ಡಾಂಬರು ಕಿತ್ತ ಗುತ್ತಿಗೆದಾರ!

ಕಾರವಾರ: ಕಾಂಕ್ರಿಟ್ ರಸ್ತೆ ಮಾಡುವುದಾಗಿ ಇದ್ದ ಡಾಂಬರು ರಸ್ತೆಯನ್ನೂ ಕಿತ್ತು ಹೋದ ಗುತ್ತಿಗೆದಾರರು ಒಂದು ವರ್ಷವಾದರೂ ಕಾಮಗಾರಿ ಮಾಡದ ಕಾರಣ ಗ್ರಾಮಸ್ಥರು ದಿನನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

ತಾಲೂಕಿನ ತೋಡೂರು ಗ್ರಾಮದ ಸಣ್ಣಮ್ಮ ದೇವಸ್ಥಾನದಿಂದ ಪಾಲೇಕರ್​ವಾಡಾವರೆಗೆ 450 ಮೀಟರ್ ರಸ್ತೆ ಕಾಮಗಾರಿ 2018 ರ ಫೆಬ್ರವರಿಯಿಂದ ನೆನೆಗುದಿಗೆ ಬಿದ್ದಿದೆ. ಹಾಲಿ ಇದ್ದ ಡಾಂಬರು ರಸ್ತೆಯನ್ನು ಆಗ ಅಗೆದು ಜಲ್ಲಿ ಕಡಿ ಹಾಕಿ ಹೋದ ಗುತ್ತಿಗೆದಾರರು ಮತ್ತೆ ಬಂದಿಲ್ಲ. ಇದರಿಂದ ಗ್ರಾಮಸ್ಥರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಬೈಕ್ ಸವಾರರು ಬಿದ್ದು, ಹಾನಿ ಮಾಡಿಕೊಂಡಿದ್ದಾರೆ.

25 ಲಕ್ಷ ರೂ. ಕಾಮಗಾರಿ: ಒಟ್ಟು 25 ಲಕ್ಷ ರೂ. ಯೋಜನೆ ಇದಾಗಿದೆ. ಲೋಕೋಪಯೋಗಿ ಇಲಾಖೆಯಿಂದ 2017 ರ ಅಂತ್ಯದಲ್ಲಿ ಹಣ ಬಿಡುಗಡೆಯಾಗಿತ್ತು. ಟೆಂಡರ್ ಕರೆದು ಕುಮಟಾದ ಅಮ್ಜದ್ ಅಲಿ ಎಂಬುವವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.

ಶೀಘ್ರ ರಸ್ತೆ ನಿರ್ಮಾಣ ಮಾಡಿಕೊಡದೇ ಇದ್ದಲ್ಲಿ ಪಿಡಬ್ಲ್ಯುಡಿ ಕಚೇರಿಯ ಎದುರು ಧರಣಿ ನಡೆಸುವುದಾಗಿ ಗ್ರಾಮಸ್ಥರಾದ ಉಮೇಶ ನಾಯ್ಕ, ರಾಮದಾಸ ನಾಯ್ಕ, ಮಹೇಶ ನಾಯ್ಕ ಇತರರು ಎಚ್ಚರಿಸಿದ್ದಾರೆ.

ಇದೇ ದಾರಿಯಲ್ಲಿ ಬಂಡಿ ಹಬ್ಬದ ದೇವರ ಪಲ್ಲಕ್ಕಿ ಹೋಗಬೇಕು. ಕಳೆದ ಬಾರಿ ಮಾರ್ಗ ಬದಲಿಸಿದೆವು. ಆದರೆ, ಮತ್ತೊಂದು ಬಂಡಿ ಹಬ್ಬ ಬಂದರೂ ಕಾಮಗಾರಿ ಮುಗಿದಿಲ್ಲ. ಗುತ್ತಿಗೆದಾರರ ಮನೆಗೆ ಹೋಗಿ ಕೈ ಮುಗಿದು ವಿನಂತಿಸಿದೆವು. ಪಿಡಬ್ಲ್ಯುಡಿ ಕಚೇರಿಗೆ ಓಡಾಡಿ ಸಾಕಾಗಿ ಹೋಗಿದೆ. | ಚಂದ್ರಕಾಂತ ಚಿಂಚಣಕರ್ ತೋಡೂರು ಗ್ರಾಪಂ ಉಪಾಧ್ಯಕ್ಷ

ತೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ 2 ರಸ್ತೆ ಕಾಮಗಾರಿಗಳು ಮರಳಿನ ಸಮಸ್ಯೆಯಿಂದ ವಿಳಂಬವಾಗಿತ್ತು. ಗುತ್ತಿಗೆದಾರರ ಟೆಂಡರ್ ಅವಧಿ ಮುಕ್ತಾಯವಾಗಿದೆ. ಅದನ್ನು ಎರಡನೇ ಬಾರಿ ವಿಸ್ತರಿಸಿ ಈಗ ಒಂದು ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನೊಂದು ಕಾಮಗಾರಿಯನ್ನು ಈ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. | ರಾಜೀವ ನಾಯ್ಕ ಪಿಡಬ್ಲ್ಯುಡಿ ಎಇಇ

Leave a Reply

Your email address will not be published. Required fields are marked *