ಡಿಸಿಯಿಂದ ಮತಗಟ್ಟೆಯ ವಿಡಿಯೋ ವೀಕ್ಷಣೆ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ತವರೂರು ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ಉಪಸ್ಥಿತಿಯಲ್ಲಿ ಅಕ್ರಮ ಮತ ಚಲಾವಣೆ ಮಾಡಲಾಗಿದೆ ಎನ್ನುವ ಬಿಜೆಪಿ ಬೂತ್ ಏಜೆಂಟ್ ದೂರಿನ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತಗಟ್ಟೆಯ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿದರು.
ದೂರುದಾರರಾದ ಎಂ.ಎನ್.ರಾಜು ಹಾಗೂ ಮಾಯಣ್ಣ ಅವರ ಸಮ್ಮುಖದಲ್ಲಿ ವಿಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಮತದಾನದ ವೇಳೆ ದೂರುದಾರರು ಗುರುತಿಸಿದ ದೃಶ್ಯಗಳನ್ನು ಪರಿಶೀಲಿಸಿ, ಅವರಿಂದ ಹೇಳಿಕೆ ದಾಖಲಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೂರುದಾರ ಎಂ.ಎನ್.ರಾಜು, ಮತಗಟ್ಟೆ ಸಂಖ್ಯೆ 244ರಲ್ಲಿ ಏ.18ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ, ಸುಮಾರು ಅರ್ಧ ಗಂಟೆ ಕಾಲ ಮತಗಟ್ಟೆಯೊಳಗಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಒಬ್ಬನೇ ವ್ಯಕ್ತಿ 2 ಬಾರಿ ಮತ ಚಲಾಯಿಸಿರುವುದನ್ನೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಇದೇ ರೀತಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗಳಲ್ಲಿಯೂ ಅಕ್ರಮ ಮತದಾನ ನಡೆರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೇವೆ ಎಂದರು.


ಹೊಸ ದೂರು ಸಲ್ಲಿಸಿದ ಎ.ಮಂಜು
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಯ ಒಂದು ಗಂಟೆ ಅವಧಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆ ಆಗಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಕೋರಿ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಸಂಜೆ 5 ಗಂಟೆವರೆಗೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.50 ಮತದಾನವಾಗಿತ್ತು. 6 ಗಂಟೆ ವೇಳೆಗೆ ಅದು ಶೇ.80 ತಲುಪಿದೆ. ಕೇವಲ 1 ಗಂಟೆ ಅವಧಿಯಲ್ಲಿ ಇಷ್ಟು ಪ್ರಮಾಣದ ರಭಸದ ಮತದಾನ ಆಗಿರುವುದನ್ನು ಗಮನಿಸಿದರೆ ಚುನಾವಣಾ ಅಕ್ರಮ ನಡೆದಿರುವ ಅನುಮಾನ ಮೂಡುತ್ತದೆ. ಆದ್ದರಿಂದ ಆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರತಿಭಟನೆ: ಲೋಕಸಭೆ ಚುನಾವಣೆ ಮತದಾನ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅಕ್ರಮ ಮತದಾನ ಮಾಡಿಸಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಮತದಾನ ದಿನದ ಎಲ್ಲ ವಿಡಿಯೋ ದೃಶ್ಯಾವಳಿ ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ. ಜಿಲ್ಲಾಡಳಿತ ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದರು. ಪಡುವಲಹಿಪ್ಪೆ ಮತಗಟ್ಟೆ ಬಿಜೆಪಿ ಬಿಜೆಪಿ ಏಜೆಂಟರಾದ ಮಾಯಣ್ಣ, ಎಂ.ಎನ್. ರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪ್ರತಿಭಟನೆಯಲ್ಲಿದ್ದರು.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ನಡೆದಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಶನಿವಾರ ದೂರುದಾರರ ಸಮ್ಮುಖದಲ್ಲಿ ಅಲ್ಲಿನ ವಿಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಿ, ಅವರ ಹೇಳಿಕೆ ಪಡೆದಿದ್ದೇನೆ. ಪ್ರಕರಣವಿನ್ನೂ ತನಿಖೆ ಹಂತದಲ್ಲಿದೆ. ವಿಡಿಯೋ ಸಿಡಿಯೊಂದಿಗೆ ಸಂಬಂಧಿಸಿದ ವರದಿಯನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸುತ್ತೇನೆ. ಅವರು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುತ್ತಾರೆ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಚುನಾವಣಾಧಿಕಾರಿ