
ಹೂವಿನಹಡಗಲಿ: ನರೇಗಾ ದಿನಾಚರಣೆ ಹೆಸರಿನಲ್ಲಿ ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಂಡಿರುವ ತಾಪಂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲೂಕಿನ ಪ್ರಗತಿಪರ ಸಂಘಟನೆಗಳು ಶುಕ್ರವಾರ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಸಲೀಂ ಅವರಿಗೆ ಮನವಿ ಸಲ್ಲಿಸಿದವು.
ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಹಲಗಿ ಸುರೇಶ್ ಮಾತನಾಡಿ, ತಾಪಂನಲ್ಲಿ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಿಗೆ ಚಲನಚಿತ್ರ ಗೀತೆಗಳಿಗೆ ಮಹಿಳಾ ಸಿಬ್ಬಂದಿಯೊಂದಿಗೆ ಡಾನ್ಸ್ ಮಾಡಿಸಿರುವುದು ಖಂಡನೀಯ. ಈ ಮೂಲಕ ತಾಲೂಕಿನಲ್ಲಿ ಇಲಾಖೆಯ ಮರ್ಯಾದೆ ಹಾಳು ಮಾಡಿರುವ ಕೆಲಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ದಿನಾಚರಣೆ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಕಾರ್ಮಿಕರ ಬಗ್ಗೆ ಅರಿವು ಮೂಡಿಸುವ ಜಾನಪದ ಗೀತೆಗಳನ್ನು ಹಾಡಿ ಮನರಂಜನೆ ನೀಡಬೇಕಿತ್ತು. ಆದರೆ, ಸರ್ಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಡಾನ್ಸ್ ಮಾಡಲಾಗಿದೆ. ಇದಕ್ಕೆ ಅವಕಾಶ ನೀಡಿದ ತಾಪಂ ಇಒ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಹಾಗೂ ಅಸಭ್ಯವಾಗಿ ಡಾನ್ಸ್ ಮಾಡಿರುವ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲಗಿ ಸುರೇಶ್ ಒತ್ತಾಯಿಸಿದರು.
ಕರವೇ ತಾಲೂಕು ಅಧ್ಯಕ್ಷ ಮಹೆಬೂಬ್ ಸಾಬ್ ಮಾತನಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ದಲಿತ ಸೇನೆ ತಾಲೂಕು ಅಧ್ಯಕ್ಷ ದುರುಗೇಶ್, ಮಲ್ಲಿಗೆನಾಡು ಅಭಿವೃದ್ಧಿ ಸಂಘದ ವ್ಯವಸ್ಥಾಪಕ ದೇವೇಂದ್ರಪ್ಪ, ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಭರಮಪ್ಪ ಇತರರಿದ್ದರು.