿತ ರೋಗಳ ಸರ್ವೆಕ್ಷಣಾಧಿಕಾರಿ ಕ್ಯಾ. ಡಾ. ರಮೇಶ ರಾವ್ ಹೇಳಿದರು. 76 ಡೆಂಘೆ ಪ್ರಕರಣಗಳು ಖಚಿತವಾಗಿವೆ. 443 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. 266 ಜನರ ರಕ್ತ ಪರೀಕ್ಷೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಕಾರವಾರದಲ್ಲಿ 16 ಹಾಗೂ ಹೊನ್ನಾವರದಲ್ಲಿ 34 ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲೆಡೆ ಜಾಗೃತಿ ಮೂಡಿಸಲಾಗಿದೆ. 30 ಮಲೇರಿಯಾ ಪ್ರಕರಣಗಳು ಖಚಿತವಾಗಿವೆ. ಹೊರ ಜಿಲ್ಲೆಗಳಿಂದ ಬರುವವರಿಂದ ಜಿಲ್ಲೆಯಲ್ಲಿ ರೋಗ ಹರಡುತ್ತಿದೆ ಎಂದರು.

ಶಿರಸಿಗೆ ಕೇಂದ್ರ ಸಮಾಜ ಕಲ್ಯಾಣ ಸಚಿವ

ಅಲಿಮ್ಕೊ ಸಂಸ್ಥೆಯ ಸಹಯೋಗದಲ್ಲಿ ಕೃತಕ ಕಾಲು ಜೋಡಣೆಗಾಗಿ 1500 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಘಟ್ಟದ ಮೇಲಿನ 530 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಅ. 29 ರಂದು ಶಿರಸಿ ವಿಕಾಸಾಶ್ರಮ ಮೈದಾನದಲ್ಲಿ ಆಯೋಜನೆಯಾಗಿದೆ. ಕೇಂದ್ರ ಸಮಾಜ ಕಲ್ಯಾಣ ಸಚಿವರು ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.

ಶಾಲೆಗಳಲ್ಲಿ ಜಾಗೃತಿ

ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಮೂಲಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ವಿನೋದ ಭೂತೆ ತಿಳಿಸಿದರು. 1511 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗದೆ. ವಿದ್ಯಾರ್ಥಿಗಳು ಮನೆಗೆ ಹೋಗಿ ರೋಗದ ಬಗೆಗೆ ಜಾಗೃತಿ ಮೂಡಿಸುವುದರಿಂದ ರೋಗ ನಿಯಂತ್ರಣಕ್ಕೆ ಅನುಕೂಲವಾಗುತ್ತಿದೆ. ರಾಜ್ಯದ ಕೆಲವೆಡೆ ಎಚ್1ಎನ್1 ಹೆಚ್ಚಿದೆ. ಜಿಲ್ಲೆಯಲ್ಲಿ 25 ಶಂಕಿತ ರೋಗಿಗಳು ಪತ್ತೆಯಾಗಿದ್ದು, ಐವರಲ್ಲಿ ರೊಗ ಇರುವುದು ಖಚಿತವಾಗಿದೆ. ಹಳಿಯಾಳದಲ್ಲಿ ಒಬ್ಬರು ಹಾಗೂ ಯಲ್ಲಾಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಹಳಿಯಾಳ, ಯಲ್ಲಾಪುರ ಹಾಗೂ ಮುಂಡಗೋಡಿನ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಜಿಲ್ಲೆಯಲ್ಲಿ ಇಲಿಜ್ವರದ ಶಂಕಿತ 49 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 34 ಜನರಲ್ಲಿ ಜ್ವರ ಇರುವುದು ಖಚಿತವಾಗಿದೆ. ಭಟ್ಕಳದಲ್ಲಿ ಇಬ್ಬರು, ಅಂಕೋಲಾದಲ್ಲಿ ಒಬ್ಬ ಇಲಿ ಜ್ವರದಿಂದ ಮೃತಪಟ್ಟಿದ್ದಾರೆ ಎಂದರು.