ಡಾ. ಉಮೇಶ್​ ಜಾಧವ ಒಬ್ಬರಿಗೇನಾ ಸ್ವಾಭಿಮಾನ ಇರೋದು?

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಡಾ. ಉಮೇಶ ಜಾಧವ ಅವರೊಬ್ಬರಿಗೇನಾ ಸ್ವಾಭಿಮಾನ ಇರೋದು ? ಉಳಿದವರಿಗೇನು ಇಲ್ವಾ?, ನಮ್ಮ ಸ್ವಾಭಿಮಾನಕ್ಕೂ ಧಕ್ಕೆ ಬರುವಂತೆ ಅವರು ಮಾತನಾಡಿಲ್ಲವೇನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಆಪರೇಷನ್ ಕಮಲಕ್ಕೆ ಬಲಿಯಾಗಿರುವುದು, ಬಿಜೆಪಿ ಜತೆಗೆ ವ್ಯವಹಾರ ಮಾಡಿಕೊಂಡಿರುವುದು ಇಡಿ ಜಿಲ್ಲೆಗೆ ಗೊತ್ತಿದೆ. ಆಪರೇಷನ್ ಕಮಲಕ್ಕೆ ಬಲಿಯಾಗದಿದ್ದರೆ ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಿದರು ಎಂಬುದು ಜನರ ಮುಂದೆ ಉತ್ತರಿಸಲಿ ಎಂದು ಸವಾಲು ಹಾಕಿದರು.

ನಾನು ಮಾಡಿರುವ ಆರೋಪಕ್ಕೆ ಅವರು ಕೇಸ್ ದಾಖಲಿಸಿದ್ರೆ, ನಾನು ಸಹ ಕೇಸ್ ದಚಾಖಲಿಸುತ್ತೇವೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರೋ ಹಾಗೆ ಅವರು ಸಹ ಮಾತನಾಡಿದ್ದಾರೆ. ಈ ಹೊತ್ತಿನಲ್ಲಿ ಆರೋಪ -ಪ್ರತ್ಯಾರೋಪ ಬಿಟ್ಟು ಕೇಸ್ ಮಾತಾಡಾದ್ರೆ ನಾವು ಸುಮ್ಮನಿರುತ್ತಿವಾ ಎಂದು ತಿರುಗೇಟು ನೀಡಿದರು.

ನನಗೆ ಚಿತ್ತಾಪುರ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಅಲ್ಲಿಂದ ಬಿಟ್ಟು ಬೇರೆ ಕಡೆಗೆ ಸ್ಪರ್ಧೆ ಮಾಡೋ ಮಾತೇ ಇಲ್ಲ. ಚಿಂಚೋಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸಿ ಗೆದ್ದು ತರುತ್ತೇವೆ. ಚಿಂಚೋಳಿ ಕಾಂಗ್ರೆಸ್ ಭದ್ರ ಕೋಟೆ ಎಂದು ಖರ್ಗೆ ಹೇಳಿದರು.

ಚಿಂಚೋಳಿಯಿಂದ ಪ್ರಚಾರ ಶುರು ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಿದ್ದೇವೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಚಾರವನ್ನು ಆರಂಭಿಸಲಿದ್ದೇವೆ ಎಂದು ಹೇಳಿದರು.

18 ರಂದು ಕಲಬುರಗಿಗೆ ರಾಹುಲ್​ ಗಾಂಧಿ

ಕಲಬುರಗಿ ನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಮಾ.18 ರಂದು ಆಗಮಿಸಲಿದ್ದಾರೆ. ಅವರು ಬಂದು ಇಲ್ಲಿ ಭಾಷಣ ಮಾಡಿ ಹೋದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ಬರಲಿದೆ. ಇದರಿಂದಾಗಿ ಕಾರ್ಯಕರ್ತರು ಹುರುಪುಗೊಳ್ಳಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಳೆದ ಸಲಕ್ಕಿಂತಲೂ ಈ ಸಲ ಮಲ್ಲಿಕಾರ್ಜುನ ಖರ್ಗೆಯವರು ಹೆಚ್ಚಿನ ಮತಗಳ ಅಂತದಿಂದ ಗೆಲವು ಸಾಧಿಸುತ್ತಾರೆ ಎಂದರು.