More

  ಡಕೋಟಾ ಎಕ್ಸ್​ಪ್ರೆಸ್​ನಿಂದ ಪ್ರಯಾಣಿಕರು ಹೈರಾಣ

  ಸಿದ್ದಾಪುರ: ಮಾವಿನಗುಂಡಿಯಿಂದ ಸಿದ್ದಾಪುರ ಬಡಾಳ-ಕುಮಟಾ ಮಾರ್ಗವಾಗಿ ಜಿಲ್ಲಾ ಕೇಂದ್ರ ಕಾರವಾರಕ್ಕೆ ನಿತ್ಯ ಡಕೋಟಾ ಬಸ್ ಸಂಚರಿಸುತ್ತಿದ್ದು ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

  ಈ ಡಕೋಟಾ ಬಸ್ ಅನ್ನು ಬದಲಿಸಿ ಬೇರೆ ಬಸ್ ಬಿಡುವಂತೆ ಈಗಾಗಲೇ ಕಾರವಾರ ಡಿಪೋ ಅಧಿಕಾರಿಗಳಿಗೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ವಿನಂತಿಸಿಕೊಂಡರೂ ಪ್ರಯೋಜನ ಆಗಿಲ್ಲ.

  ಸಿದ್ದಾಪುರ ತಾಲೂಕು ಕೇಂದ್ರದಿಂದ ಕಾರವಾರಕ್ಕೆ ನಿತ್ಯ ಇದೊಂದೆ ಬಸ್ ಸಂಚರಿಸುವುದರಿಂದ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

  ಬಸ್ ಬಿಡುವ ಸಮಯ: ಕಾರವಾರದಿಂದ ನಿತ್ಯ ಮಧ್ಯಾಹ್ನ 2.15ಕ್ಕೆ ನಿರ್ಗಮಿಸುವ ಬಸ್ ಕುಮಟಾ-ಬಡಾಳ-ಸಿದ್ದಾಪುರ ಮಾರ್ಗವಾಗಿ ಮಾವಿನಗುಂಡಿಯಲ್ಲಿ ರಾತ್ರಿ ವಸ್ತಿ ಮಾಡುತ್ತದೆ. ಬೆಳಗ್ಗೆ 5.30ಕ್ಕೆ ಮಾವಿನಗುಂಡಿಯಿಂದ ಹೊರಟು ಕಾರವಾರಕ್ಕೆ ಮಧ್ಯಾಹ್ನ 11ಕ್ಕೆ ತಲುಪುತ್ತದೆ. ಆದರೆ, ಈ ಬಸ್ (ಕೆ.ಎ. 31.ಎಫ್ 1246) ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ದಿವಸ ಒಂದಲ್ಲ ಒಂದು ಕಾರಣದಿಂದ ಕೆಟ್ಟು ನಡುರಸ್ತೆಯಲ್ಲೇ ನಿಲ್ಲುತ್ತದೆ. ಇದರಿಂದ ವಿವಿಧ ಕೆಲಸಕ್ಕೆ ಜಿಲ್ಲಾ ಕೇಂದ್ರಕ್ಕೆ ಹೋಗುವ ಪ್ರಯಾಣಿಕರು ಸರಿಯಾದ ಸಮಯಕ್ಕೆ ತಲುಪಲಾಗದೇ ಪರಿತಪಿಸುವಂತಾಗಿದೆ.

  ತಿರುವುಗಳೇ ಹೆಚ್ಚು: ಸಿದ್ದಾಪುರ-ಬಡಾಳ-ಕುಮಟಾ ರಸ್ತೆಯಲ್ಲಿ ಅಪಾಯಕರ ತಿರುವುಗಳೇ ಹೆಚ್ಚಿವೆ. ಬಸ್ ಕೆಟ್ಟು ನಿಂತರೆ ಎದುರುಗಡೆಯಿಂದ ಬರುವ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತದೆ. ಪ್ರಯಾಣಿಕರ, ಚಾಲಕ ಹಾಗೂ ನಿರ್ವಾಹಕರ ಸುರಕ್ಷತೆ ದೃಷ್ಟಿಯಿಂದ ಈ ಡಕೋಟಾ ಬಸ್​ನಿಂದ ಅಪಾಯ ಸಂಭವಿಸುವ ಮುನ್ನ ಬಸ್ ಬದಲಿಸಬೇಕು ಎಂದು ಕ್ಯಾದಗಿ, ವಂದಾನೆ, ದೊಡ್ಮನೆ, ಬೀರ್ಲಮಕ್ಕಿ ಮತ್ತಿತರ ಭಾಗದ ಪ್ರಯಾಣಿಕರು ಆಗ್ರಹಿಸಿದ್ದಾರೆ.

  ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಿ ಬರುವುದೆಂದರೆ ಒಂದು ಸಾಹಸ ಮಾಡಿದಂತೆ.ಅದರಲ್ಲಿಯೂ ಬಸ್ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಜನ ಪರದಾಡುವಂತಾಗಿದೆ. ಈ ಕುರಿತು ಸಾರಿಗೆ ಅಧಿಕಾರಿಗಳಿಗೆ ಬಸ್ ಬದಲಿಸುವಂತೆ ವಿನಂತಿಸಿಕೊಂಡರೂ ಬದಲಿಸಿಲ್ಲ. | ದಿವಾಕರ ನಾಯ್ಕ ಹೆಮ್ಮನಬೈಲ್ ಸಿದ್ದಾಪುರ

  ಮಾವಿನಗುಂಡಿ-ಕಾರವಾರ ಬಸ್ ಕೆಟ್ಟು ನಿಲ್ಲುತ್ತಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ರ್ಚಚಿಸಿ ಬೇರೆ ಬಸ್ ವ್ಯವಸ್ಥೆ ಮಾಡಲಾಗುವುದು. | ವಿ.ಎಸ್. ಪಾಟೀಲ, ವಾಯವ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts