ಡಾ. ಬಂಟ್ ವಿರುದ್ಧದ ವಿಚಾರಣೆ ಕೈಬಿಟ್ಟ ಹೈಕೋರ್ಟ್

ಧಾರವಾಡ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್್ಸ)ಯ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಡಾ. ಎ.ಎನ್. ದತ್ತಾತ್ರಿ ಅವರಿಗೆ ಹಿಂಬಡ್ತಿ ಹಾಗೂ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ

ಕಿಮ್ಸ್​ನ ಅಂದಿನ ನಿರ್ದೇಶಕ ಡಾ. ಡಿ.ಡಿ. ಬಂಟ್ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಇಲ್ಲಿನ ಹೈಕೋರ್ಟ್ ಪೀಠ ಕೈಬಿಟ್ಟಿದೆ.

ಹುಬ್ಬಳ್ಳಿ ಕಿಮ್ಸ್​ನ ಫಾರ್ಮಕಾಲಜಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎ.ಎನ್. ದತ್ತಾತ್ರಿ ವಿರುದ್ಧ ಕೆಲ ಆರೋಪ ಕೇಳಿ ಬಂದಿದ್ದರಿಂದ ಸರ್ಕಾರ, ಅವರನ್ನು 2018ರ ಏ. 2ರಂದು ಚಾಮರಾಜನಗರಕ್ಕೆ ವರ್ಗಾವಣೆ ಆದೇಶ ಮಾಡಿತ್ತು. ಅದನ್ನು ಪ್ರಶ್ನಿಸಿ ಡಾ. ದತ್ತಾತ್ರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ, ಮಧ್ಯಂತರ ತಡೆಯಾಜ್ಞೆ ತಂದಿದ್ದರು. ಈ ಅರ್ಜಿ ವಿಚಾರಣೆ ಇನ್ನೂ ಬಾಕಿ ಇರುವಾಗಲೇ ನಿರ್ದೇಶಕ ಡಾ. ಬಂಟ್ ಅವರು, ಮುಖ್ಯಸ್ಥ ಸ್ಥಾನದಲ್ಲಿದ್ದ ಡಾ. ದತ್ತಾತ್ರಿಗೆ ಹಿಂಬಡ್ತಿ ನೀಡಿ ಜ. 2ರಂದು ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಡಾ.ದತ್ತಾತ್ರಿ ಹೈಕೋರ್ಟ್​ನಲ್ಲಿ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಪೀಠ, ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತ್ತು. ಆದರೂ ಡಾ. ದತ್ತಾತ್ರಿ ಅವರನ್ನು ಮತ್ತೊಮ್ಮೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಡಾ. ಬಂಟ್ ವಿರುದ್ಧ ಡಾ. ದತ್ತಾತ್ರಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಅದನ್ನು ನ್ಯಾ. ಅರವಿಂದಕುಮಾರ ಮತ್ತು ಎ.ಎಸ್. ಬೆಳ್ಳುಂಕೆ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ಮಾಡಿತು. ಈ ವೇಳೆ ಬಂಟ್ ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಬೇಷರತ್ ಕ್ಷಮೆ ಕೇಳಿ, ಪ್ರಮಾಣಪತ್ರ ಸಲ್ಲಿಸಿದರು. ಹೀಗಾಗಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ನ್ಯಾಯಪೀಠ ಕೈಬಿಟ್ಟಿತು. ಅರ್ಜಿದಾರರ ಪರ ವಕೀಲ ಅರವಿಂದ ಕುಲಕರ್ಣಿ ವಾದ ಮಂಡಿಸಿದರು.

ಮರು ವಿಚಾರಣೆಗೆ ಉಚ್ಚ ನ್ಯಾಯಾಲಯ ಸೂಚನೆ

ಧಾರವಾಡ: ನವಲಗುಂದ ತಾಲೂಕು ಶಿಕ್ಷಣ ಸಮಿತಿಯ ನೋಂದಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆ ಮಾಡುವಂತೆ ಹೈಕೋರ್ಟ್ ಪೀಠ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿದೆ.

ನವಲಗುಂದ ತಾಲೂಕು ಶಿಕ್ಷಣ (ನತಾಶಿ) ಸಮಿತಿ ಬಾಂಬೆ ಪಬ್ಲಿಕ್ ಟ್ರಸ್ಟ್ ಅಡಿ ನೋಂದಣಿಗೊಂಡಿತ್ತು. 2004ರಲ್ಲಿ ಸರ್ಕಾರ ಆದೇಶ ಹೊರಡಿಸಿ, ಬಾಂಬೆ ಪಬ್ಲಿಕ್ ಟ್ರಸ್ಟ್ ಅಡಿ ನೋಂದಾಯಿತ ಸಂಘ- ಸಂಸ್ಥೆಗಳು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಆದರೆ, 2018ರವರೆಗೂ ನತಾಶಿ ಸಮಿತಿಯವರು ಮರು ನೋಂದಣಿ ಮಾಡಿಸಿಕೊಂಡಿರಲಿಲ್ಲ. ಈ ಮಧ್ಯೆ ಸಂಸ್ಥೆಯವರು ಶಂಕರ ಮಹಾವಿದ್ಯಾಲಯಕ್ಕೆ ಶಿಕ್ಷಕ ಹಾಗೂ ಸಿಬ್ಬಂದಿ ನೇಮಕಕ್ಕೆ 2018ರ ಮೇ 21ರಂದು ಅಧಿಸೂಚನೆ ಹೊರಡಿಸಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರಾದ ಪರಶುರಾಮ ಹಕ್ಕರಕಿ ಎಂಬುವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ದೂರು ನೀಡಿ, ನತಾಶಿ ಸಮಿತಿ ಮರು ನೋಂದಣಿಯಾಗಿಲ್ಲದ್ದರಿಂದ ನೇಮಕಾತಿ ಪ್ರಕ್ರಿಯೆ ತಡೆಯುವಂತೆ ಮನವಿ ಮಾಡಿದ್ದರು. ಆಗ ಎಚ್ಚೆತ್ತುಕೊಂಡಿದ್ದ ಸಂಸ್ಥೆಯವರು ಜಿಲ್ಲಾ ನ್ಯಾಯಾಲಯದಿಂದ ಮರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಸಂಸ್ಥೆಯವರು ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಏಕಪಕ್ಷೀಯವಾಗಿ ತಮ್ಮ ಪರ ತೀರ್ಪು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ದೂರುದಾರ ಪರಶುರಾಮ ಹಕ್ಕರಕಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ಮಾಡಿದ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ಪೀಠ, ಸಂಸ್ಥೆಯವರು ಪ್ರಕರಣದಲ್ಲಿ ಮೇಲ್ನೋಟಕ್ಕೆ ಏಕಪಕ್ಷೀಯವಾಗಿ ತೀರ್ಪು ಪಡೆದಿರುವುದಾಗಿ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಿತು. ನಂತರ ಪ್ರಸ್ತುತ ಆಡಳಿತ ಮಂಡಳಿಯನ್ನು ಅನೂರ್ಜಿತಗೊಳಿಸಿ, ನೂತನ ನೋಂದಣಿ ಅರ್ಜಿಯನ್ನು ಮರು ವಿಚಾರಣೆ ಮಾಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತು. ಅರ್ಜಿದಾರರ ಪರ ವಕೀಲ ಉಮೇಶ ಹಕ್ಕರಕಿ ವಾದ ಮಂಡಿಸಿದರು.

Leave a Reply

Your email address will not be published. Required fields are marked *