ಡಿನೋಟಿಫಿಕೇಷನ್ ಹೊರಡಿಸಲು ಆಗ್ರಹ

ನವಲಗುಂದ: ನ್ಯಾಯಾಧಿಕರಣದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡಿನೋಟಿಫಿಕೇಷನ್ ಹೊರಡಿಸಿ ಕೂಡಲೇ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಮಂಗಳವಾರ ರೈತ ಹೋರಾಟಗಾರರು ಪಟ್ಟಣದ ನೀಲಮ್ಮ ಕೆರೆ ಬಳಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ‘ಮಹದಾಯಿ, ಕಳಸಾ-ಬಂಡೂರಿ ನಾಲೆಗಳನ್ನು ಮಲಪ್ರಭಾ ನದಿಗೆ ಜೋಡಣೆ ಮಾಡಿ ಉತ್ತರ ಕರ್ನಾಟಕ ರೈತರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಹೋರಾಟ ಮಾಡುತ್ತಿದ್ದೇವೆ. ರೈತರ ಸಮಸ್ಯೆಗೆ ರಾಜಕಾರಣಿಗಳು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಈ ಭಾಗದ ಸಂಸದರು, ಶಾಸಕರು, ರೈತರ ಮೇಲೆ ಕರುಣೆ ತೋರಿಸುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ರೈತರು ನೆನಪಾಗುತ್ತಾರೆ. ರೈತರ ಸಮಸ್ಯೆ ಬಗೆಹರಿಸುವುದು ರಾಜಕಾರಣಿಗಳಿಗೆ ಬೇಡವಾಗಿದೆ. ಇದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.
ಸಂಸದ ಪ್ರಲ್ಹಾದ ಜೋಶಿ ಅವರು, ‘ಕೇಂದ್ರ ಸರ್ಕಾರಕ್ಕೆ ಮನವೊಲಿಕೆ ಮಾಡಿದರೆ ಮಹದಾಯಿ ಯೋಜನೆ ಸಾಕಾರಗೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಭಾಗದ ರೈತರ ಬೇಡಿಕೆ ಈಡೇರಿಸಲು ಮನಸ್ಸು ಮಾಡಬೇಕು. ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ಒಂದು ಅಂತಿಮ ತಿರ್ವನ ತಗೆದುಕೊಳ್ಳಬೇಕು. ಈಗಾಗಲೇ ನ್ಯಾಯಾಧಿಕರಣದಲ್ಲಿ ರಾಜ್ಯದ ಪಾಲಿನ 13.50 ಟಿಎಂಸಿ ಮಹದಾಯಿ ನೀರಿನ ಹಕ್ಕು ಪಡೆಯಲು ಆದೇಶಿಸಿದೆ. ಕಾಮಗಾರಿ ಕೈಗೆತ್ತಿಕೊಳ್ಳಲು ಡಿನೋಟಿಫಿಕೇಷನ್ ಹೊರಡಿಸಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ರೈತರ ಸಮಸ್ಯೆ ಪರಿಹಾರ ಮಾಡಲು ಮುಂದಾಗಬೇಕು. ರೈತರ ಬಹುದಿನದ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು’ ಎಂದು ಒತ್ತಾಯಿಸಿದರು.
ಮಲ್ಲೇಶ ಉಪ್ಪಾರ ಮಾತನಾಡಿ, ‘ಈಗಾಗಲೇ ಮಹದಾಯಿ ಯೋಜನೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಳ್ಳಷ್ಟು ಗಮನ ಹರಿಸಿಲ್ಲ. ರೈತರು ಕಾಟಾಚಾರಕ್ಕೆ ಹೋರಾಟ ಮಾಡುತ್ತಿದ್ದಾರೆ. ರೈತರನ್ನು ಕಡೆಗಣಿಸಿದರೆ, ಕೇಳೋರ್ಯಾರು ಇಲ್ಲ ಎಂಬ ಧೋರಣೆ ಅನುಸರಿಸುತ್ತಿದ್ದಾರೆಂದು’ ಎಂದು ಆರೋಪಿಸಿದರು.
ಒಂದೂವರೆ ತಾಸಿಗೂ ಹೆಚ್ಚು ಸಮಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಪ್ರಯಾಣಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಗ್ರೇಡ್-2 ತಹಸೀಲ್ದಾರ್ ಎಂ.ಜೆ. ಹೊಕ್ರಾಣಿ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಘುನಾಥ ನಡುವಿನಮನಿ, ವಿಠ್ಠಲ ಗೊಣ್ಣಾಗರ, ಡಿ.ವಿ. ಕುರಹಟ್ಟಿ, ಮರಿಗೆಪ್ಪ ಪಲ್ಲೇದ ಸಿದ್ದಪ್ಪ ಖಂಡಿಬಾಗಿಲ ಇತರರು ಇದ್ದರು.

Leave a Reply

Your email address will not be published. Required fields are marked *