ಕೊಳ್ಳೇಗಾಲ: ಡಾ.ಅಂಬೇಡ್ಕರ್ ಭವನ ನಿರ್ಮಾಣ ತಡೆಗೆ ಗ್ರಾಮದಲ್ಲಿ ಅನ್ಯ ಸಮುದಾಯದ ಕೆಲವರು ಕಾರಣರಾಗಿದ್ದಾರೆ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ದಲಿತ ಮುಖಂಡರು ಅಲವತ್ತುಕೊಂಡರು.
ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಂದುಕೊರತೆಗಳ ಸಭೆಯಲ್ಲಿ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದ ನಂಜುಂಡಸ್ವಾಮಿ, ಗುರುಸಿದ್ದಯ್ಯ, ಸಿದ್ದರಾಜು, ಮಹದೇವಯ್ಯ, ಮಹದೇವು ಅವರು ಡಾ.ಅಂಬೇಡ್ಕರ್ ಭವನ ನಿರ್ಮಾಣ ಎದುರಾಗಿರುವ ತೊಡಕುಗಳನ್ನು ವಿವರಿಸಿ ಬೇಸರ ತೋಡಿಕೊಂಡರು.
ಆರು ವರ್ಷಗಳ ಹಿಂದೆ ಅಂದಿನ ಸಂಸದ ದಿ. ಧ್ರುವನಾರಾಯಣ ಅವರು ಡಾ.ಅಂಬೇಡ್ಕರ್ ಭವನ ನಿರ್ಮಿಸಲು ಅನುದಾನ ನೀಡಿದು,್ದ ಭವನದ ಕಟ್ಟಡ ನಿರ್ಮಾಣವಾಗಿದೆ. ಈ ಸ್ಥಳದಲ್ಲಿ ಭವನ ನಿರ್ಮಾಣ ಮಾಡಬೇಡಿ ಎಂದು ಬೇರೆ ಸಮುದಾಯದವರು ತಡೆವೊಡ್ಡುತ್ತಿದ್ದಾರೆ. ಈ ಪ್ರಕರಣವು ನ್ಯಾಯಾಲಯದಲ್ಲಿ ನಮ್ಮಂತೆ ಆದರೂ ಪೊಲೀಸರು ತೊಂದರೆ ನೀಡುತ್ತಾರೆ. ಹೀಗಾಗಿ ಭವನ ನಿರ್ಮಾಣ ಮಾಡಲು ನಮಗೆ ಅವಕಾಶ ಮಾಡಿಕೊಡಿ ಎಂದು ಡಿವೈಎಸ್‌ಪಿ ಅವರಲ್ಲಿ ಮನವಿ ಮಾಡಿಕೊಂಡರು.
ಮುಳ್ಳೂರು ಗ್ರಾಮದ ಮಂಜುನಾಥ್ ಮಾತನಾಡಿ, ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದವರಿಗೆ ಎಷ್ಟು ಅನುದಾನ ಬರುತ್ತದೆ. ಎಷ್ಟು ಅನುದಾನ ಖರ್ಚಾಗುತ್ತದೆ ಎಂಬುದರ ಬಗ್ಗೆ ಪ್ರತಿ ಇಲಾಖೆಯಲ್ಲಿ ಜನಾಂಗದವರ ಸಭೆ ಕರೆದು ಚರ್ಚಿಸಬೇಕು. ಕೈಗಾರಿಕೆ ಇಲಾಖೆಯಲ್ಲಿ ಜನಾಂಗದವರಿಗೆ ಸರ್ಕಾರದಿಂದ ಬರುವ ಸವಲತ್ತು ತಿಳಿಯುತ್ತಿಲ್ಲ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇಲಾಖೆಗಳಲ್ಲಿ ಸಭೆ ನಡೆಸುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.
ಪಟ್ಟಣದ ಶ್ರೀನಿವಾಸ್ ನಾಯಕ ಮಾತನಾಡಿ, ನಾಯಕರ ದೊಡ್ಡ ಬೀದಿಯಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಮದ್ಯ ಮಾರಾಟ ಆರಂಭಗೊಳ್ಳುತ್ತದೆ ಎಂದರು.
