ಡಿಸಿಸಿ ಬ್ಯಾಂಕಿಗೆ ಇಬ್ಬರು ಜಿಎಂ ನೇಮಕ

ವಿಜಯವಾಣಿ ಸುದ್ದಿಜಾಲ ಬೀದರ್
ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್​ ಇದೇ ಮೊದಲ ಬಾರಿ ಇಬ್ಬರು ಪ್ರಧಾನ ವ್ಯವಸ್ಥಾಪಕರನ್ನು (ಜಿಎಂ) ನೇಮಿಸಲಾಗಿದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವುದು, ಬ್ಯಾಂಕಿಂಗ್ ವ್ಯವಹಾರ ಮತ್ತಷ್ಟು ಸುವ್ಯವಸ್ಥಿತ ನಡೆಯುವ ನಿಟ್ಟಿನಲ್ಲಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅಧ್ಯಕ್ಷತೆಯ ಆಡಳಿತ ಮಂಡಳಿ ಈ ನಿರ್ಣಯ ಕೈಗೊಂಡಿದೆ.
ಬ್ಯಾಂಕಿನ ಡಿಜಿಎಂ ವಿಠ್ಠಲ್ರೆಡ್ಡಿ ಯಡಮಲ್ಲೆ ಹಾಗೂ ಚನ್ನಬಸಯ್ಯ ಸ್ವಾಮಿ ಅವರನ್ನು ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ನೇಮಿಸಲಾಗಿದೆ. 24 ವರ್ಷಗಳಿಂದ ಬ್ಯಾಂಕಿನಲ್ಲಿ ವಿವಿಧ ಹುದ್ದೆ ನಿಭಾಯಿಸಿರುವ ವಿಠ್ಠಲ್ರೆಡ್ಡಿ ಅವರು ಈಗ ಬ್ಯಾಂಕಿಂಗ್ ಮತ್ತು ಹಣಕಾಸು ವಿಭಾಗದ ಜಿಎಂ ಕಾರ್ಯಭಾರ ನೋಡಿಕೊಳ್ಳಲಿದ್ದಾರೆ. 14 ವರ್ಷದಿಂದ ಕೆಲಸ ಮಾಡುತ್ತಿರುವ ಚನ್ನಬಸಯ್ಯ ಅವರು ಆಡಳಿತ ವಿಭಾಗದ ಜಿಎಂ ಸ್ಥಾನ ನಿರ್ವಹಿಸಲಿದ್ದಾರೆ. ಹೊಸ ವರ್ಷದ ಆರಂಭದಂದು ಇಬ್ಬರೂ ಅಧಿಕಾರ ವಹಿಸಿಕೊಂಡಿದ್ದಾರೆ.
ಎರಡೂವರೆ ವರ್ಷಗಳಿಂದ ಬ್ಯಾಂಕಿನ ಜಿಎಂ ಆಗಿ ಅತ್ಯುತ್ತಮ ಕೆಲಸ ಮಾಡಿದ ಚಂದ್ರಶೇಖರ ಹತ್ತಿ ಡಿ.31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಹತ್ತಿ 25 ವರ್ಷಗಳಿಂದ ಬ್ಯಾಂಕಿನ ನಾನಾ ಹುದ್ದೆಗಳನ್ನು ಸಮರ್ಥ ನಿಭಾಯಿಸಿದ್ದಾರೆ. ಬ್ಯಾಂಕ್ ವ್ಯವಹಾರ, ವಹಿವಾಟು ಪಾರದರ್ಶಕ ನಡೆಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದಾರೆ. ಮುಂಚೆ ಬ್ಯಾಂಕಿಗೆ ಒಂದೇ ಜಿಎಂ ಹುದ್ದೆ ಇತ್ತು. ಮೊದಲ ಬಾರಿ ಸರ್ಕಾರದ ಅನುಮತಿ ಪಡೆದು ಇಬ್ಬರಿಗೆ ನೇಮಿಸಲಾಗಿದೆ. ನಿವೃತ್ತಿ ಹೊಂದಿದ ಚಂದ್ರಶೇಖರ ಹತ್ತಿ ಅವರಿಗೆ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಇತ್ತೀಚೆಗೆ ಆತ್ಮೀಯವಾಗಿ ಸತ್ಕರಿಸಿ ಬೀಳ್ಕೊಟ್ಟಿತು.
ಬ್ಯಾಂಕಿನ ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಆಡಳಿತ ಮಂಡಳಿ, ನೌಕರರ ಒಕ್ಕೂಟದಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮದಿಂದ ಬ್ಯಾಂಕ್ ಉತ್ತಮ ಸಾಧನೆ ಮಾಡುತ್ತಿದೆ. ಹತ್ತಿ ಅವರು ಸುದೀರ್ಘ ಅವಧಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಬ್ಯಾಂಕಿಗೆ ಬರುವವರರೊಂದಿಗೆ ತಾಳ್ಮೆ, ಪ್ರೀತಿಯಿಂದ ಮಾತನಾಡಿಸಿ ಬಾಂಧವ್ಯ ಬೆಳೆಸಿದ್ದರು. ಬ್ಯಾಂಕಿನ ಪ್ರಗತಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಹತ್ತಿ ಮಾತನಾಡಿ, ದಿ.ಗುರುಪಾದಪ್ಪ ನಾಗಮಾರಪಳ್ಳಿ ಮಾರ್ಗದರ್ಶನವೇ ಸುದೀರ್ಘ ಅವಧಿ ಕೆಲಸ ಮಾಡಲು ಕಾರಣ ಎಂದರು. ಇದೇ ವೇಳೆ ನೂತನ ಪ್ರಧಾನ ವ್ಯವಸ್ಥಾಪಕ ವಿಠ್ಠಲ್ರೆಡ್ಡಿ ಹಾಗೂ ಚನ್ನಬಸಯ್ಯ ಅವರಿಗೆ ಸ್ವಾಗತಿಸಿ ಗೌರವಿಸಲಾಯಿತು.
ನಿರ್ದೇಶಕರಾದ ಮಹ್ಮದ್ ಸಲಿಮುದ್ದೀನ್, ಅಮರ ಖಂಡ್ರೆ, ವಿಜಯಕುಮಾರ ಪಾಟೀಲ್ ಗಾದಗಿ, ಬಸವರಾಜ ಹೆಬ್ಬಾಳೆ, ಸಂಜಯಸಿಂಗ್ ಹಜಾರಿ, ಶರಣಪ್ಪ ಕನ್ನಾಳೆ, ಪರಮೇಶ್ವರ ಮುಗಟೆ, ಸಂಗಮೇಶ ಪಾಟೀಲ್, ಶಿವಶರಣಪ್ಪ ತಗಾರೆ, ಜಗನ್ನಾಥರೆಡ್ಡಿ, ಬಸವರಾಜ ಗೌಣಿ, ಹಣಮಂತರಾವ ಪಾಟೀಲ್, ಸಿಇಒ ಮಹಾಜನ ಮಲ್ಲಿಕಾರ್ಜುನ, ಡಿಜಿಎಂಗಳಾದ ಸದಾಶಿವ ಪಾಟೀಲ್, ಪಂಢರಿ ರೆಡ್ಡಿ, ಅನೀಲಕುಮಾರ ಪಾಟೀಲ್, ರಾಜಕುಮಾರ ಆಣದೂರೆ ಇತರರಿದ್ದರು. ಬ್ಯಾಂಕ್ ಅಧೀಕ್ಷಕ ಬಸವರಾಜ ಕಲ್ಯಾಣ ನಿರೂಪಣೆ ಮಾಡಿ ವಂದಿಸಿದರು.