ಟ್ಯಾಂಕರ್ ನೀರು ಪೂರೈಕೆ ಆರಂಭ

ಕುಮಟಾ: ತಾಲೂಕಿನ ಹೊಲನಗದ್ದೆಯ ಜನತಾಪ್ಲಾಟ್, ಮದ್ಗುಣಿ, ಬರ್ಗಿಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವುದರಿಂದ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಕಾರ್ಯ ಆರಂಭಿಸಿದೆ.

ತಾಲೂಕಿನ ಜನತಾಪ್ಲಾಟ್, ಮದ್ಗುಣಿ ಕೆಲವೆಡೆ ತುಂಬಾ ನೀರಿನ ಕೊರತೆ ಉಂಟಾಗಿದೆ. ಜನರು ಟ್ಯಾಂಕರ್ ನೀರಿನ ನಿರೀಕ್ಷೆಯಲ್ಲಿರುವ ಬಗ್ಗೆ ‘ವಿಜಯವಾಣಿ’ಯಲ್ಲಿ ಏ. 5ರಂದು ‘ಜೀವಜಲಕ್ಕೆ ಹಾಹಾಕಾರ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೂಡಲೇ ತಾಲೂಕಾಡಳಿತಕ್ಕೆ ಸೂಚನೆ ನೀಡಿ ಜನತಾಪ್ಲಾಟ್, ಮದ್ಗುಣಿ, ಬರ್ಗಿ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ವಿತರಿಸಲು ಸೂಚಿಸಿದೆ. ಅದರಂತೆ ಪ್ರತಿ ಮನೆಗೆ ಕನಿಷ್ಠ ತಲಾ 10 ಕೊಡಗಳಷ್ಟು ನೀರನ್ನು ಹಂಚುವ ಕಾರ್ಯ ಆರಂಭವಾಗಿದ್ದು, ಜನ ಸಂತಸಗೊಂಡಿದ್ದಾರೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡ ತಹಸೀಲ್ದಾರ್ ಕಾರ್ಯಾಲಯದ ಅಧಿಕಾರಿ ಅನಿಲ್, ‘ಜಿಲ್ಲಾಡಳಿತದ ಸೂಚನೆ ಮೇರೆಗೆ ಜನತಾಪ್ಲಾಟ್, ಮದ್ಗುಣಿ, ಬರ್ಗಿ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಜಿಲ್ಲಾಡಳಿತ ಸೂಚಿಸಿದರೆ ಬೇಡಿಕೆಗೆ ತಕ್ಕಂತೆ ಇನ್ನಷ್ಟು ಕಡೆಗಳಲ್ಲಿ ನೀರು ಪೂರೈಸಲಾಗುವುದು’ ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಘೊಷಣೆಯಾದ ನಂತರ ನೀರಿನ ಸಮಸ್ಯೆ ತೀವ್ರ ಇದ್ದರೂ ಟ್ಯಾಂಕರ್ ನೀರು ವಿತರಣೆ ಕಾರ್ಯ ನಡೆಯದೇ ಜನ ಪರದಾಡುವಂತಾಗಿತ್ತು. ಸದ್ಯ ಟ್ಯಾಂಕರ್ ಲಭಿಸುತ್ತಿರುವ ಪ್ರದೇಶದ ಜನ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಹಾಗೆಯೇ ತಾಲೂಕಿನಲ್ಲಿ ಪ್ರತಿವರ್ಷ ಟ್ಯಾಂಕರ್ ನೀರು ಪೂರೈಸುತ್ತಿದ್ದ ಎಲ್ಲ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ವಿತರಣೆ ಈಗಲೇ ಆರಂಭಿಸಿದರೆ ಹೆಚ್ಚು ಅನುಕೂಲ ಎಂಬ ಅಭಿಪ್ರಾಯ ನೀರಿನ ತುಟಾಗ್ರತೆ ಇರುವ ಪ್ರದೇಶಗಳ ಜನರಿಂದ ಕೇಳಿಬಂದಿದೆ.