ಡಾ. ದೊಡ್ಡರಂಗೇಗೌಡರ ಕೃತಿ ಮಣ್ಣಿನ ಮಾತುಗಳು ಬಿಡುಗಡೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಂತರಾಳ ತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ ರಚಿಸಿರುವ ಮಣ್ಣಿನ ಮಾತುಗಳು ಕೃತಿ ಲೋಕಾರ್ಪಣೆ ಮಾಡಲಾಯಿತು.

ವಿಶ್ರಾಂತ ಕನ್ನಡ ಪ್ರಾಧ್ಯಾ ಪಕ ಪ್ರೊ. ಎಂ. ಎಚ್. ಕೃಷ್ಣಯ್ಯ ಮಾತನಾಡಿ, ಮಣ್ಣಿನ ಮಾತುಗಳ ಕೃತಿಯಲ್ಲಿರುವ ಚೌಪದಿಗಳು ಮುಕ್ತ ಅಭಿವ್ಯಕ್ತಿಯ ಸಂಕೇತವಾಗಿವೆ. ರೂಪಕ್ಕಿಂತ ವಿಷಯ ಕೇಂದ್ರಿತವಾಗಿವೆ ಎಂದು ಹೇಳಿದರು.

ಜೀವಮಾನದ ಬಹುಮುಖ್ಯ ಕಾಲಾವಧಿಯ ಚಿಂತನೆಗಳ ಪ್ರಾತಿನಿಧಿಕ ಚೌಪದಿಗಳು ಕೃತಿಯಲ್ಲಿವೆ ಎಂದು ಅವರು ಬಣ್ಣಿಸಿದರು.

ಮಣ್ಣಿನ ಮಾತುಗಳು ಆಡು ನುಡಿಯ ಲಯವನ್ನಾಧರಿಸಿವೆ. ನಂಜಿನ ಮನೆಯೊಳಗೆ, ನಂಜಿನ ನೆಲೆಯೊಳಗೆ ನಂಜುಂಡನಾಗು, ನಿದ್ರೆ ಮಾಡುವವನು ನಭವ ಮುಟ್ಟಿಯಾನೇ ಎಂಬಿತ್ಯಾದಿ ಚೌಪದಿಗಳ ಸಾಲುಗಳು ನಾಣ್ನುಡಿಗಳಂತೆ ಭಾಸವಾಗುತ್ತದೆ ಎಂದು ಹೇಳಿದರು.

ಜೀವನ ಚರಿತ್ರೆ, ಆತ್ಮಕಥೆಗಳ ಓದು ಮನಸ್ಸಿನ ಅಪೂರ್ಣತೆಯನ್ನು ಹೋಗ ಲಾಡಿಸಿ, ಒಳಸ್ತೋಮದ ಆಳದಲ್ಲಿ ಚಿಂತ ನಾಧಾರೆ ಹುಟ್ಟಿಸುತ್ತದೆ. ಅದೇ ರೀತಿ ಕೃತಿಯಲ್ಲಿ ರಚನೆಗೊಂಡಿರುವ ಚೌಪದಿ ಗಳು ಚಿಂತನಾ ವಿಧಾನದ ಬೆಳವಣಿಗೆ, ನೋವು-ನಲಿವಿಗೆ ಸ್ಪಂದಿಸುವ ಬಗೆಯ ಅರಿವನ್ನುಂಟು ಮಾಡುತ್ತದೆ ಎಂದರು.

ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕುರಿತು ನಿವೃತ್ತ ಜಿಲ್ಲಾಧಿಕಾರಿ ಡಾ. ಸೋಮಶೇಖರ್ ಮತ್ತು ದೊಡ್ಡರಂಗೇಗೌಡ ಸಾಹಿತ್ಯ ಕುರಿತು ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಬೈರಮಂಗಲ ರಾಮೇಗೌಡ ಮಾತನಾಡಿದರು. ಮ್ಯಾಂಡೋಲಿನ್ ಪ್ರಸಾದ್, ಅಂತರಾಳ ತಂಡದ ಅಧ್ಯಕ್ಷ ನಾಗರಾಜು, ನಿರ್ವಾಹಕ ರಾಜ ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಹಂತದಿಂದ ವಿವಿ ಮಟ್ಟದವರೆಗೂ ದಿನದಲ್ಲಿ ಕನಿಷ್ಠ 4 ಗಂಟೆಯವರೆಗೆ ವಿದ್ಯಾರ್ಥಿಗಳು ಮಣ್ಣಿನ ಸಂಸರ್ಗದಲ್ಲಿ ಮಿಳಿತಗೊಳ್ಳಬೇಕು.

| ಡಾ. ದೊಡ್ಡರಂಗೇಗೌಡ, ಹಿರಿಯ ಸಾಹಿತಿ

Leave a Reply

Your email address will not be published. Required fields are marked *