ಟ್ರ್ಯಾಕ್ಟರ್ ಬೇಕೋ, ಟೈರ್ ಇರ್ಲೋ

ಹಾವೇರಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಚಿಹ್ನೆಗಳ ಆಯ್ಕೆಯಲ್ಲಿ ಆಯೋಗವು ಈ ಬಾರಿ ಡಬಲ್ ಧಮಾಕ ನೀಡಿದೆ…!

2014ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ 87 ಚಿಹ್ನೆಗಳನ್ನು ಗುರುತಿಸಲಾಗಿತ್ತು. ಆದರೆ, ಈ ಬಾರಿ 198 ಚಿಹ್ನೆಗಳನ್ನು ನೀಡಲಾಗಿದೆ.

ಈಗಾಗಲೇ ಚುನಾವಣಾಧಿಕಾರಿ ಕಚೇರಿಯ ಎದುರು ಪಕ್ಷೇತರ ಅಭ್ಯರ್ಥಿಗಳ ಚಿಹ್ನೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿಗಳು 198ರಲ್ಲಿ ಸೂಕ್ತ ಚಿಹ್ನೆಗಳ ಆಯ್ಕೆಗಾಗಿ ತಡಕಾಟ ನಡೆಸಿದ್ದಾರೆ. ಈ ಹುಡುಕಾಟವು ಕೆಲವರಿಗೆ ಮನರಂಜನೆಯಾಗಿಯೂ ಪರಿಣಮಿಸಿದೆ.

ಚಪ್ಪಲಿ ಬೇಕೋ, ಬ್ಯಾಟ್ ಬೇಕೋ, ಟ್ರ್ಯಾಕ್ಟರ್ ಇರ್ಲೋ, ಟೈರ್ ಇರ್ಲೋ, ಬ್ರಶ್ ಬೇಕೋ, ಪೇಸ್ಟ್ ಬೇಕೋ ಎಂದು ಪಕ್ಷೇತರ ಅಭ್ಯರ್ಥಿಗಳು ಅವರ ಸ್ನೇಹಿತರು ರ್ಚಚಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಪಕ್ಷೇತರರಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಜೊತೆಗೆ ಜನರಿಗೆ ಬಹುಬೇಗ ಗುರುತು ಸಿಗುವಂತಹ ಸೂಕ್ತ ಚಿಹ್ನೆಗಾಗಿ ಹುಡುಕಾಟ ನಡೆಸಿದ್ದಾರೆ. ಯಾವ ಚಿಹ್ನೆ ಇಟ್ಟುಕೊಂಡರೆ ಉತ್ತಮ ಎಂಬ ಬಗ್ಗೆ ಆಪ್ತರಲ್ಲಿ ಚರ್ಚೆ ನಡೆಸುತ್ತಿದ್ದು, ಇಂತಹುದೇ ಚಿಹ್ನೆ ಸಿಕ್ಕರೆ ಒಳ್ಳೆಯದು ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣಾ ಆಯೋಗ ಆಯ್ಕೆಗಾಗಿ ಇಟ್ಟಿರುವ ಚಿಹ್ನೆಗಳು ಭಾರಿ ಆಕರ್ಷಣೀಯ ಹಾಗೂ ಕುತೂಹಲಕಾರಿಯಾಗಿವೆ. ಹಲವರು ಚಿಹ್ನೆಗಳ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡು ನಾಮಪತ್ರ ಸಲ್ಲಿಕೆ ಸಮಯದಲ್ಲಿ ತಲೆಬಿಸಿ ಮಾಡಿಕೊಳ್ಳುತ್ತಿದ್ದಾರೆ.

ಚಿಹ್ನೆ ಆಯ್ಕೆಯೂ ತಲೆಬಿಸಿ: ಚುನಾವಣಾ ಆಯೋಗ ನೀಡಿರುವ 198 ಚಿಹ್ನೆಗಳಲ್ಲಿ ಸೂಕ್ತ ಚಿಹ್ನೆ ಆಯ್ಕೆ ಮಾಡುವುದೇ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿದೆ. ಊರುಗೋಲು, ತುತ್ತೂರಿ, ನಲ್ಲಿ, ಕಿಟಕಿ, ಕುಕ್ಕರ್, ಮಿಕ್ಸಿ, ರೇಡಿಯೋ, ಟಿವಿ, ಲ್ಯಾಂಪ್, ಬ್ಯಾಗ್, ಪೆನ್​ಸ್ಟ್ಯಾಂಡ್, ಫ್ರಿಜ್, ಉಂಗುರ, ಟೋಪಿ, ದ್ರಾಕ್ಷಿ, ಗ್ಯಾಸ್, ಕೊಳಲು, ವಿದ್ಯುತ್ ಕಂಬ, ಬಕೆಟ್, ಬಲೂನು, ಮೇಣದಬತ್ತಿ, ಗಾಜಿನ ಲೋಟ, ಕ್ಯಾಮರಾ, ಕೇಕ್, ಬ್ಯಾಟ್, ಡಿಶ್, ಇಸ್ತ್ರಿಪೆಟ್ಟಿಗೆ, ರಿಕ್ಷಾ, ಬೆಲ್ಟ್ ಹೀಗೆ ಹಲವಾರು ಚಿಹ್ನೆಗಳನ್ನು ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿಗಳ ಆಯ್ಕೆಗಾಗಿ ನೀಡಿದೆ. ದಿನಬಳಕೆಯ ವಸ್ತುಗಳು, ವಿದ್ಯುನ್ಮಾನ ಗೃಹೋಪಯೋಗಿ ವಸ್ತುಗಳು, ಹಣ್ಣು, ತರಕಾರಿಗಳನ್ನು ಚುನಾವಣಾ ಆಯೋಗ ಚಿಹ್ನೆಗಳಾಗಿ ಮಾಡಿಕೊಟ್ಟಿರುವುದರಿಂದ ಅಭ್ಯರ್ಥಿಗಳು ಯಾವುದೇ ಚಿಹ್ನೆ ಆಯ್ದುಕೊಂಡರೂ ಮತದಾರರು ಸರಳವಾಗಿ ಗುರುತಿಸುವಂತಿವೆ. ಆದರೂ ಯಾವುದನ್ನು ಪಡೆದರೆ ಸೂಕ್ತ ಎಂಬ ಗೊಂದಲದಲ್ಲಿ ಅಭ್ಯರ್ಥಿಗಳು ಬಿದ್ದಿದ್ದಾರೆ. ಅಭ್ಯರ್ಥಿಗಳು ತಮಗೆ ಯಾವ ಚಿಹ್ನೆ ಅರ್ಥಪೂರ್ಣ ಎಂಬುದರ ಬಗ್ಗೆಯೂ ಹೆಚ್ಚು ಆಲೋಚಿಸುತ್ತಿದ್ದಾರೆ.

