ಮೂಡಿಗೆರೆ: ಕಾಫಿ ಬೆಳೆಗಾರರು ವಿವಿಧ ರೀತಿಯ ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಬೆಳೆಗಾರರ ಸಮಸ್ಯೆಗಳತ್ತ ಗಮನಹರಿಸಬೇಕು. ಕಾಡಾನೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ಜತೆಗೆ ರೈತರ ನೆರವಿಗೆ ಧಾವಿಸಬೇಕು ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಒತ್ತಾಯಿಸಿದರು.

ತಾಲೂಕು ಬೆಳೆಗಾರರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ರೈತ ಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡಿದ್ದರ ಪರಿಣಾಮವಾಗಿ ಕಸ್ತೂರಿ ರಂಗನ್ ವರದಿ ಜಾರಿಯೆಂಬ ತೂಗುಕತ್ತಿಯಿಂದ ರೈತಾಪಿ ವರ್ಗ ಬಚಾವಾಗಿದೆ ಎಂದರು.
ಡೀಮ್ಡ್ ಅರಣ್ಯದ ಹೆಸರಿನಲ್ಲಿ ಮತ್ತೊಂದು ತೂಗುಕತ್ತಿಯನ್ನು ಬೆಳೆಗಾರರ ಎದುರು ನೇತುಹಾಕುವ ಪ್ರಯತ್ನ ನಡೆಯುತ್ತಿದೆ. ಹೀಗೆಯೆ ದಬ್ಬಾಳಿಕೆ ಮುಂದುವರಿದರೆ ಬೆಳೆಗಾರರು ಹಾಗೂ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗುವುದರೊಂದಿಗೆ ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ರೈತಾಪಿವರ್ಗ ಬೀದಿಗಿಳಿಯುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಮಾತನಾಡಿ, ಜೂ.9ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಜಿಲ್ಲಾ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಹಲವು ರೀತಿಯ ಚರ್ಚೆ ನಡೆಸಲಾಗುವುದು. ಡೀಮ್ಡ್ ಅರಣ್ಯ, ಕಾಡಾನೆ ಇತರ ಕಾಡುಪ್ರಾಣಿಗಳ ಹಾವಳಿ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಾರರು ಜಮೀನಿಗೆ ಕಾಲಿಡದಂತಾಗಿದೆ. ತೋಟ, ಗದ್ದೆಯನ್ನು ಪಾಳು ಬಿಡಬೇಕಾಗಿದೆ. ನಮ್ಮ ಉಳಿವಿಗಾಗಿ ಪಕ್ಷ ಭೇದ ಮರೆತು ಎಲ್ಲ ಬೆಳೆಗಾರರೂ ಸಮಾವೇಶದಲ್ಲಿ ಪಾಲ್ಗೊಂಡು ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ಸಮಾವೇಶದ ಕುರಿತು ವಿಚಾರ ಮಂಡಿಸಿದರು. ಒತ್ತುವರಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ದೀಪಕ್ ದೊಡ್ಡಯ್ಯ, ಬ್ರಿಜೇಶ್ ಕಡಿದಾಳು, ಟಿ.ಪಿ.ಸುರೇಂದ್ರ, ಅಶೋಕ್, ಸುರೇಶ್, ಸುಂದರೇಶ್, ಕೆ.ಡಿ.ಮನೋಹರ್, ಡಿ.ಎಸ್.ರಘು, ಟಿ.ಡಿ.ಮಲ್ಲೇಶ್, ರತೀಶ್‌ಕುಮಾರ್, ಕರಮಕ್ಕಿ ಮಹೇಶ್, ಕೆ.ಎಂ.ಶಾಂತೇಗೌಡ, ರತ್ನಾಕರ್ ಖಾಂಡ್ಯ, ಕೆ.ಕೆ.ರಘು, ವಾಸು ಪೂಜಾರಿ, ಪೂರ್ಣೇಶ್ ಮೈಲಿಮನೆ, ಕುಮಾರ್ ಇತರರಿದ್ದರು.