ಡಾ. ಬಾಬು ಜಗಜೀವನರಾಮ್ ಕಾರ್ಯ ಸ್ಮರಣೀಯ

ಹಾವೇರಿ:ಇಲ್ಲಿಯ ಜಿಲ್ಲಾಡಳಿತ ಸಭಾಭವನದಲ್ಲಿ ಶುಕ್ರವಾರ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 112ನೇ ಜನ್ಮ ದಿನ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾತನಾಡಿ, ಜಗಜೀವನರಾಮ್ ಅವರ ಸಾಮಾಜಿಕ ನ್ಯಾಯದ ಬಗೆಗಿನ ಕಾರ್ಯಗಳು ಅನುಕರಣೀಯ. ಸಮಾಜದ ಒಳಿತಿಗಾಗಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಸದ್ಯ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿರುವುದರಿಂದ ಸರಳವಾಗಿ ಜಯಂತಿ ಆಚರಿಸಲಾಗಿದೆ. ಚುನಾವಣೆ ನಂತರ ಡಾ. ಅಂಬೇಡ್ಕರ್ ಸೇರಿ ಇಬ್ಬರು ಮಹಾನ್ ನಾಯಕರ ಚಿಂತನೆಗಳನ್ನು ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಜಿ.ಪಂ. ಸಿಇಒ ಕೆ. ಲೀಲಾವತಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಚೈತ್ರಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಹಾನಗಲ್ಲ: ಭಾರತದ ಉಪಪ್ರಧಾನಿಯಾಗಿ, ಹಸಿರು ಕ್ರಾಂತಿಯ ಹರಿಕಾರರಾಗಿ, ರೈತರ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಗಳನ್ನು ಮುಂಚೂಣಿಗೆ ತಂದ ಬಾಬು ಜಗಜೀವನರಾಮ್ ಅವರಂಥ ನಾಯಕತ್ವದ ಅಗತ್ಯವಿದೆ ಎಂದು ತಹಸೀಲ್ದಾರ್ ಎಂ. ಗಂಗಪ್ಪ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಜಗಜೀವನರಾಮ್ ಅವರು ಹಿಂದುಳಿದ ವರ್ಗಗಳ ಜನತೆಯನ್ನು ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಿದವರು. ಕೃಷಿ ಕ್ಷೇತ್ರಕ್ಕೆ ಹೊಸತನವನ್ನು ನೀಡಿ, ರೈತರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸಿದ್ದರು ಎಂದರು. ತಾಪಂ ಮಾಜಿ ಅಧ್ಯಕ್ಷ ಚಂದ್ರಣ್ಣ ಹರಿಜನ ಮಾತನಾಡಿ, ಜಗಜೀವನರಾಮ್ ಅವರನ್ನು ಕೇವಲ ಹಿಂದುಳಿದ ವರ್ಗಕ್ಕೆ ಸೀಮಿತಗೊಳಿಸಲಾಗದು ಎಂದರು. ಸಮಾಜ ಕಲ್ಯಾಣಾಧಿಕಾರಿ ಜಿ.ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಮಹಾಜನ್, ತಾಲೂಕು ವೈದ್ಯಾಧಿಕಾರಿ ರವೀಂದ್ರಗೌಡ ಪಾಟೀಲ, ಮಾಲತೇಶ ರ್ಬಾ, ಶಿವಾನಂದ ಕ್ಯಾಲಕೊಂಡ, ವಿ. ಯಶೋಧರ ಇತರರು ಇದ್ದರು.