ಡಿಕೆಶಿ ಪ್ರವೇಶಕ್ಕೆ ಪಕ್ಷದಲ್ಲೇ ಬೇಸರ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣಕ್ಕೆ ಸಚಿವ ಡಿ.ಕೆ. ಶಿವಕುಮಾರ ಇಳಿಯುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಬೇಸರ, ಅಸಮಾಧಾನ ಕಾಣಿಸಿಕೊಂಡಿದೆ. ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಉಪ ಚುನಾವಣೆ ಕದನದಲ್ಲಿ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸೋಮವಾರ ಸಂಜೆ ನಗರಕ್ಕೆ ಆಗಮಿಸಿದ ಸಚಿವ ಡಿ.ಕೆ. ಶಿವಕುಮಾರ ಮಂಗಳವಾರ ಬೆಳಗ್ಗೆ ಕುಂದಗೋಳ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಈ ನಡುವೆ ಸೋಮವಾರ ಖಾಸಗಿ ಹೋಟೆಲ್​ನಲ್ಲಿ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದರು. ಇದರೊಂದಿಗೆ ಡಿಕೆಶಿ ಉಪ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಂತಾಗಿದೆ.

ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕುಸುಮಾವತಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿ ವಿರೋಧವಿತ್ತು. ಕಾಂಗ್ರೆಸ್ ಪಕ್ಷದ 6 ಜನ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು (ಬಳಿಕ ವಾಪಸ್ ಪಡೆದಿದ್ದಾರೆ) ಇದಕ್ಕೆ ಸಾಕ್ಷಿ. ಒಂದು ವೇಳೆ ಉಪ ಚುನಾವಣೆಯಲ್ಲಿ ಕುಸಮಾವತಿ ಗೆದ್ದು ಬಿಟ್ಟರೆ ಮುಂದೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂಬುದು ಇವರೆಲ್ಲರ ಅಳುಕು. ಹೇಗಾದರೂ ಮಾಡಿ ಕುಸುಮಾವತಿ ಅವರನ್ನು ಸೋಲಿಸಬೇಕೆಂದು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಡಿ.ಕೆ. ಶಿವಕುಮಾರ ಯಾಕೆ? : ಕಾಂಗ್ರೆಸ್ಸಿನ ಎಲ್ಲ ಮುಖಂಡರು ಕುಂದಗೋಳ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿ ಹಲವರು ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಕುರುಬ ಸಮಾಜದ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ಓಕೆ, ದಲಿತ ಸಮಾಜದ ಮತಗಳನ್ನು ಸೆಳೆಯಲು ಡಾ. ಪರಮೇಶ್ವರ ಇದ್ದಾರೆ. ಆದರೆ, ಡಿಕೆಶಿ ಯಾಕೆ ಎಂದು ಪ್ರಶ್ನಿಸುವಂತಾಗಿದೆ. ಡಿಕೆಶಿ ಒಕ್ಕಲಿಗ ಸಮಾಜಕ್ಕೆ ಸೇರಿದವರು. ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜದ ಮತಗಳಿಲ್ಲ. ಹೀಗಿರುವಾಗ ಡಿಕೆಶಿ ಅವರನ್ನು ಉತ್ತರ ಕರ್ನಾಟಕಕ್ಕೆ ಕರೆತಂದಿದ್ದು ಯಾಕೆ?. ಚುನಾವಣೆ ಕಣದಲ್ಲಿ ಡಿಕೆಶಿ ಎಲ್ಲವನ್ನು ಮ್ಯಾನೇಜ್ ಮಾಡುತ್ತಾರೆಂಬ ಖ್ಯಾತಿಯನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಹಣ-ಹೆಂಡ ಹಂಚುತ್ತಿದೆ ಎಂದು ಈಗಾಗಲೇ ಬಿಜೆಪಿ ಆರೋಪಿಸಿದೆ. ಈ ಮಧ್ಯೆ ಕುಂದಗೋಳ ಕ್ಷೇತ್ರದ ಸಂಪೂರ್ಣ ಉಸ್ತುವಾರಿ ವಿನಯ ಕುಲಕರ್ಣಿ, ಅಲ್ತಾಫ್ ಹಳ್ಳೂರ ಹಾಗೂ ಶಿವಳ್ಳಿ ಕುಟುಂಬದಿಂದ ತಪ್ಪಿ ಹೋಗಿದೆ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದ್ದರೆ, ಮುಂದಿನ ಟಿಕೆಟ್ ಆಕಾಂಕ್ಷಿಗಳ ಕೈಗೆ ವ್ಯವಹಾರದ ಉಸ್ತುವಾರಿ ದೊರೆತಿದೆ. ಇದರಿಂದ ಕಾಂಗ್ರೆಸ್ ಪಕ್ಷ ಮೂರು ಹೋಳಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ದ್ವಂದ್ವದಲ್ಲಿ ವಿನಯ ಕುಲಕರ್ಣಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಲಿಂಗಾಯತರೆಲ್ಲ ಒಟ್ಟಾಗಿ’ ಎಂದು ಹೇಳಿಕೊಂಡು ಮತ ಕೇಳಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಇದೀಗ ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಚುನಾವಣೆ ನಡೆದ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ವಿನಯ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಲಿಂಗಾಯತರೆಲ್ಲ ಒಂದಾಗಿ ಲಿಂಗಾಯತನಾದ ತಮ್ಮನ್ನು ಬೆಂಬಲಿಸಬೇಕು ಎಂದು ಅವರು ಹೋದಲೆಲ್ಲ ಮತ ಯಾಚಿಸುತ್ತಿದ್ದರು. ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಕಾರಣ ಅವರು ಜಿದ್ದಿಗೆ ಬಿದ್ದು ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಇದೀಗ ವಿಪರ್ಯಾಸ ನೋಡಿ, ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾವತಿ ಶಿವಳ್ಳಿ ಕುರುಬ ಸಮಾಜಕ್ಕೆ ಸೇರಿದವರು. ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಲಿಂಗಾಯತ ಪಂಚಮಸಾಲಿ. ಇದೀಗ, ಲಿಂಗಾಯತರನ್ನು ಬಿಟ್ಟು ಕುರುಬ ಸಮಾಜವನ್ನು ಬೆಂಬಲಿಸಿ ಎಂದು ವಿನಯ ಕುಲಕರ್ಣಿ ಕೇಳುತ್ತಿದ್ದಾರೆ. ಹಾಗಾದರೆ, ಲಿಂಗಾಯತರೆಲ್ಲ ಒಂದಾಗಿ ಎಂಬ ಮಂತ್ರ ಎಲ್ಲಿಗೆ ಹೋಯಿತು? ಎಂದು ಲಿಂಗಾಯತ-ವೀರಶೈವ ಪ್ರಮುಖರು ಕೇಳುತ್ತಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಒಂದಾಗಬೇಕಿತ್ತು. ಉಪ ಚುನಾವಣೆಯಲ್ಲಿ ಲಿಂಗಾಯತ ಅಭ್ಯರ್ಥಿಗೆ ಮತ ನೀಡಬೇಡಿ ಎಂಬುದು ಎಷ್ಟರಮಟ್ಟಿಗೆ ಸರಿ ಎಂದು ಕಾಂಗ್ರೆಸ್ಸಿಗರೇ ಪ್ರಶ್ನಿಸುತ್ತಿದ್ದಾರೆ.

ವಿನಯ ಕುಲಕರ್ಣಿ ಅವರ ದ್ವಂದ್ವ ನಿಲುವು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕುಂದಗೋಳ ಉಪ ಚುನಾವಣೆ ಪ್ರಚಾರದಲ್ಲಿ ವಿನಯ ಕುಲಕರ್ಣಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಲಿಂಗಾಯತ ಮುಖಂಡರ ಕಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬುದು ಒಂದು ಕಾರಣವೂ ಇರಬಹುದು.

Leave a Reply

Your email address will not be published. Required fields are marked *