ಡಿಎಫ್​ಒ ಕಚೇರಿ ಎದುರು ಪ್ರತಿಭಟನೆ

ಶಿರಸಿ: ಅರಣ್ಯವಾಸಿಗಳಿಗೆ ಇಲಾಖೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಅರಣ್ಯ ಅತಿಕ್ರಮಣದಾರರು ಡಿಎಫ್​ಒ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಮಾತನಾಡಿ, ‘ಅರಣ್ಯ ಹಕ್ಕು ಕಾಯ್ದೆಅಡಿ ಅರ್ಜಿ ಸಲ್ಲಿಸಿ ಸಾಗುವಳಿ ನಡೆಸುತ್ತಿರುವವರಿಗೆ ಇಲಾಖೆ ತೊಂದರೆ ನೀಡುತ್ತಿದೆ. ಕೆಲವೆಡೆ ಸಾಗುವಳಿ ಭೂಮಿಗೆ ತೆರಳುವ ದಾರಿಗೆ ಅಗಳ ಹೊಡೆಯಲಾಗಿದೆ’ ಎಂದು ಆಕ್ಷೇಪಿಸಿದರು. ವೇದಿಕೆಯ ಮನವಿಗೆ ಸ್ಪಂದಿಸಿದ ಡಿಎಫ್​ಒ ಎನ್.ಡಿ. ಸುದರ್ಶನ,‘ ಅರಣ್ಯಾಧಿಕಾರಿಗಳಿಂದ ಉಂಟಾ ಗುತ್ತಿರುವ ದೌರ್ಜನ್ಯ ಪ್ರಕರಣವನ್ನು ಪರಿಶೀಲಿಸಿ ಅರಣ್ಯವಾಸಿಗಳಿಗೆ ಸೂಕ್ತ ಕಾನೂನಾತ್ಮಕ ರಕ್ಷಣೆ ನೀಡುತ್ತೇವೆ’ ಎಂದು ಭರವಸೆ ನೀಡಿದರು. ಇಬ್ರಾಹಿಂ ನಬೀ ಸಾಬ ಸೈಯದ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಶಾಸ್ತ್ರಿ ಉಚಗೇರಿ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ರಾಜಶೇಖರ ಗೌಡ, ನೆಹರು ನಾಯ್ಕ, ತಿಮ್ಮಾ ಮರಾಠಿ, ಮಲ್ಲಿಕಾರ್ಜುನ ಓಣಿಕೇರಿ, ಗೌಸ್ ಖಾನ್ ಓಣಿಕೇರಿ, ಹಬೀಬ ಕಿರವತ್ತಿ ಇದ್ದರು.

ವಾಗ್ವಾದ: ಚರ್ಚೆಯ ಸಂದರ್ಭದಲ್ಲಿ ಅತಿಕ್ರಮಣದಾರರು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು ಅವರ ನಡುವೆ ಕಾನೂನು ಪರಿಪಾಲನೆ ವಿಷಯ ಮತ್ತು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿಗಳಿಗಿರುವ ಹಕ್ಕಿನ ಕುರಿತು ಕಾವೇರಿದ ಮಾತುಕತೆ ನಡೆಯಿತು. ಡಿಎಫ್​ಒ ಎನ್.ಡಿ. ಸುದರ್ಶನ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.