ಟ್ಯಾಂಕರ್​ನಿಂದ ನೀರು ಪೂರೈಸಿ

ಸಿದ್ದಾಪುರ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಅಗತ್ಯವಿದ್ದಲ್ಲಿ ನೀರಿನ ಮೂಲಕ್ಕಾಗಿ ಖಾಸಗಿ ಕೆರೆ, ಬಾವಿಗಳನ್ನೂ ಬಳಸಬಹುದು ಎಂದು ಅಧಿಕಾರಿಗಳಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ತಾಪಂ ಸಭಾಭವನದಲ್ಲಿ ಕುಡಿಯುವ ನೀರು ಹಾಗೂ ಮಳೆಗಾಲದ ಪೂರ್ವ ತಯಾರಿ ಕುರಿತು ಸೋಮವಾರ ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಹಸೀಲ್ದಾರ್ ಗೀತಾ ಸಿ.ಜಿ ಮಾತನಾಡಿ, ‘ಬಿದ್ರಕಾನ, ಕಾವಂಚೂರು, ಕೊರ್ಲಕೈ, ಕ್ಯಾದಗಿ, ಬೇಡ್ಕಣಿ, ಕಾನಸೂರು, ದೊಡ್ಮನೆ, ಇಟಗಿ ಹಾಗೂ ಹಲಗೇರಿ ಗ್ರಾಪಂನ 26 ಮಜರೆ, 14 ಗ್ರಾಮಗಳಲ್ಲಿ ನೀರು ಪೂರೈಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. ಮಧ್ಯೆ ಪ್ರವೇಶಿಸಿದ ಕ್ಯಾದಗಿ ಗ್ರಾಪಂ ಅಧ್ಯಕ್ಷ ಎಸ್.ಆರ್. ನಾಯ್ಕ, ವಾಜಗೋಡ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ‘ಕ್ಯಾದಗಿ, ನಾಣಿಕಟ್ಟಾ, ವಾಜಗೋಡ ಭಾಗ ಸೇರಿ ಇನ್ನೂ ಕೆಲವೆಡೆ ನೀರಿನ ಅವಶ್ಯಕತೆಯಿದೆ’ ಎಂದರು. ಪ್ರತಿಕ್ರಿಯಿಸಿದ ಶಾಸಕರು ಆ ಭಾಗಗಳಿಗೆ ನೀರು ಪೂರೈಸಲು ತಹಸೀಲ್ದಾರರಿಗೆ ಸೂಚಿಸಿದರು.

‘ಕುಡಿಯುವ ನೀರು ಸರಬರಾಜು ಕುರಿತು ಇರುವ ಹಣ, ವ್ಯಯಿಸಿದ ಹಣ, ಮಾಡಬೇಕಾದ ಕಾಮಗಾರಿ ವಿವರವನ್ನು ಎಲ್ಲ ಗ್ರಾಪಂನವರು ಜೂ.10ರೊಳಗೆ ನೀಡಬೇಕು’ ಎಂದು ಶಾಸಕರು ತಿಳಿಸಿದರು.

‘ಬಿಸಿಯೂಟಕ್ಕೆ ನೀರಿಲ್ಲದ ಶಾಲೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ಬಿಸಿಯೂಟ ಸ್ಥಗಿತಗೊಳಿಸುವಂತಿಲ್ಲ’ ಎಂದು ಶಿಕ್ಷಣಾಧಿಕಾರಿ ವಿ.ಆರ್. ನಾಯಕ ಅವರಿಗೆ ಶಾಸಕರು ಸೂಚನೆ ನೀಡಿದರು.

ಪಪಂ ಮುಖ್ಯಾಧಿಕಾರಿ ಸತೀಶ ಗುಡ್ಡೆ ಮಾತನಾಡಿ, ‘ಪಪಂ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ತೊಂದರೆ ಉಂಟಾಗಿದೆ. ಅರೆಂದೂರು ನಾಲಾದಲ್ಲಿ ನೀರು ಸಂಪೂರ್ಣ ಬತ್ತಿದ್ದು, ಪಟ್ಟಣಕ್ಕೆ ನಿಯಮಿತವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಿದರು.

ಮಳೆಗಾಲದಲ್ಲಿ ವಿದ್ಯುತ್, ರಸ್ತೆ ವ್ಯವಸ್ಥೆ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸದಸ್ಯರಾದ ಎಂ.ಜಿ. ಹೆಗಡೆ ಗೆಜ್ಜೆ, ನಾಗರಾಜ ನಾಯ್ಕ ಬೇಡ್ಕಣಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಪಂ ಇಒ ದಿನೇಶ ಡಿ.ಇ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ಅನುದಾನ ಸದ್ಬಳಿಕೆಯಾಗಲಿ: ಕೊಳವೆಬಾವಿ ಇದ್ದ ಕಡೆ ಪೈಪ್​ಲೈನ್ ಅಳವಡಿಸಲು ಪಂಚಾಯಿತಿಯಲ್ಲಿ 1.50 ಲಕ್ಷ ರೂ. ಜಮಾ ಇದೆ. 14ನೇ ಹಣಕಾಸು ಯೋಜನೆಯಲ್ಲಿ ಮೂರು ಲಕ್ಷ ರೂ. ಸಂಗ್ರಹವಿದೆ ಅದನ್ನು ಸದುಯೋಗಪಡಿಸಿಕೊಳ್ಳಿ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು

Leave a Reply

Your email address will not be published. Required fields are marked *