ಅಪಾರ್ಥದ ಭಯವೂ ಇದೆ: ಬ್ರೀಪ್​ಕೇಸ್, ಮೆಣಸಿನಕಾಯಿ, ಚಪ್ಪಲಿ ಚಿಹ್ನೆ ಪಡೆದರೆ ಮತದಾರರು ತಮ್ಮ ಬಗ್ಗೆ ಬೇರೆ ಅರ್ಥ ಕಲ್ಪಿಸುವರೊ ಏನೋ, ಗಾಜಿನ ಲೋಟದ ಚಿಹ್ನೆ ಪಡೆದರೆ ಜನರು ತಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಾರೇನೋ, ಟೋಪಿ ಚಿಹ್ನೆ ಬಳಸಿಕೊಂಡರೆ ಮತದಾರರು ತಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಏನೋ ಎಂಬೆಲ್ಲ ಚಿಂತೆಯಲ್ಲಿ ಮುಳುಗಿದ್ದು ಯಾವುದೇ ಅರ್ಥ ಕಲ್ಪಿಸಿದರೂ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬಾರದ ರೀತಿಯ ಚಿಹ್ನೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಭ್ಯರ್ಥಿಗಳು ತಡಕಾಡುತ್ತಿದ್ದಾರೆ.

ನಾಮಪತ್ರ ಸಲ್ಲಿಸುವ ಅಭ್ಯರ್ಥಿ ತನ್ನ ನಾಮಪತ್ರದಲ್ಲಿ ಮೂರು ಚಿಹ್ನೆಗಳನ್ನು ಸೂಚಿಸಬಹುದಾಗಿದ್ದು, ಅಭ್ಯರ್ಥಿ ಸೂಚಿಸಿರುವ ಮೂರು ಚಿಹ್ನೆಗಳಲ್ಲಿ ಒಂದಕ್ಕೆ ಚುನಾವಣಾಧಿಕಾರಿಗಳು ಅನುಮತಿ ನೀಡುತ್ತಾರೆ.

ಜನಪ್ರಿಯ ಚಿಹ್ನೆಗಳಿಗೆ ಬೇಡಿಕೆ

ಆಟೋ, ನಲ್ಲಿ, ಗ್ಯಾಸ್, ಸ್ತ್ರಿಪೆಟ್ಟಿಗೆ, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ಸಿಸಿ ಕ್ಯಾಮರಾ, ವಿದ್ಯುತ್ ಕಂಬ ಸೇರಿ ಕೆಲ ಜನಪ್ರಿಯ ಚಿಹ್ನೆಗಳಿಗೆ ಹೆಚ್ಚು ಬೇಡಿಕೆಯಿದೆ. ಬಹುತೇಕ ಅಭ್ಯರ್ಥಿಗಳು ಈ ಚಿಹ್ನೆಗಳನ್ನೇ ಮೊದಲ ಆದ್ಯತೆ ಮೇಲೆ ತಮ್ಮ ನಾಮಪತ್ರದಲ್ಲಿ ನಮೂದಿಸುತ್ತಿದ್ದಾರೆ. ನಾಮಪತ್ರ ಹಿಂಪಡೆಯಲು ಇರುವ ಕೊನೆಯ ದಿನದ ಬಳಿಕ ಚುನಾವಣಾಧಿಕಾರಿಗಳು ಪರಿಶೀಲಿಸಿ ನೀಡುವ ಚಿಹ್ನೆಯೇ ಅಂತಿಮವಾಗಲಿದೆ.

ರಾಷ್ಟ್ರೀಯ 7, ರಾಜ್ಯ ಪಕ್ಷಗಳು 64

ಆಯೋಗವು ಕಾಂಗ್ರೆಸ್, ಬಿಜೆಪಿ, ತೃಣಮೂಲ ಕಾಂಗ್ರೆಸ್, ಬಿಎಸ್​ಪಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್​ಸಿಸ್ಟ್), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೆ ರಾಷ್ಟ್ರೀಯ ಪಕ್ಷಗಳ ಮಾನ್ಯತೆ ನೀಡಿದೆ. ಇನ್ನುಳಿದಂತೆ ಜೆಡಿಎಸ್ ಸೇರಿ 64 ಪಕ್ಷಗಳಿಗೆ ರಾಜ್ಯ ಪಕ್ಷಗಳ ಮಾನ್ಯತೆ ನೀಡಿದೆ.