ಡಿಕೆ ಸಹೋದರರಿಂದ ಕ್ಷೇತ್ರ ಲೂಟಿ

ಆನೇಕಲ್: ಐದು ವರ್ಷದಲ್ಲಿ ಸುಭದ್ರ ಸರ್ಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಸಿಡಿ ಹೊಸಕೋಟೆಯಲ್ಲಿ ಭಾನುವಾರ ಬಿಜೆಪಿ ಪರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮೋದಿ ಅವರ ಆಡಳಿತ ದೇಶದಾದ್ಯಂತ ಜನತೆ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಮೋದಿ ಅವರ ಪರ ಅಲೆ ಇದೆ. ಗ್ರಾಮಾಂತರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಗೆದ್ದು ಬರಲಿದ್ದಾರೆ ಎಂದರು.

ಸಂಸದ ಡಿ.ಕೆ.ಸುರೇಶ್ ಈ ಭಾಗದಲ್ಲಿ ಗಣಿ ಲೂಟಿ ಮಾಡಲು ಮುಂದಾಗಿದ್ದು, ಕನಕಪುರವನ್ನು ಈಗಾಗಲೇ ಲೂಟಿ ಹೊಡೆಯಲಾಗಿದೆ ಎಂದು ಆರೋಪಿಸಿದರು.

ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಇಬ್ಬರು ಈಗಾಗಲೇ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಮತದಾರರನ್ನು ಬೆದರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಅದೇ ಈ ಭಾಗದಲ್ಲಿ ಈ ಬಾರಿ ಮುಳುವಾಗಲಿದೆ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಆನೇಕಲ್ ತಾಲೂಕು ಬಿಜೆಪಿಯ ಭದ್ರಕೋಟೆ. ಅತಿ ಹೆಚ್ಚು ಮತಗಳನ್ನು ಬಿಜೆಪಿಗೆ ನೀಡಲಿದ್ದಾರೆ ಎಂದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಜಿಲ್ಲಾ ಮಾಜಿ ಪಂಚಾಯಿತಿ ಅಧ್ಯಕ್ಷ ಕೆ.ಸಿ ರಾಮಚಂದ್ರ, ಜಿಪಂ ಮಾಜಿ ಸದಸ್ಯ ನಾರಾಯಣಪ್ಪ, ಎನ್.ಶಂಕರ್, ಸಾ.ವ. ಪ್ರಕಾಶ್ ಇದ್ದರು.