ಡಿಕೆಶಿ ಸಹೋದರರ ಕುತಂತ್ರ ರಾಜಕಾರಣ

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಸಹೋದರರೇ ರಾಮನಗರ ವಿಧಾನಸಭೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕಳಿಸಿ ಕಡೇ ಕ್ಷಣದಲ್ಲಿ ಮತ್ತೆ ತಮ್ಮ ಪಕ್ಷಕ್ಕೆ ಕರೆದೊಯ್ದಿರುವ ಅನುಮಾನ ವ್ಯಕ್ತವಾಗಿದೆ. ಅವರು ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ನಗರದಲ್ಲಿ ಶುಕ್ರವಾರ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಯಾರಾದರೂ ಬಂದರೆ ಅದನ್ನು ‘ಆಪರೇಷನ್ ಕಮಲ’ ಎಂದು ಹೇಳುತ್ತಾರೆ. ಈಗ ನಡೆದಿರುವ ಬೆಳವಣಿಗೆಗೆ ಏನು ಹೇಳಬೇಕು? ಎಂದು ಪ್ರಶ್ನಿಸಿದರು.

1989ರಲ್ಲಿ 4 ಶಾಸಕರಿದ್ದ ಬಿಜೆಪಿ ಸಂಖ್ಯಾಬಲ ಈಗ ವಿಧಾನಸಭೆಯಲ್ಲಿ 104 ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಹಲವರು ಬಿಜೆಪಿಗೆ ಬಂದಿದ್ದಾರೆ. ಪಕ್ಷವನ್ನು ಬೆಳೆಸಿದ್ದಾರೆ. ಹಾಲು-ಸಕ್ಕರೆಯಂತೆ ಬೆರತು ಪಕ್ಷ ಸಂಘಟನೆಯಾಗಿದೆ. ಆ ನಂಬಿಕೆ ಮೇಲೆ ರಾಮನಗರದಲ್ಲಿ ಚಂದ್ರಶೇಖರ್​ಗೆ ಟಿಕೆಟ್ ನೀಡಲಾಗಿತ್ತು ಎಂದು ಸಮರ್ಥಿಸಿಕೊಂಡರು.

ಕುತಂತ್ರ ರಾಜಕಾರಣ ಮಾಡಿ ಚಂದ್ರಶೇಖರ್ ಬಿಜೆಪಿ ತೊರೆದಿದ್ದಾರೆ. ಇದು ನಮಗೆ ಪಾಠ. ಮುಂದೆ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನ ಈ ಘಟನೆಯನ್ನು ನೆನಪು ಮಾಡಿಕೊಳ್ಳುತ್ತೇವೆ ಎಂದರು.

ರಾಮನಗರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ರಾಜ್ಯಾಧ್ಯಕ್ಷರು ತೀರ್ವನಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

Leave a Reply

Your email address will not be published. Required fields are marked *