ಕೆ.ಆರ್.ಪೇಟೆ: ವಿಧಾನ ಪರಿಷತ್ ಮಾಜಿ ಸದಸ್ಯ, ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾದ ಮಾಜಿ ಅಧ್ಯಕ್ಷ ಡಿ.ಎಸ್.ವೀರಯ್ಯ ಕಿಕ್ಕೇರಿ, ಸಿಂಧಘಟ್ಟ, ತೆಂಗಿನಘಟ್ಟ ಹಾಗೂ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ ಪರ ಬಿರುಸಿನ ಮತಪ್ರಚಾರ ನಡೆಸಿದರು.
ದಲಿತ ಬಂಧುಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ನೀಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ದುಡಿಯುತ್ತಿರುವ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿರುವ ಸಚಿವ ನಾರಾಯಣಗೌಡ ಅವರಿಗೆ ದಲಿತ ಬಂಧುಗಳು ತಮ್ಮ ಅಮೂಲ್ಯವಾದ ಮತ ನೀಡಿ ಅವರ ಗೆಲುವಿಗೆ ಸಹಕರಿಸಬೇಕು ಎಂದರು.
ತಾಲೂಕಿನ ಜನತೆಯ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಮತ್ತೊಮ್ಮೆ ನಾರಾಯಣಗೌಡ ಅವರನ್ನು ಶಾಸಕರನ್ನಾಗಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡುವ ಮೂಲಕ ಕೆ.ಆರ್.ಪೇಟೆ ತಾಲೂಕಿನ ರಾಜಕೀಯದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಬೇಕು. ದಲಿತ ಬಂದುಗಳ ಹಿತ ಕಡೆಗಣಿಸಿ ದಲಿತರನ್ನು ಜೀತಕ್ಕಿಟ್ಟುಕೊಳ್ಳುವ ಸಂಸ್ಕೃತಿ ಹೊಂದಿರುವ ಕಾಂಗ್ರೆಸ್ ಹಾಗೂ ದಲಿತ ವಿರೋಧಿ ಜೆಡಿಎಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ತಿಳಿಸಿದರು.
ದಲಿತ ನಾಯಕ ವೀರಯ್ಯ, ಸರಳ ಸಜ್ಜನ ರಾಜಕಾರಣಿಯಾಗಿ ಸರ್ವ ಧರ್ಮಗಳ ಜನರನ್ನೂ ಸಮಾನವಾಗಿ ಪ್ರೀತಿಸಿ ಗೌರವಿಸುವ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಭಾರೀ ಬಹುಮತಗಳಿಂದ ಗೆಲ್ಲಿಸಿಕೊಡಬೇಕು. ಸಾಮಾಜಿಕ ನ್ಯಾಯ ಗೆಲ್ಲಬೇಕು ಎಂದು ವೀರಯ್ಯ ಕೈಮುಗಿದು ಮನವಿ ಮಾಡಿದರು.
ಬಿಜೆಪಿ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ರವಿ ಶಿವಕುಮಾರ್, ದಲಿತ ಜಾಗೃತಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಕಮಲಾಕ್ಷಿ ನಾಗರಾಜು, ದಲಿತ ಮುಖಂಡರಾದ ಗಿರೀಶ್, ಬಾಲಕೃಷ್ಣ, ಮಹೇಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.