ಉಗನಿಯ ಗ್ರಾಮದ ಕುಮಾರ ಮಾತನಾಡಿ, ನಮ್ಮ ಗ್ರಾಮದಲ್ಲಿಯೂ ಸಹ ಅಕ್ರಮ ಮದ್ಯ ಮಾರಾಟದಿಂದ ಯುವಕರು ವ್ಯಸನಿ ಗಳಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ದೂರಿದರು. ಪಟ್ಟಣದ ಆನಂದಜ್ಯೋತಿ ಕಾಲನಿ ಶಿವಮಲ್ಲು ಮಾತನಾಡಿ, ಮುಖ್ಯ ರಸ್ತೆಯಿಂದ ಹರಳೆಕ್ಕೆ ತೆರಳುವ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ಮದ್ಯ ಮಾರಾಟ ನಡೆಯುತ್ತದೆ ಎಂದರು.
ಬಸ್ತೀಪುರ ಪ್ರಕಾಶ್ ಮಾತನಾಡಿ, ಸಭೆಯಲ್ಲಿ ಇರುವವರೆಲ್ಲರೂ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಹಲವು ಬಾರಿ ಈ ಹಿಂದೆ ಹೇಳಿದ್ದೇವೆ. ಯಾರು ಕ್ರಮ ಕೈಗೊಂಡಿಲ್ಲ ಎಂದು ನಮ್ಮ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಮತ್ತು ಗ್ರಾಮಾಂತರ ಪ್ರದೇಶದ ಬೀದಿಗೆ ಒಬ್ಬರನ್ನು ಬೀಟ್ ಪೊಲೀಸರಾಗಿ ನೇಮಕ ಮಾಡಿದ್ದೀರಿ, ಆ ಬೀಟ್ ಪೊಲೀಸರಿಗೆ ತಿಳಿಯುತ್ತದೆ. ಇಷ್ಟೆಲ್ಲ ತಿಳಿದಿದ್ದರೂ ಅಕ್ರಮ ಮದ್ಯ ಮಾರಾಟ ಮಾಡುವವರ ಬಗ್ಗೆ ಸಾಗಣೆ ಮಾಡುವವರ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಡಿವೈಎಸ್‌ಪಿ ಅವರಿಗೆ ಖಾರವಾಗಿ ಪ್ರಶ್ನಿಸಿದರು.
ದಿಲೀಪ್ ಸಿದ್ದಪ್ಪಾಜಿ ಮಾತನಾಡಿ ಎಸ್‌ಸಿ, ಎಸ್‌ಟಿ ಬೀದಿಗಳಲ್ಲಿ ಸಮಸ್ಯೆಗಳ ದೂರುಗಳನ್ನು ತಕ್ಷಣವೇ ಸ್ಪಂದಿಸಬೇಕು. ವೈ.ಕೆ.ಮೋಳೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ತೊಂದರೆ ನೀಡಿದರೆ ಕೊಳ್ಳೇಗಾಲ ತಾಲೂಕಿನವರು ಅಲ್ಲೇ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ದೂರುಗಳನ್ನು ಆಲಿಸಿದ ಬಳಿಕ ಡಿವೈಎಸ್‌ಪಿ ಧರ್ಮೇಂದ್ರ ಪ್ರತಿಕ್ರಿಯಿಸಿ, ನಮ್ಮ ಇಲಾಖೆಯಲ್ಲಿ ಇರುವ ದೂರುಗಳ ಬಗ್ಗೆ ಈಗಾಗಲೇ ನಾವು ಸ್ಪಂದಿಸಿ ಕೆಲಸ ಮಾಡುತ್ತಿದ್ದೇವೆ. ನಮ್ಮ ವಿಭಾಗದ ವ್ಯಾಪ್ತಿಯಲ್ಲಿ 21 ಗಾಂಜಾ ಕೇಸ್, ಅಕ್ರಮ ಮದ್ಯ ಮಾರಾಟದ 93 ಕೇಸ್, ಅಕ್ಕಿ ಸಾಗಣೆ 19, ದನಗಳಿಗೆ ಸಿಡಿ ಬಾಂಬ್ 7 ಕೇಸ್, 2024ರಲ್ಲಿ ಎಸ್‌ಸಿ, ಎಸ್‌ಟಿ ಜಾತಿ ನಿಂದನೆ 27 ಪ್ರಕರಣಗಳಲ್ಲಿ 4 ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿದ್ದು, 23 ಪ್ರಕರಣ ನ್ಯಾಯಾಲಯದಲ್ಲಿದೆ. 2025ರಲ್ಲಿ 11 ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆ ಕೈಜೋಡಿಸಿದರೆ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟ ಇನ್‌ಸ್ಪೆಕ್ಟರ್ ಜಗದೀಶ್, ಪಟ್ಟಣ ಪೊಲೀಸ್ ಠಾಣೆಯ ಎಸ್‌ಐ ವರ್ಷ ಇತರರು ಇದ್ದರು.