ಟ್ರ್ಯಾಕ್ಟರ್-ಬೈಕ್ ಡಿಕ್ಕಿ, ಯುವಕ ಸಾವು

ಚಡಚಣ: ಸಮೀಪದ ಜಿಗಜೇವಣಿ ಗ್ರಾಮದ ಹೊರವಲಯದ ಚಡಚಣ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರೇಲರಿನ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದು ಬುಧವಾರ ರಾತ್ರಿ ಬೈಕ್ ಸವಾರ ಮೃತಪಟ್ಟಿದ್ದಾನೆ.

ಚಡಚಣ ಪಟ್ಟಣದ ರಾಹುಲ್ ಭಜಂತ್ರಿ (19) ಮೃತ ದುರ್ದೈವಿ. ರಾಹುಲ್ ತನ್ನಿಬ್ಬರು ಸ್ನೇಹಿತರೊಂದಿಗೆ ವಿಜಯಪುರದಿಂದ ಇಂಚಗೇರಿ ಮಾರ್ಗವಾಗಿ ಚಡಚಣಕ್ಕೆ ಬರುತ್ತಿದ್ದಾಗ ಟ್ರ್ಯಾಕ್ಟರ್ ಟ್ರೇಲರ್​ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಬೈಕ್ ಹಿಂದೆ ಕುಳಿತಿದ್ದ ರಮೇಶ ದಿಡಗೊಂಡೆ ಹಾಗೂ ಶಂಕರ ಕೋಳಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.