ಕೋಲಾರ: ಏಷ್ಯಾದಲ್ಲೇ ೨ ನೇ ದೊಡ್ಡ ಟೊಮ್ಯಾಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಗೆ ಅಗತ್ಯ ಭೂಮಿ ಒದಗಿಸಲು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಮಡೇರಹಳ್ಳಿ ಬಳಿ ಗುರುತಿಸಿರುವ ಜಾಗದ ವಶಕ್ಕೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ದೊರಕಿಸಿಕೊಳ್ಳಲು ಸಂಸದ ಎಸ್.ಮುನಿಸ್ವಾಮಿ ಪ್ರಯತ್ನ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದು, ಅದೇ ಉದ್ದೇಶಕ್ಕೆ ಸಭೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಟೊಮ್ಯಾಟೊ ಮಾರುಕಟ್ಟೆ ನಿರ್ಮಾಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯ ಹಾಕುತ್ತಿದ್ದಾರೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಧ್ವನಿ ಎತ್ತಿದ್ದಾರೆ. ಅದಕ್ಕಾಗಿ ಹೊಸ ಜಾಗದ ಅಗತ್ಯವಿದೆ. ಈಗಿರುವ ಜಾಗ ಸಾಕಾಗುತ್ತಿಲ್ಲ, ಜತೆಗೆ ಹಲವಾರು ಸಮಸ್ಯೆಗಳಿವೆ. ಮಾರುಕಟ್ಟೆ ಫೆಡರೇಷನ್‌ಗೆ ಜಾಗ ಕೊಟ್ಟಿರುವುದು ಸಮಸ್ಯೆ ಆಗಿದ್ದು, ಅವರ ಸಹಕಾರವೂ ಅಗತ್ಯವಿದೆ. ಅವರ ಜತೆಯೂ ಮಾತನಾಡಲಾಗುವುದು ಎಂದರು.
ಮಡೇರಹಳ್ಳಿ ಬಳಿ ಅರಣ್ಯ ಇಲಾಖೆಯು ೩೭ ಎಕರೆ ಜಾಗದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲಿ ಹೆದ್ದಾರಿ ಬದಿಯಲ್ಲೇ ಮಾರುಕಟ್ಟೆ ನಿರ್ಮಾಣವಾಗುವುದರಿಂದ ಟೊಮ್ಯಾಟೊ ಜೊತೆ ಹೂವಿನ ಮಾರುಕಟ್ಟೆಗೂ ಸ್ಥಳಾವಕಾಶ ಒದಗಿಸಬಹುದು ಎಂದು ಹೇಳಿದರು.
ಮಾರುಕಟ್ಟೆಯ ತ್ಯಾಜ್ಯ ನಿರ್ವಹಣೆಗೆ ನಾವೇ ಜಾಗ ಕಂಡುಕೊಳ್ಳಬೇಕಿದೆ. ಎಪಿಎಂಸಿಯಲ್ಲಿ ಈ ವ್ಯವಸ್ಥೆಯನ್ನು ಒಂದೂ ಕಡೆ ಮಾಡಿಲ್ಲ. ನಾವೇ ನಿರ್ವಹಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಕಾರ್ಪೊರೇಷನ್, ನಗರಸಭೆ, ಪುರಸಭೆ ಮೇಲೆ ಈವರೆಗೆ ಅವಲಂಬಿತರಾಗಿದ್ದೆವು. ಅವರು ಕರ ವಸೂಲಿ ಮಾಡಿ ಸೌಲಭ್ಯ ಕೊಡುತ್ತಿರಲಿಲ್ಲ. ಇಲಾಖೆಗಳ ನಡುವೆ ಸಮನ್ವಯ ಕೊರತೆ ಇತ್ತು. ಈ ಸಂಬಂಧ ಸಹಾಯ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೇವೆ. ಆದಾಗ್ಯೂ ನಾವೇ ಘನ ತ್ಯಾಜ್ಯ ನಿರ್ವಹಣೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಜತೆಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೂ ಅವಕಾಶವಿದೆ ಎಂದು ನುಡಿದರು.
ಕೋಲಾರ ಟೊಮ್ಯಾಟೊ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಾರುಕಟ್ಟೆ ಇಲಾಖೆಯಿಂದ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬೆಂಗಳೂರಿನ ಯಶವಂತಪುರದ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲಾಗುವುದು. ಈ ಸಮಸ್ಯೆ ಬಗೆಹರಿದರೆ ವಹಿವಾಟಿಗೆ ದಾರಿ ಸುಗಮವಾಗುತ್ತದೆ. ಟ್ರಾಫಿಕ್ ಸಮಸ್ಯೆಗೂ ಆ ಮಾರ್ಗದಲ್ಲಿ ಪರಿಹಾರ ಸಿಕ್ಕಂತಾಗುತ್ತದೆ ಎಂದರು.
ಎಪಿಎಂಸಿ ಕಾಯ್ದೆ ರದ್ದು ಸಂಬಂಧಿತ ಪ್ರಶ್ನೆಗೆ, ವಿಧಾನಸಭೆಯಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದೆ. ವಿಧಾನ ಪರಿಷತ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಪ್ರತಿ ಪಕ್ಷದ ಸಹಕಾರ ಬೇಕಿದೆ. ವಿರೋಧ ಪಕ್ಷದವರು ವಿರೋಧಿಸುವುದು ಸಹಜ ಎಂದರು.
ಇನ್ನು ರಾಜ್ಯದ ಎಪಿಎಂಸಿಗಳಲ್ಲಿ ೧೫ ಸಾವಿರ ಕೋಟಿ ಆಸ್ತಿ ಇದೆ. ಆದರೆ, ಹಿಂದಿನ ಸರ್ಕಾರ ಜಾರಿ ಮಾಡಿದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ನಿರ್ವಹಣೆ ಕಷ್ಟವಾಗಿದೆ. ಎಂದು ಹೇಳಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ತ್ಯಾಜ್ಯ ವಿಲೇವಾರಿ ಸಂಬಂಧ ಈಗಾಗಲೇ ಕಂದಾಯ ಇಲಾಖೆಯಿಂದ ೧೦ ಎಕರೆ ಜಾಗ ನೀಡಲಾಗಿದೆ. ನಗರಸಭೆಯ ಕಸ ವಿಲೇವಾರಿಗೆ ಅರಾಭಿಕೊತ್ತನೂರು ಬಳಿ ೧೦ ಎಕರೆ ಜಾಗ ನಿಗದಿಪಡಿಸಲಾಗಿದೆ. ರಸ್ತೆ ಸಮಸ್ಯೆ ಇದ್ದು, ಅದೀಗ ಬಗೆಹರಿದಿದೆ. ಎಪಿಎಂಸಿಗೂ ಅಲ್ಲಿ ೧೦ ಎಕರೆ ಜಾಗ ನೀಡಲಾಗಿದೆ. ಸದ್ಯದಲ್ಲೇ ಹಸ್ತಾಂತರ ನಡೆಯಲಿದೆ’ ಎಂದರು.
ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಸಿಎಂಆರ್ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ್, ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಇದ್ದರು.
ಟೊಮ್ಯಾಟೊ ಮಾರುಕಟ್ಟೆಗೆ ಶೀಘ್ರ ಜಾಗ
ಕೋಲಾರ ಕೃಷಿ ಮಾರುಕಟ್ಟೆ ಸಂಆಂಗಣದಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಮಾತನಾಡಿದರು. ಸಂಸದ ಎಸ್.ಮುನಿಸ್ವಾಮಿ, ಎಂಎಲ್ಸಿ ಇಂಚರಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್ ಇತರರು ಇದ್ದರು.