ಡೀಸೆಲ್ ವಾಹನಕ್ಕೆ ಜೈವಿಕ ಇಂಧನ

ಕೋಲಾರ: ಜಿಪಂನ ಸರ್ಕಾರಿ ಡೀಸೆಲ್ ವಾಹನಗಳಿಗೆ ಜೈವಿಕ ಇಂಧನ (ಬಯೋ ಡೀಸೆಲ್) ಬಳಸುವಂತೆ ನಿರ್ದೇಶನ ನೀಡಿದ್ದು, ಕೆಜಿಎಫ್​ನಲ್ಲಿರುವ ಜೈವಿಕ ಇಂಧನ ಮತ್ತು ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಇಂಧನ ಪೂರೈಸುವ ಜವಾಬ್ದಾರಿ ವಹಿಸಲಾಗಿದೆ.

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕೋರಿಕೆ ಮೇರೆಗೆ ಆರ್​ಡಿಪಿಆರ್ ಕಾರ್ಯದರ್ಶಿ ಎಲ್.ಕೆ. ಅತೀಕ್ ಜಿಪಂಗಳಿಗೆ ಸುತ್ತೋಲೆ ಹೊರಡಿಸಿ ಸರ್ಕಾರಿ ಡೀಸೆಲ್ ವಾಹನಗಳಿಗೆ ಜೈವಿಕ ಇಂಧನ ಬಳಸುವಂತೆ ನಿರ್ದೇಶನ ನೀಡಿದ್ದಾರೆ. ವಾಹನಗಳಿಗೆ ಬಯೋ ಡೀಸೆಲ್ ಬಳಸುವ ಬಗ್ಗೆ ಜಿಪಂ ವಾಹನ ಚಾಲಕರಿಗೆ ಸೂಕ್ತ ತರಬೇತಿ ನೀಡುವ ಜವಾಬ್ದಾರಿ ಪ್ರಾತ್ಯಕ್ಷಿಕೆ ಕೇಂದ್ರಗಳದ್ದಾಗಿದೆ. ಜೈವಿಕ ಇಂಧನವನ್ನು ಡೀಸೆಲ್ ಜತೆಗೆ ಶೇ.5 (100 ಲೀಟರ್ ಡೀಸೆಲ್​ಗೆ 5 ಲೀ) ಪ್ರಮಾಣದಲ್ಲಿ ಮಿಶ್ರಣ ಮಾಡಿ ಬಳಸುವಂತೆ ಮಾರ್ಗಸೂಚಿ ನೀಡಲಾಗಿದೆ.

ಜಿಲ್ಲೆಯಲ್ಲಿ ಹೇಗೆ?: ಕೆಜಿಎಫ್​ನ ಟಿ. ತಿಮ್ಮಯ್ಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಾಯಧನದಿಂದ 2011ರಲ್ಲೇ ಜೈವಿಕ ಇಂಧನ ಮತ್ತು ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರವನ್ನು 10 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಿತ್ತು. ಪ್ರಸ್ತುತ ವಾರ್ಷಿಕ ನಿರ್ವಹಣೆಗೆ 2 ಲಕ್ಷ ರೂ.ಗಳನ್ನು ಸರ್ಕಾರ ನೀಡುತ್ತಿದೆ.

ಇಷ್ಟು ದಿನ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಬಳಕೆಯಾಗುತ್ತಿದ್ದ ಘಟಕ ಇನ್ನು ಮುಂದೆ ಸರ್ಕಾರದ ಡೀಸೆಲ್ ವಾಹನಗಳಿಗೆ ಇಂಧನ ಪೂರೈಸುವ ಜವಾಬ್ದಾರಿ ನಿರ್ವಹಿಸಲಿದೆ.

ಘಟಕದಲ್ಲಿ ಇಬ್ಬರು ಸಿಬ್ಬಂದಿ ಇದ್ದು, ಜೈವಿಕ ಇಂಧನದ ಬೀಜಗಳ ಸಂಗ್ರಹಣೆ ಕಾರ್ಯ ನಡೆಯುತ್ತಿದೆ. ಜೈವಿಕ ಇಂಧನ ಬಳಕೆಯಿಂದ ವಾಹನದ ಕಾರ್ಯಕ್ಷಮತೆ ಹೆಚ್ಚುವ ಜತೆಗೆ ಹಣ ಉಳಿತಾಯವಾಗುತ್ತದೆ ಎನ್ನುತ್ತಾರೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಎಸ್. ಸುರೇಶ್​ಕುಮಾರ್.

ಜಿಪಂನ ಸರ್ಕಾರಿ ಡೀಸೆಲ್ ವಾಹನಗಳಿಗೆ ಜೈವಿಕ ಇಂಧನ ಬಳಸುವ ಮೂಲಕ ಬಯೋ ಡೀಸೆಲ್ ಬಳಕೆ ಉತ್ತೇಜಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ಇಂಧನ ಬಳಕೆ ಬಗ್ಗೆ ಚಾಲಕರಿಗೆ ಕಾರ್ಯಾಗಾರ ರೂಪಿಸಿ ಶೀಘ್ರ ಚಾಲನೆ ನೀಡುವಂತೆ ನಿರ್ದೇಶನ ನೀಡಲಾಗಿದೆ.

| ಜಿ.ಎನ್.ದಯಾನಂದ್, ವ್ಯವಸ್ಥಾಪಕ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ನಿರ್ವಹಣೆ), ಬೆಂಗಳೂರು

ಸಂಸ್ಥೆಯಲ್ಲಿ ಸ್ಥಾಪಿಸಿರುವ ಘಟಕ ತಿಂಗಳಿಗೆ 200 ಲೀಟರ್ ಜೈವಿಕ ಇಂಧನ ಉತ್ಪಾದಿಸುವ ಸಾಮರ್ಥ್ಯವಿದೆ. ಈಗಾಗಲೆ ಸಂಸ್ಥೆಯ 3 ಬಸ್​ಗಳಿಗೆ ತಿಂಗಳಿಗೆ ಕನಿಷ್ಠ 90 ಲೀ. ಬಳಸಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಜಿಪಂ ಅಧಿಕಾರಿಗಳ ಜತೆ ರ್ಚಚಿಸಿ ಜಿಪಂ ವಾಹನ ಚಾಲಕರಿಗೆ ತಿಂಗಳಾಂತ್ಯದೊಳಗೆ ತರಬೇತಿ ನೀಡಿ ಮುಂದಿನ ದಿನಗಳಲ್ಲಿ ಅಗತ್ಯತೆಗೆ ತಕ್ಕಂತೆ ಜೈವಿಕ ಇಂಧನ ಪೂರೈಸಲಾಗುವುದು.

| ಎಸ್. ಸುರೇಶ್​ಕುಮಾರ್, ಜೈವಿಕ ಇಂಧನ ಮತ್ತು ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಸಂಯೋಜಕ, ಕೆಜಿಎಫ್