ಕೋಲಾರ: ನಗರದ ಎಪಿಎಂಸಿಯಲ್ಲಿ ಟೊಮ್ಯಾಟೊ ಮಾತುಕಟ್ಟೆಗೆ ಸ್ಥಳದ ಅಭಾವವಿರುವುದರಿಂದ 50 ಎಕರೆ ಜಮೀನು ಮಂಜೂರು ಮಾಡಿ ಮಾರುಕಟ್ಟೆಗೆ ಮೂಲಸೌಲಭ್ಯ ಒದಗಿಸಲು ಒತ್ತಾಯಿಸಿ ರೈತ ಸಂಘದಿಂದ ಎಪಿಎಂಸಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೋಲಾರ ಎಪಿಎಂಸಿಯಲ್ಲಿ ಜಾಗದ ಕೊರತೆಯಿಂದ ಟೊಮ್ಯಾಟೊ ಬೆಳೆಗಾರರಿಗೆ ಹಾಗೂ ಖರೀದಿದಾರರಿಗೆ ತೊಂದರೆಯಾಗುತ್ತಿದೆ. ಅತಿ ಹೆಚ್ಚು ವಾಣಿಜ್ಯ ಬೆಳೆ ಬೆಳೆಯುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ ಮಾರುಕಟ್ಟೆ ವಿಸ್ತರಣೆ ಅತ್ಯಗತ್ಯವಾಗಿರುವುದರಿಂದ ಹೆಚ್ಚುವರಿ ಜಾಗ ಖರೀದಿ ಮಾಡಿ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಅನೇಕ ವರ್ಷಗಳಿಂದ ಮಾರುಕಟ್ಟೆ ವಿಸ್ತರಣೆ ಸಂಬಂಧ ಹೋರಾಟ ನಡೆಸಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ರೈತರಿಗೆ ಸಾಗಾಣಿಕೆ ಮತ್ತು ಮಾರುಕಟ್ಟೆ ದುಬಾರಿಯಾಗಿ ಪರಿಗಣಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಮಾರುಕಟ್ಟೆಗೆ 50 ಎಕರೆ ಜಮೀನು ಮಂಜೂರು ಮಾಡಿಕೊಟ್ಟು ಮುಂದಾಗುವ ಅನಾಹುತ ತಪ್ಪಿಸಬೇಕೆಂದು ಒತ್ತಾಯಿಸಿದರು. ಮಾರುಕಟ್ಟೆಯಲ್ಲಿ ಸಿಸಿ ಟಿವಿ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮಾರುಕಟ್ಟೆಯ ಶುಲ್ಕ ಪಾವತಿಸದ ಮಂಡಿ ಮಾಲೀಕರ ಪರವಾನಗಿ ರದ್ದು ಮಾಡಬೇಕು, ಎಲ್ಲ ಪರವಾನಗಿದಾರರು ಕಡ್ಡಾಯವಾಗಿ ಪರವಾನಗಿ ಸಂಖ್ಯೆಯನ್ನು ಅಂಗಡಿ ಮುಂದೆ ಬರೆಸಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್, ಮಾರುಕಟ್ಟೆ ಜಾಗದ ಕೊರತೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ. ಚೆಲುವನಹಳ್ಳಿ ವಕ್ಕಲೇರಿ ಬಳಿ ಜಾಗ ಗುರುತಿಸಲಾಗಿದೆ. ಇದು ಅರಣ್ಯ ಇಲಾಖೆಗೆ ಸೇರುವ ಜಾಗವಾಗಿರುವುದರಿಂದ ಕಾನೂನಿನ ಪ್ರಕಾರ ವಶಪಡಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಪ್ರಮುಖರಾದ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ನಾಗೇಶ್, ಆಶ್ವತಪ್ಪ, ನಾರಾಯಣಸ್ವಾಮಿ, ಪುರುಷೋತ್ತಮ್ ಎಂ.ಹೊಸಹಳ್ಳಿ ಚಂದ್ರಪ್ಪ, ಕೆಂಬೋಡಿ ಕೃಷ್ಣೇಗೌಡ, ಪುತ್ತೇರಿ ರಾಜು, ಬೇತಮಂಗಲ ಮಂಜು, ನವೀನ್, ವೆಂಕಟೇಶಪ್ಪ ಭಾಗಹಿಸಿದ್ದರು.
ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ನಿರ್ಲಕ್ಷ್ಯ ಮಾಡುತ್ತಿರುವ ಟೆಂಡರ್ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 3 ವರ್ಷಗಳಿಂದ ಶುಲ್ಕ ಪಾವತಿಸದ ಪರವಾನಗಿದಾರರ ವಿರುದ್ಧ ಕ್ರಮ ಕೈಗೊಂಡು ಮಾರುಕಟ್ಟೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
| ರವಿಕುಮಾರ್, ಎಪಿಎಂಸಿ ಸಹಾಯಕ ಕಾರ್ಯದರ್ಶಿ